ADVERTISEMENT

ಪಿ.ಜಿ. ಗಳ ಮೇಲೆ ಪೊಲೀಸ್ ಕಣ್ಣು..!

​ಪ್ರಜಾವಾಣಿ ವಾರ್ತೆ
Published 26 ಮೇ 2017, 5:51 IST
Last Updated 26 ಮೇ 2017, 5:51 IST

ಪುತ್ತೂರು: ಪುತ್ತೂರು ವ್ಯಾಪ್ತಿಯ ಕಾಲೇಜು ಪರಿಸರದಲ್ಲಿ ಇತ್ತೀಚಿನ ದಿನಗ ಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಪೇಯಿಂಗ್‌ ಗೆಸ್ಟ್‌ಗಳೇ (ಪಿ.ಜಿ.) ಕಾರಣ ಎನ್ನುವ ತೀರ್ಮಾನಕ್ಕೆ ಬಂದಿರುವ ಪೊಲೀಸರು, ಪಿ.ಜಿ.ಗಳ ಮಾಹಿತಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದಾರೆ.

ಪಿ.ಜಿ.ಗಳನ್ನು ನಡೆಸುತ್ತಿರುವವರು ತಮ್ಮ ಪಿ.ಜಿ.ಗಳ ವಿಳಾಸ ಮಾಹಿತಿಯನ್ನು 10 ದಿನಗಳೊಳಗೆ ಪೊಲೀಸ್ ಠಾಣೆಗೆ ನೀಡುವಂತೆ  ಇನ್‌ಸ್ಪೆಕ್ಟರ್‌ ಮಹೇಶ್ ಪ್ರಸಾದ್ ಸೂಚನೆ ನೀಡಿದ್ದಾರೆ.

ಪುತ್ತೂರಿನಲ್ಲಿರುವ ಹೆಚ್ಚಿನ ಪಿ.ಜಿ. ಗಳಲ್ಲಿ ಸೂಕ್ತ ಭದ್ರತೆಯ ವ್ಯವಸ್ಥೆಗಳಿಲ್ಲದ ಕಾರಣ ಹತೋಟಿಯಲ್ಲಿಟ್ಟುಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಇಲ್ಲಿನ ಕಾಲೇಜು ಪರಿಸರದಲ್ಲಿರುವ ಪಿ.ಜಿ.ಗಳ ಸಂಖ್ಯೆ, ಅಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ, ಪಿ.ಜಿ.ಗಳಲ್ಲಿದ್ದುಕೊಂಡು ಉದ್ಯೋಗಕ್ಕೆ ತೆರಳುತ್ತಿರುವ ಅವಿವಾಹಿತರ ವಿವರ ಸಂಗ್ರಹಿಸುವ ಜತೆಗೆ ಪುತ್ತೂರು ವ್ಯಾಪ್ತಿಯಲ್ಲಿ ಪ್ರಸ್ತುತವಿರುವ ಪಿ.ಜಿ.ಗಳು ನಗರಸಭೆಯಿಂದ ಪರವಾನಗಿ ಪಡೆದು ಕೊಂಡಿರುವ ಅಧಿಕೃತ ಪಿ.ಜಿ.ಗಳೇ ಇಲ್ಲಾ ಅನಧಿಕೃತವಾಗಿ ನಡೆಯುತ್ತಿವೆಯೇ ಎಂಬುವುದನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.

ADVERTISEMENT

ಯಾರಲ್ಲೂ ಮಾಹಿತಿ ಇಲ್ಲ: ಇಲ್ಲಿರುವ ಪಿ.ಜಿ.ಗಳ ಕುರಿತು ಸರಿಯಾದ ಮಾಹಿತಿ ಯಾರಲ್ಲೂ, ಯಾವ ಇಲಾಖೆ ಯಲ್ಲಿಯೂ ಇಲ್ಲ. ಕೆಲವೊಂದು ಪಿ.ಜಿ. ಗಳಲ್ಲಿ ವಾಸ್ತವ್ಯ ಇರುವವರ ಅತಿರೇಕದ ವರ್ತನೆಯಿಂದಾಗಿ ರಾತ್ರಿ ವೇಳೆ ಸ್ಥಳೀ ಯರಿಗೆ ಕಿರಿಕಿರಿ ಉಂಟಾಗುವ ದೂರುಗಳು ಬರುತ್ತಿವೆ.  ಪೊಲೀಸರಿಗೆ ದೂರು ನೀಡಿದ ಬಳಿಕವಷ್ಟೇ ಅಲ್ಲೊಂದು ಪಿ.ಜಿ. ಇದೆ ಎನ್ನುವುದು ತಿಳಿಯುತ್ತಿದ್ದು, ನಗರ ಸಭೆಯಿಂದ ಪರವಾನಗಿ ಪಡೆಯದೆ ಅನಧಿಕೃತವಾಗಿ ಪಿ.ಜಿ. ನಡೆಸಿಕೊಂಡು ಹೋಗುವವರು ಹಲವರಿದ್ದಾರೆ.

ಭದ್ರತೆಯ ದೃಷ್ಟಿಯಿಂದ,ಅದರಲ್ಲೂ ಮುಖ್ಯವಾಗಿ ಮಹಿಳೆಯರ ಪಿ.ಜಿಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಬೇಕು. ಪಿ.ಜಿ.ಗಳಿಗೆ ಭೇಟಿ ನೀಡಿ  ಹೋಗುವವರ ಮಾಹಿತಿಯನ್ನು ಮಾಲೀಕರು ದಾಖಲಿಸಬೇಕು, ತಿಂಗಳಿಗೊಮ್ಮೆ ಮಾಲೀಕರ ಸಭೆ ನಡೆಸಬೇಕು. 

ವಿಶೇಷವಾಗಿ ಮಹಿಳಾ ಪಿ.ಜಿ.ಗಳಲ್ಲಿ ಇರುವ ಮಹಿಳೆ ಯರ ಸಂಖ್ಯೆ, ಅವರ ಅರ್ಜಿ ಫಾರಂ ಗಳು, ವಿಳಾಸ ಪಿ.ಜಿ. ಮಾಲೀಕರಲ್ಲಿ ಕಡ್ಡಾಯವಾಗಿ ಇರಬೇಕು.ಜತೆಗೆ ಪಿ.ಜಿ. ಮಾಲೀಕರ ಹಾಗೂ ವಾರ್ಡನ್, ವಾಚ್‌ಮೆನ್‌ ವಿಳಾಸ, ಅವರ ಫೋನ್ ನಂಬರ್‌ಗಳು ಸ್ಥಳೀಯ ಠಾಣೆಗಳಲ್ಲಿ ದಾಖಲಾಗಿರಬೇಕು. ಪ್ರತಿ ಪಿ.ಜಿ.ಯಲ್ಲಿಯೂ ಕಟ್ಟಡದ ಎದುರು ಮತ್ತು ಹಿಂದೆ ಒಂದು ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಇಲಾಖೆಯ ನಿರ್ದೇಶನವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.