ADVERTISEMENT

ಪೊಲೀಸರು ತಪ್ಪೆಸಗಿದರೆ ಕ್ರಮ ನಿಶ್ಚಿತ

​ಪ್ರಜಾವಾಣಿ ವಾರ್ತೆ
Published 29 ಮೇ 2017, 9:12 IST
Last Updated 29 ಮೇ 2017, 9:12 IST

ಮಂಗಳೂರು: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಪ್ರತಿದೂರು ದಾಖಲಿಸುವಂತೆ ಆರೋಪಿಗಳಿಗೆ ಕುಮ್ಮಕ್ಕು ನೀಡುವುದು ಸೇರಿದಂತೆ ಪೊಲೀಸರು ಯಾವುದೇ ಬಗೆಯ ತಪ್ಪೆಸ ಗಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ.ಸಂಜೀವ್‌ ಎಂ.ಪಾಟೀಲ್‌ ಭರವಸೆ ನೀಡಿದರು.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮಾಸಿಕ ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಮುಖಂಡರು, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ಪರ ಕೆಲಸ ಮಾಡು ತ್ತಿರುವುದು ಹೆಚ್ಚುತ್ತಿದೆ ಎಂದು ಆಪಾದಿ ಸಿದರು. ರಘುವರನ್‌ ಎಂಬುವವರ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕಾವೂರು ಠಾಣೆಯ ಪೊಲೀಸರು ಪ್ರತಿದೂರು ದಾಖಲಿಸಲು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.

ಆಗ ಪ್ರತಿಕ್ರಿಯಿಸಿದ ಡಿಸಿಪಿ, ‘ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಯಾವುದೇ ಪ್ರಕರಣದಲ್ಲಿ ಆರೋಪಿಗಳ ಪರ ವಹಿಸಿರುವುದು ಅಥವಾ ಪ್ರತಿದೂರು ದಾಖಲಿಸುವಂತೆ ಕುಮ್ಮಕ್ಕು ನೀಡಿರುವುದಕ್ಕೆ ಸಾಕ್ಷ್ಯಗಳಿದ್ದರೆ ನಮಗೆ ನೀಡಿ. ಅಂತಹ ಪೊಲೀಸ್‌ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ’ ಎಂದರು.
‘ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕೆಲವು ಪೊಲೀಸರು ಸಕಾಲಕ್ಕೆ ಆರೋಪಿಗಳನ್ನು ಬಂಧಿಸುತ್ತಿಲ್ಲ. ಜಾಮೀನು ಪಡೆಯಲು ನೆರವು ನೀಡುತ್ತಿದ್ದಾರೆ. ಇದರಿಂದ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಆಶಯಗಳು ವಿಫಲವಾಗುತ್ತಿವೆ’ ಎಂದು ಮುಖಂಡರಾದ ಅಶೋಕ್‌ ಕೊಂಚಾಡಿ, ಆನಂದ್‌, ರಘುವೀರ್‌ ಸೂಟರ್‌ಪೇಟೆ ದೂರಿದರು.

ADVERTISEMENT

‘ಕಳೆದ ಎರಡು ವರ್ಷಗಳ ಅವಧಿಯಲ್ಲಿ ದಾಖಲಾಗಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಯ ಕುರಿತು ಸಮಗ್ರ ಮಾಹಿತಿ ಪಡೆಯಲಾಗುವುದು. ಪೊಲೀಸರು ತಪ್ಪೆಸಗಿರುವುದು ಕಂಡುಬಂದಲ್ಲಿ ಅದನ್ನು ನೇರವಾಗಿ ನ್ಯಾಯಾಲಯದ ಗಮನಕ್ಕೆ ತರಲು ದೂರುದಾರರಿಗೆ ಅವಕಾಶವಿದೆ. ಹಿರಿಯ ಅಧಿಕಾರಿ ಗಳಿಗೂ ದೂರು ಸಲ್ಲಿಸಬಹುದು. ಪರಿಶೀ ಲನೆ ನಡೆಸಿದ ಬಳಿಕ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಸಂಜೀವ್‌ ಪಾಟೀಲ್‌ ಉತ್ತರಿಸಿದರು.

ಪರಿಶೀಲನೆ ಭರವಸೆ: ‘ಇತ್ತೀಚಿನ ದಿನಗಳಲ್ಲಿ ಕಡಿಮೆ ಬಾಡಿಗೆಯ ಕಾರಣಕ್ಕಾಗಿ ದಲಿತ ಕಾಲೋನಿಗಳಲ್ಲಿ ಪಿಜಿ ಹಾಸ್ಟೆಲ್‌ಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಆರಂಭಿಸಲಾ ಗುತ್ತಿದೆ. ಅಂತಹ ಹಾಸ್ಟೆಲ್‌ಗಳು ಮಾದಕ ವಸ್ತುಗಳ ಸರಬರಾಜು ಕೇಂದ್ರಗಳಾ ಗುತ್ತಿವೆ. ಇದರಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿರುವುದರ ಜೊತೆ ಯಲ್ಲೇ ಅಲ್ಲಿ ವಾಸಿಸುವ ದಲಿತರಿಗೂ ತೊಂದರೆಯಾಗುತ್ತಿದೆ’ ಎಂದು ರಘುವೀರ್ ಸೂಟರ್‌ಪೇಟೆ ದೂರಿದರು.

‘ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಎಲ್ಲ ದಲಿತ ಕಾಲೋನಿ ಗಳಲ್ಲೂ ಪರಿಶೀಲನೆ ನಡೆಸಲಾಗುವುದು. ಪಿಜಿ ಹಾಸ್ಟೆಲ್‌ಗಳು ಇದ್ದಲ್ಲಿ ಅವುಗಳ ಮಾಲೀಕರಿಗೆ ಸೂಕ್ತ ಸೂಚನೆಗಳನ್ನು ನೀಡಲಾಗುವುದು. ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕ್ರಮ ಜರುಗಿಸಲಾಗುವುದು’ ಎಂದು ಡಿಸಿಪಿ ತಿಳಿಸಿದರು.

ನಗರದಲ್ಲಿ ಮಸಾಜ್‌ ಪಾರ್ಲರ್‌ಗಳ ಹಾವಳಿ ಹೆಚ್ಚುತ್ತಿದೆ ಎಂಬ ಆನಂದ್‌ ಅವರ ದೂರಿಗೆ ಪ್ರತಿಕ್ರಿಯಿಸಿದ ಅವರು, ‘ಮಸಾಜ್‌ ಪಾರ್ಲರ್‌ಗಳು ನಡೆಯು ತ್ತಿರುವ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಬಹುದು. ತಕ್ಷಣವೇ ಅಂತಹ ಸ್ಥಳಗಳ ಮೇಲೆ ದಾಳಿ ನಡೆಸಿ, ಪ್ರಕರಣ ದಾಖಲು ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.