ADVERTISEMENT

ದಾಸರ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 8:58 IST
Last Updated 7 ನವೆಂಬರ್ 2017, 8:58 IST

ಮಂಗಳೂರು: ‘ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಪರಿ ವರ್ತನೆಗೆ ಶ್ರಮಿಸಿದ ಮಹಾನ್‌ ವ್ಯಕ್ತಿ. ಅವರ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ’ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾ ವಳಿ ಕುರುಬರ ಸಂಘಗಳ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಆಯೋ ಜಿಸಿದ್ದ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ, ಸಂತರಾಗಿ ಕನಕದಾಸರು, ಸಾಮಾಜಿಕ ಚಿಂತನೆಯನ್ನು ಬಿತ್ತಿದ್ದಾರೆ. ಸಮಾನತೆಯ ಸಂದೇಶವನ್ನು ಸಾರಿ ದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕನಕ ದಾಸರ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

ADVERTISEMENT

ಕನಕದಾಸರ ಭಕ್ತಿ ಅಪಾರವಾಗಿತ್ತು. ಅವರ ಭಕ್ತಿಗೆ ಮೆಚ್ಚಿದ ಉಡುಪಿಯ ಶ್ರೀಕೃಷ್ಣನೇ ಹಿಂದಕ್ಕೆ ತಿರುಗಿ, ಕನಕ ದಾಸರಿಗೆ ದರ್ಶನ ನೀಡಿದ್ದಾನೆ. ಈಗಲೂ ಅದು ಕನಕನ ಕಿಂಡಿ ಎಂದೇ ಪ್ರಸಿದ್ಧ ವಾಗಿದೆ. ಅದಕ್ಕಾಗಿಯೇ ಕನಕದಾಸರನ್ನು ಭಕ್ತ ಶ್ರೇಷ್ಠ ಕನಕದಾಸರು ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮಹೇಶ ಚಟ್ನಳ್ಳಿ, ಕನಕದಾಸರ ಚಿಂತನೆಗಳನ್ನು ಜೀವನದಲ್ಲಿ ಅಳವಡಿ ಸಿಕೊಳ್ಳುವುದೇ ಅವರಿಗೆ ನೀಡುವ ನಿಜವಾದ ಗೌರವ. ಕನಕದಾಸರು ಸರಳ ಭಾಷೆಯಲ್ಲಿಯೇ ಸಾಮಾಜಿಕ ಚಿಂತನೆಗಳನ್ನು ಬಿತ್ತಿದ್ದಾರೆ. ಅವರ ಸಾಹಿತ್ಯ ಸಮಾಜಕ್ಕೆ ಒಂದು ಮಾರ್ಗ ದರ್ಶಿಯಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಕನಕ ದಾಸರ ವೇಷಧಾರಿಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು. ಕಲಶಗಳೊಂದಿಗೆ ಮಹಿಳೆಯರು, ವಿವಿಧ ಕಲಾತಂಡಗಳ ಸದಸ್ಯರು, ಕರಾ ವಳಿ ಕುರುಬರ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶೈಕ್ಷಣಿಕ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಶಾಸಕಿ ಶಕುಂತಳಾ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಪಾಲಿಕೆ ಆಯುಕ್ತ ಎಂ.ಮುಹಮ್ಮದ್‌ ನಜೀರ್‌, ಕರಾವಳಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.