ADVERTISEMENT

ನೆಲ್ಯಾಡಿ: ಮದ್ಯದ ಅಂಗಡಿ ತೆರವಿಗೆ ಆಗ್ರಹ ಆಗಸ್ಟ್ 2ರಂದು ನೆಲ್ಯಾಡಿ ಬಂದ್‌ಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 7:04 IST
Last Updated 27 ಜುಲೈ 2017, 7:04 IST

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿಯ ಬಳಿ ಮದ್ಯದಂಗಡಿ ಬಂದ್ ಮಾಡುವಂತೆ ಸುಪ್ರೀಂಕೋರ್ಟ್‌ ಆದೇಶವಿದ್ದರೂ  ಹಿಂಬಾಗಿಲ ಮೂಲಕ ವ್ಯಾಪಾರ ನಡೆಸುತ್ತಿರುವ ನೆಲ್ಯಾಡಿಯ ಕ್ಲಾಸಿಕ್ ಬಾರ್ ತೆರವುಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ ಹಾಗೂ ವಿವಿಧ ಸಂಘಟನೆಗಳ ನೆರವಿನೊಂದಿಗೆ ಆಗಸ್ಟ್ 2ರಂದು ನೆಲ್ಯಾಡಿ ಪೇಟೆ ಬಂದ್, ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

‘ನೆಲ್ಯಾಡಿಯಲ್ಲಿ ಮದ್ಯದಂಗಡಿ ತೆರವುಗೊಳಿಸುವ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲು ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ದೇಶದೆಲ್ಲೆಡೆ ಮದ್ಯದಂಗಡಿಗಳನ್ನು ಬಂದ್‌ ಮಾಡಿಸಲಾಗಿದೆ. ಆದರೆ ನೆಲ್ಯಾಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಕ್ಲಾಸಿಕ್ ಬಾರ್ ಮುಂದಿನ ಬಾಗಿಲು ಮುಚ್ಚಿ ಹಿಂಬಾಗಿಲಿನ ಮೂಲಕ ವ್ಯಾಪಾರ ನಡೆಸುತ್ತಿದೆ’ ಎಂದು ನೇತೃತ್ವ ವಹಿಸಿದ್ದ ಮುಖಂಡರು ಆರೋಪಿಸಿದರು.

ಮದ್ಯದ ಅಂಗಡಿಗೆ ಬರಲು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಮಂದಿರದ ಮೂಲಕ ಅಡ್ಡದಾರಿ ನಿರ್ಮಿಸಿದ್ದು, ಈ ದಾರಿಯಲ್ಲಿ ಬರುವ ಪರಿಸರದ ಮಹಿಳೆಯರು ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ.  ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಅಬಕಾರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ADVERTISEMENT

ಈ ಹಿನ್ನೆಲೆಯಲ್ಲಿ ಮದ್ಯದಂಗಡಿ ತೆರೆವುಗೊಳಿಸುವಂತೆ ಒತ್ತಾಯಿಸಿ ನೆಲ್ಯಾಡಿ ಪೇಟೆ ಬಂದ್ ಮಾಡಿ, ಮೆರವಣಿಗೆ, ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರತಿಭಟನೆಗೆ ತಕ್ಷಣ ಸ್ಪಂದಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಣಯ ಅಂಗೀಕರಿಸಲಾಯಿತು.

ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಧರ್ಣಪ್ಪ ಗೌಡ, ಗ್ರಾಮ ಪಂಚಾಯಿತಿ ಸದಸ್ಯ ಅಬ್ರಕಾಂ, ಕೆಡಿಪಿ ಸದಸ್ಯ ಇಸ್ಮಾಯಿಲ್ ನೆಲ್ಯಾಡಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಜೇಮ್ಸ್, ಸೆಬಾಸ್ಟಿಯನ್, ತುಕಾರಾಮ ರೈ, ವಿಜಯ, ಹನೀಫ್, ಜಯೇಶ್  ಇದ್ದರು. ಜನಜಾಗೃತಿ ವೇದಿಕೆಯ ಗಂಗಾಧರ ಶೆಟ್ಟಿ ಸ್ವಾಗತಿಸಿ, ನೇಮಿರಾಜ್ ಕಲಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.