ADVERTISEMENT

ಪಕ್ಷೇತರರಾಗಿ ಸತ್ಯಜಿತ್ ಸ್ಪರ್ಧೆ: ಅಭಿಮಾನಿ ಸಭೆಯಲ್ಲಿ ತೀರ್ಮಾನ

ನಿರ್ಧಾರ ಪ್ರಕಟಿಸಲು ಮುಖಂಡರಿಗೆ ಗಡುವು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 11:06 IST
Last Updated 23 ಏಪ್ರಿಲ್ 2018, 11:06 IST

ಸುರತ್ಕಲ್: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿರುವುದನ್ನು ಖಂಡಿಸಿ ಸತ್ಯಜಿತ್ ಅಭಿಮಾನಿಗಳು ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸಭೆ ನಡೆಸಿದ್ದು, ಪಕ್ಷೇತರರಾಗಿ ಸತ್ಯಜಿತ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.

ಇಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಟಿಕೆಟ್ ನಿರಾಕರಿಸಿರುವ ಬಿಜೆಪಿ, ಕನಿಷ್ಠ ಜಿಲ್ಲಾಧ್ಯಕ್ಷ ಸ್ಥಾನವನ್ನಾದರೂ ನೀಡಬೇಕು. ಈ ಬಗ್ಗೆ ಸೋಮವಾರದೊಳಗೆ ಘೋಷಣೆಯನ್ನು ಮಾಡಬೇಕು. ಇಲ್ಲವಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸತ್ಯಜಿತ್ ಅವರನ್ನು ಕಣಕ್ಕಿಳಿಸುವುದಾಗಿ ಸಭೆಯಲ್ಲಿ ಅಭಿಮಾನಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಸತ್ಯಜಿತ್‌ ಸುರತ್ಕಲ್‌ಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾನುವಾರ ಈ ಸಭೆ ಆಯೋಜಿಸ ಲಾಗಿತ್ತು.

ADVERTISEMENT

‘ಅಂತಿಮ ಕ್ಷಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ , ಆರೆಸ್ಸೆಸ್‌ ಮುಖಂಡರಾದ ಸಂತೋಷ್ ಜಿ ಮತ್ತು ಸಂಘ ಪರಿವಾರದ ಪಿ.ಎಸ್‌. ಪ್ರಕಾಶ್ ಜೊತೆಯಾಗಿ ಟಿಕೆಟ್ ತಪ್ಪಿಸಿದ್ದಾರೆ’ ಎಂದು ಆರೋಪಿಸಿದ ಅಭಿಮಾನಿಗಳು, ಸಭೆಯಲ್ಲಿ ಈ ಮೂವರು ನಾಯಕರ ವಿರುದ್ಧ ಘೋಷಣೆ ಕೂಗಿದರು.

‘ಸುಮಾರು 35 ವರ್ಷ ಕಾಲ ಪಕ್ಷ ಮತ್ತು ಸಂಘಟನೆಗಾಗಿ ದುಡಿದರೂ ಇದ್ಯಾವುದನ್ನೂ ಪರಿಗಣಿಸದೇ ಸತ್ಯಜಿತ್‌ ಅವರನ್ನು ಕಡೆಗಣಿಸಲಾಗಿದೆ, ಇದು ಕಾರ್ಯಕರ್ತರಿಗೆ ಮಾಡಿದ ಮೋಸವಾಗಿದೆ. ಇಂದು ನ್ಯಾಯ ಸಿಗದೇ ಹೋದರೆ ಬಿಜೆಪಿ ಕಾರ್ಯಕರ್ತರು ಪಕ್ಷದ ವಿಚಾರದಲ್ಲಿ ತಟಸ್ಥರಾಗಿ ಉಳಿದು ಪಕ್ಷೇತರರಾಗಿ ಸತ್ಯಜಿತ್ ಅವರನ್ನು ಕಣಕ್ಕಿಸಲಿದ್ದೇವೆ’ ಎಂದು ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದು ಕೊಳ್ಳಲಾಗಿದೆ.

**

ತಪ್ಪನ್ನು ಸರಿಪಡಿಸಿ ಸೋಮವಾರ ಬೆಳಿಗ್ಗೆ 10 ಗಂಟೆಯೊಳಗೆ ನಿರ್ಧಾರ ಪ್ರಕಟಿಸಬೇಕು ಎಂದು ಪಕ್ಷದ ಮುಖಂಡರನ್ನು ಆಗ್ರಹಿಸುತ್ತೇನೆ. ಇಲ್ಲವಾದಲ್ಲಿ ನಾನು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇನೆ 
ಸತ್ಯಜಿತ್‌ ಸುರತ್ಕಲ್‌, ಟಿಕೆಟ್‌ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.