ADVERTISEMENT

ಬ್ಯಾಂಕ್‌ ವಹಿವಾಟಿನ ಮೇಲೆ ನಿಗಾ

ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 10:06 IST
Last Updated 18 ಏಪ್ರಿಲ್ 2018, 10:06 IST

ಮಂಗಳೂರು: ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳಲ್ಲಿ ನಡೆಯುವ ವಹಿವಾಟಿನ ಮೇಲೆ ತೀವ್ರ ನಿಗಾ ಇರಿಸಬೇಕು. ಹವಾಲಾ ಹಣ ವರ್ಗಾವಣೆ ಬಗ್ಗೆಯೂ ಕಟ್ಟೆಚ್ಚರ ವಹಿಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಸೂಚನೆ ನೀಡಿದರು.

ಜಿಲ್ಲೆಗೆ ಚುನಾವಣಾ ವೆಚ್ಚ ವೀಕ್ಷಕ ರಾಗಿ ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿರುವ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚುನಾವಣಾ ಅಕ್ರಮ ತಡೆಗೆ ಸಂಬಂಧಿಸಿದಂತೆ ಮಂಗ ಳವಾರ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ, ಆರ್ಥಿಕ ಅಕ್ರಮಗಳ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಎಲ್ಲ ಬ್ಯಾಂಕ್‌ ಶಾಖೆಗಳು ತಮ್ಮಲ್ಲಿ ನಡೆಯುವ ದೊಡ್ಡ ಮೊತ್ತದ ವಹಿವಾಟುಗಳ ಕುರಿತು ಪ್ರತಿದಿನ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ವರದಿ ನೀಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಸಹಿಸುವುದಿಲ್ಲ. ವಹಿವಾಟುಗಳ ವಿವರಗಳನ್ನು ಸಕಾಲಕ್ಕೆ ಸಲ್ಲಿಸದ ಬ್ಯಾಂಕ್‌ ಶಾಖೆಗಳಿಗೆ ಬೀಗ ಹಾಕುವಂತೆ ಆದೇಶ ನೀಡಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಸಹಕಾರ ಬ್ಯಾಂಕ್‌ಗಳೂ ಪರಿಶೀ ಲನೆಯಿಂದ ಹೊರತಾಗಿಲ್ಲ. ಹವಾಲಾ ವಹಿವಾಟು ನಡೆಯುವ ಸಾಧ್ಯತೆಯೂ ಇರುತ್ತದೆ. ಈ ವಿಚಾರದಲ್ಲಿ ಗುಪ್ತ ವಾರ್ತೆ ಅಧಿಕಾರಿಗಳು ತೀವ್ರ ನಿಗಾ ಇರಿಸಬೇಕು. ಎಲ್ಲ ತನಿಖಾ ಠಾಣೆಗಳಲ್ಲಿ ಸರಕು ಸಾಗಣೆಗಳ ತಪಾಸಣೆಯನ್ನು ಬಿಗಿಗೊಳಿಸಬೇಕು ಎಂದು ಹೇಳಿದರು.

ಆರ್ಥಿಕ ವಹಿವಾಟು ಮತ್ತು ನಗದು ಚಲಾವಣೆಯ ಮೇಲೆ ನಿಗಾ ಇಡಲು ಆದಾಯ ತೆರಿಗೆ, ಕಸ್ಟಮ್ಸ್, ಬ್ಯಾಂಕ್‌ ಹಾಗೂ ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾ ಗುವುದು. ಈ ತಂಡವು ಮತದಾನ ಮುಗಿಯು ವವರೆಗೂ ಹಣದ ಚಲಾವಣೆಯ ಮೇಲೆ ನಿಗಾ ಇರಿಸಲಿದೆ ಎಂದರು.

ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿರುವ ವೆಚ್ಚ ವೀಕ್ಷಕರಾದ ಎಸ್. ಅನಿಲ್ ಕುಮಾರ್, ವಿನೋದ್ ಶರ್ಮಾ, ಶ್ಯಾಂ ಮನೋಹರ್ ಸಿಂಗ್, ಅಮಿತ್ ಕುಮಾರ್ ಸಿಂಘಾಲ್ ಈವರೆಗಿನ ಚುನಾವಣಾ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ಆರ್. ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.