ADVERTISEMENT

ತ್ರಿವಳಿ ತಲಾಖ್‌ಗೆ ಪ್ರಜ್ಞಾವಂತರ ಒಪ್ಪಿಗೆ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಮೇ 2017, 4:25 IST
Last Updated 20 ಮೇ 2017, 4:25 IST
ತ್ರಿವಳಿ ತಲಾಖ್‌ಗೆ ಪ್ರಜ್ಞಾವಂತರ ಒಪ್ಪಿಗೆ ಇಲ್ಲ
ತ್ರಿವಳಿ ತಲಾಖ್‌ಗೆ ಪ್ರಜ್ಞಾವಂತರ ಒಪ್ಪಿಗೆ ಇಲ್ಲ   

ಮಂಗಳೂರು: ತ್ರಿವಳಿ ತಲಾಖ್‌ನ ಬಗ್ಗೆ ಕುರಾನ್‌ನಲ್ಲಿ ಪ್ರಸ್ತಾಪವೇ ಇಲ್ಲ. ಇದು ಬಹುತೇಕ ಪ್ರಜ್ಞಾವಂತರಿಗೆ ಒಪ್ಪಿಗೆ ಇಲ್ಲ. ಇದನ್ನು ನಿಲ್ಲಿಸಬೇಕು ಎಂಬ ಆಶಯ ಪ್ರತಿ ಹೆಣ್ಣು ಹೆತ್ತ ಪಾಲಕರದ್ದಾಗಿದೆ ಎಂದು ಹಿರಿಯ ಸಾಹಿತಿ ಬೊಳುವಾರು ಮುಹಮ್ಮದ್‌ ಕುಂಞಿ ಹೇಳಿದರು.

ಮುಸ್ಲಿಂ ಲೇಖಕರ ಸಂಘದ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಯು.ಟಿ. ಫರೀದ್‌ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಹಿರಿಯ ಮುಸ್ಲಿಂ ಸಾಹಿತಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ತ್ರಿವಳಿ ತಲಾಖ್‌ನ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಏನೂ ಮಾಡಲು ಸಾಧ್ಯವಿಲ್ಲ. ಇದಕ್ಕೆ ಕಾನೂನು ರೂಪಿಸಬೇಕಿರುವುದು ಕೇಂದ್ರ ಸರ್ಕಾರ ಎಂದ ಅವರು, ಕುರಾನ್‌ನಲ್ಲಿ ಇಲ್ಲದ ತ್ರಿವಳಿ ತಲಾಖ್‌ ಅನ್ನು ವಿರೋಧಿಸುವುದಾಗಿ ಹಾಗೂ ಇದನ್ನು ನಿಲ್ಲಿಸಲು ಒತ್ತಾಯಿಸುವುದಾಗಿ ಮುಸ್ಲಿಂ ಲೇಖಕರ ಸಂಘ ನಿರ್ಣಯ ಅಂಗೀಕರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆಗಳನ್ನು ನೀಡಿದವರು ಬ್ಯಾರಿಗಳು. ಆದರೆ, ಇತ್ತೀಚಿನ ದಿನಗಳಲ್ಲಿ ಅದೂ ನಿಂತು ಹೋಗಿದೆ. ಇದು ಸರಿಯಲ್ಲ. ಸಮುದಾಯದಲ್ಲಿನ ಅಪನಂಬಿಕೆಗಳನ್ನು ಅಳಿಸುವ ಸಾಹಿತ್ಯವನ್ನು ಬರೆಯಿರಿ ಎಂದು ಹೇಳಿದರು.

(ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮುಸ್ಲಿಂ ಲೇಖಕರ ಸಂಘದ ವತಿಯಿಂದ ಹಿರಿಯ ಸಾಹಿತಿ ಬೊಳುವಾರು ಮುಹಮ್ಮದ್‌ ಕುಂಞಿ ಅವರಿಗೆ ‘ಹಿರಿಯ ಮುಸ್ಲಿಂ ಸಾಹಿತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಜಾವಾಣಿ ಚಿತ್ರ)

‘ಅಮ್ಮ ಹಚ್ಚಿದ ಒಲೆ’ ಕೃತಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ ಬಿ.ಎಂ. ಬಶೀರ್‌ ಮಾತನಾಡಿ, ಸೌಹಾರ್ದ ಎಂಬುದು ಕಾಡಿನಂತಾಗಿದೆ. ಕಾಡು ನಾಶವಾಗುತ್ತಿದೆ. ಸೌಹಾರ್ದದ ಕುಂಡಗಳು ನಮ್ಮ ಕಾಂಪೌಂಡ್‌ನಲ್ಲಿ ಬೆಳೆಯುತ್ತಿವೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಎಲ್ಲ ವರ್ಗದವರು ಒಟ್ಟಾಗಿ, ಬೆರೆತು ಬದುಕಿದಾಗ ಮಾತ್ರ ನಿಜವಾದ ಸೌಹಾರ್ದ ನಿರ್ಮಾಣವಾಗಲಿದೆ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಸಚಿವ ಯು.ಟಿ. ಖಾದರ್‌, ಸಾಹಿತ್ಯಕ್ಕೆ ತನ್ನದೇ ಆದ ಶಕ್ತಿ ಇದೆ. ಸಮಾಜದಲ್ಲಿ ಸೌಹಾರ್ದದ ವಾತಾವರಣ ನಿರ್ಮಾಣ ಮಾಡುವಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾಗಿದೆ ಎಂದು ಅಭಿಪ್ರಾಯಪಟ್ಟರು.

ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುವ ನಮ್ಮ ಯುವಜನಾಂಗ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ಮೂಲಕ ತಾಳ್ಮೆ, ಸಂಯಮದಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೆಹಲಿ ಜೆಎನ್‌ಯು ಕನ್ನಡ ವಿಭಾಗ ಮುಖ್ಯಸ್ಥ ಡಾ. ಪುರುಷೋತ್ತಮ ಬಿಳಿಮಲೆ ಅವರು, ‘ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ವಿಷಯವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಉಮರ್‌ ಯು.ಎಚ್‌. ಅಧ್ಯಕ್ಷತೆ ವಹಿಸಿದ್ದರು.

ಸದೀದ್‌ ಅಹ್ಮದ್‌ ಕಿರಾ ಅತ್‌ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಶೌಕತ್‌ ಅಲಿ, ಸ್ವಾಗತಿಸಿದರು. ಬಿ.ಎ. ಮುಹಮ್ಮದ್‌ ಅಲಿ ನಿರೂಪಿಸಿದರು.

**

ಪರಸ್ಪರ ದೂಷಣೆಯಿಂದ ಬದುಕು ರೂಪಿತವಾಗುವುದಿಲ್ಲ. ಅಪನಂಬಿಕೆಗಳನ್ನು ತಿದ್ದಿ, ಸಾಮರಸ್ಯದ ಬದುಕನ್ನು ಅಳವಡಿಸಿಕೊಳ್ಳಲು ಸಾಹಿತ್ಯ ಪ್ರೇರಣೆ ಆಗಬೇಕು.
-ಬೊಳುವಾರು ಮುಹಮ್ಮದ್‌ ಕುಂಞಿ,
ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.