ADVERTISEMENT

ಬಾಲ್ಯವಿವಾಹ ನಿಷೇಧ ಮಾಹಿತಿ: ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 10:56 IST
Last Updated 5 ಮಾರ್ಚ್ 2015, 10:56 IST

ಮಂಗಳೂರು:  ಸಾಮೂಹಿಕ ವಿವಾಹ ಆಯೋಜಕರು, ಕಲ್ಯಾಣ ಮಂಟಪದ ವ್ಯವಸ್ಥಾಪಕರು, ಅರ್ಚಕರು ಮತ್ತು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ವಿವಾಹ ಆಯೋಜಕರಿಗೆ ಬುಧವಾರ ನಗರದ ಬಾಲಭವನದಲ್ಲಿ ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲಭವನದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅದ್ಯಪಾಡಿ ಆದಿನಾಥೇಶ್ವರ ದೇವಸ್ಥಾನ, ಕಿನ್ನಿಗೋಳಿ ರಾಧಾಕೃಷ್ಣ ಕಲ್ಯಾಣ ಮಂಟಪದ ಪ್ರತಿನಿಧಿ, ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಪ್ರತಿನಿಧಿ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರತಿನಿಧಿ ಹಾಗೂ ಕುಂಪಲದ ನೂರಾನಿ ಯತೀಂ ಖಾನ್‌ನ ಇಬ್ಬರು ಪ್ರತಿನಿಧಿಗಳು ಸೇರಿ ಒಟ್ಟು ಏಳು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅರ್ಚಕರಾಗಲಿ, ಕಲ್ಯಾಣ ಮಂಟಪದ ಮುಖ್ಯಸ್ಥರಾಗಲೀ, ಚರ್ಚ್‌ ಮುಖ್ಯಸ್ಥರಾಗಲೀ ಭಾಗವಹಿಸಲಿಲ್ಲ.

ಕಾರ್ಯಕ್ರಮವನ್ನು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಸಿ.ಎಂ. ಜೋಶಿ ಉದ್ಘಾಟಿಸಿ ಕಾರ್ಯಕ್ರಮದ ಬಗ್ಗೆ ನಿರಾಸಕ್ತಿ ತೋರಿರುವವರಿಗೆ ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮದ ಅರಿವಿರಬಹುದು ಎಂದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್‌ ಎ., ಗ್ರಾಮಾಂತರ ಶಿಶುಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ. ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಎಸ್‌.ಪಿ. ಚಂಗಪ್ಪ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.