ADVERTISEMENT

ಪತ್ರಕರ್ತನ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 9:14 IST
Last Updated 9 ಸೆಪ್ಟೆಂಬರ್ 2017, 9:14 IST
ಪತ್ರಕರ್ತ ಇಮ್ತಿಯಾಝ್‌ ಶಾ ತುಂಬೆ.
ಪತ್ರಕರ್ತ ಇಮ್ತಿಯಾಝ್‌ ಶಾ ತುಂಬೆ.   

ಮಂಗಳೂರು: ಪೊಲೀಸ್‌ ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯುಳ್ಳ ವಿಡಿಯೊ ಸೃಷ್ಟಿಸಿ, ಅದನ್ನು ಪ್ರಸಾರ ಮಾಡಿ ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತಲು ಯತ್ನಿಸಿದ ಆರೋಪದ ಮೇಲೆ ವಾರ್ತಾಭಾರತಿ ದಿನಪತ್ರಿಕೆಯ ಬಂಟ್ವಾಳ ವರದಿಗಾರ ಇಮ್ತಿಯಾಝ್‌ ಶಾ ತುಂಬೆ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ಕುಮಾರ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಖಲಂದರ್ ಎಂಬಾತನ ಮನೆ ಮೇಲೆ ಪೊಲೀಸರು ಸೆಪ್ಟೆಂಬರ್‌ 2ರಂದು ದಾಳಿ ಮಾಡಿ, ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮುಸ್ಲಿಮರ ಧರ್ಮಗ್ರಂಥ ಕುರಾನ್‌ಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಸದರಿ ವಿಡಿಯೊ ಸೃಷ್ಟಿಸಿ, ಪ್ರಸಾರ ಮಾಡಿದ ಆರೋಪದ ಮೇಲೆ ಇಮ್ತಿಯಾಝ್‌ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇಮ್ತಿಯಾಝ್‌ ಹಾಗೂ ವಾರ್ತಾಭಾರತಿ ದಿನಪತ್ರಿಕೆ ಮುಖ್ಯಸ್ಥರ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153 (ಎ)– (ಧರ್ಮ, ಭಾಷೆ, ಜನಾಂಗ, ಜನ್ಮಸ್ಥಳ, ವಾಸಸ್ಥಳದ ಹೆಸರಿನಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವುದು ಹಾಗೂ ಪೂರ್ವಗ್ರಹದಿಂದ ಸೌಹಾರ್ದ ಕದಡುವ ಕೃತ್ಯಗಳನ್ನು ಎಸಗುವುದು) ಹಾಗೂ ಸೆಕ್ಷನ್‌ 505(2)ರ (ಸತ್ಯ ಗೊತ್ತಿದ್ದೂ ವಿವಿಧ ಧರ್ಮದ, ನಂಬಿಕೆಯ ಜನರ ನಡುವೆ ದ್ವೇಷ ಸೃಷ್ಟಿಸುವಂತಹ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವುದು) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲು ಮಾಡಲಾಗಿದೆ.

ADVERTISEMENT

‘ಪೊಲೀಸ್‌ ಕಾರ್ಯಾಚರಣೆ ವೇಳೆ ಕುರಾನ್‌ಗೆ ಅವಮಾನ ಮಾಡಲಾಗಿದೆ ಎಂದು ಬಿಂಬಿಸಿರುವ ವಿಡಿಯೊ ಸೃಷ್ಟಿಯಲ್ಲಿ ಇಮ್ತಿಯಾಝ್‌ ಪಾತ್ರವಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅದೇ ವಿಡಿಯೊವನ್ನು ಹಲವು ವಾಟ್ಸ್‌ ಆ್ಯಪ್‌ ಗುಂಪುಗಳಿಗೆ ಕಳಿಹಿಸಿರುವುದು ಖಚಿತಪಟ್ಟಿದೆ. ತಾವೇ ಆ ವಿಡಿಯೊ ಚಿತ್ರೀಕರಿಸಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಗುರುವಾರ ರಾತ್ರಿ ಅವರನ್ನು ಬಂಧಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದರು.

ನ್ಯಾಯಾಂಗ ಬಂಧನಕ್ಕೆ: ಗುರುವಾರ ರಾತ್ರಿ ಬಂಧಿಸಿದ್ದ ವರದಿಗಾರನನ್ನು ಶುಕ್ರವಾರ ಸಂಜೆ ಪೊಲೀಸರು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿ ಪರ ವಕೀಲರು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ವಜಾ ಮಾಡಿದ ನ್ಯಾಯಾಧೀಶರು, ಆರೋಪಿಯನ್ನು ಇದೇ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. ತಕ್ಷಣವೇ ಪೂರ್ಣ ಪ್ರಮಾಣದ ಜಾಮೀನು ಕೋರಿ ಇಮ್ತಿಯಾಝ್‌ ಪರ ವಕೀಲರು ಅರ್ಜಿ ಸಲ್ಲಿಸಿದರು. ಈ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ ಎಂದು ವಕೀಲರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.