ADVERTISEMENT

ಭಗವತಿ ಕ್ಷೇತ್ರದಲ್ಲಿ ವಾರ್ಷಿಕೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 6:45 IST
Last Updated 18 ಫೆಬ್ರುವರಿ 2017, 6:45 IST
ಶಕ್ತಿಮಾತೆಯಾದ ಶ್ರೀದೇವಿಯನ್ನು ಭಗವತೀ, ದುರ್ಗೆ, ಗೌರಿ ಮೊದಲಾದ ಹೆಸರುಗಳಿಂದ ಪೂಜಿಸುವುದು ಪರಂಪರಾಗತವಾಗಿದೆ. ಸರಸ್ವತಿ, ಲಕ್ಷ್ಮೀ ನಾಮಾವಳಿ ಗಳಲ್ಲಿ ‘ಭಗವತೈಃ ನಮಃ’ ಎಂದು ಭಗವತಿಯನ್ನು ಸ್ತುತಿಸಲಾಗಿದೆ.
 
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲ ಶ್ರೀ ಭಗವತಿ ಕ್ಷೇತ್ರದಲ್ಲಿ ಇದೇ 19 ಮತ್ತು 20ರಂದು ಪುನಃಪ್ರತಿಷ್ಠಾ ಬ್ರಹ್ಮಕಲಶ ವಾರ್ಷಿಕೋತ್ಸವದ ಸಂಭ್ರಮ ಗರಿಗೆದರಲಿದೆ. ಈ ಪ್ರಯುಕ್ತ 19ರಂದು ರಾತ್ರಿ ಶ್ರೀದೇವಿಗೆ ಸ್ವರ್ಣಾಲಂಕಾರ ಪೂಜೆ ನಡೆಯಲಿದೆ.
 
20ರಂದು ಗಣಹೋಮ, ವಾಸುಕೀ ಸುಬ್ರಹ್ಮಣ್ಯ ಸನ್ನಿಧಿ ಯಲ್ಲಿ ಪೂಜೆ, ಅಣ್ಣಪ್ಪ ದೈವದ ಸನ್ನಿಧಿಯಲ್ಲಿ ಪೂಜೆ, ಮಧ್ಯಾಹ್ನ ಭಗವತಿ ಸನ್ನಿಧಿಯಲ್ಲಿ ಪೂಜೆ ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ಇರುತ್ತದೆ. ರಾತ್ರಿ 8ಕ್ಕೆ ಶ್ರೀ ಭಗವತಿ ಅಮ್ಮನವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ವೈದಿಕ ವಿಧಿ ವಿಧಾನಗಳು ಬ್ರಹ್ಮಶ್ರೀ ವೇದಮೂರ್ತಿ ಕುಂಟುಕಡೇಲು ಗುರುರಾಜ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿದೆ.
 
ಭಗವತಿ ಉಪಾಸನೆಯು ಪ್ರಾಚೀನವಾದುದು. ‘ಭಗವತಿ ಹೇ ಶಿತಿಕಂಠ ಕುಟುಂಬಿನೀ, ಭೂರಿ ಕುಟುಂ ಬಿನಿ ಭೂರಿಕೃತೇ’ ವಿಶ್ವಕುಟುಂಬಿನಿಯಾದ ಭಗವತಿ ಯನ್ನು ಮಹಿಷಾಸುರ ಮರ್ದಿನಿ ಸ್ತೋತ್ರದಲ್ಲಿ ಸ್ತುತಿಸಲಾಗಿದೆ. 
 
ಕೇರಳದ ಮೂಡಾಯಿಕಾವುವಿನಲ್ಲಿ ಮೋಯರ್ ಸಮಾಜದವರು ಪೂಜಿಸುತ್ತಾ ಬಂದ ಭಗವತಿಯ ಸನ್ನಿ ಧಾನ ಹನ್ನೊಂದು ಕ್ಷೇತ್ರಗಳಲ್ಲಿ ವಿಸ್ತರಣೆಗೊಂಡಿದೆ. ಇವುಗಳ ಪೈಕಿ ವಿಟ್ಲದ ಭಗವತಿ ದೇವಸ್ಥಾನ ಸುಮಾ ರು 800 ವರ್ಷಗಳ ಹಿಂದೆ ವಿಟ್ಲ ಅರಮನೆಯವರಿಂದ ರಾಜಾಶ್ರಯ ಪಡೆದು ನಿರ್ಮಾಣಗೊಂಡಿತು. ವಿಟ್ಲ ಶ್ರೀ ಭಗವತಿ ಕ್ಷೇತ್ರವು ಐತಿಹ್ಯದಾಯಕವಾಗಿ ಭಕ್ತರನ್ನು ಸೆಳೆಯುವ ಸನ್ನಿಧಾನ. ಶಕ್ತಿ ಸ್ವರೂಪಿಣಿಯಾದ ಶ್ರೀದೇವಿಯನ್ನು ಭಗವತಿ ಎಂದು ಸ್ತುತಿಸಿ ಪೂಜಿಸುತ್ತಾರೆ. 
 
1997ರಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ, ಜೀರ್ಣೋದ್ಧಾರಗೊಂಡ ದೇವಸ್ಥಾನದಲ್ಲಿ ಪ್ರತಿವರ್ಷ ವಾರ್ಷಿಕೋತ್ಸವದ ಸಂದರ್ಭ ಯಕ್ಷಗಾನ, ಭರತ ನಾಟ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಗಳೂ ಜರುಗುತ್ತವೆ. ಈ ಬಾರಿ 19ರಂದು ಒಡಿ ಯೂರಿನ ಸಾತ್ವಿಕ ತೇಜ ಕಲಾತಂಡದಿಂದ ನೃತ್ಯವೈಭವ ಹಾಗೂ 20ರಂದು ಕಟೀಲು ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ನಡೆಯಲಿದೆ. 
 
ಪ್ರತಿ ತಿಂಗಳ ಸಂಕ್ರಮಣದಂದು ಕ್ಷೇತ್ರದಲ್ಲಿ ಸಂಜೆ ಪೂಜೆ, ಸಿಂಹ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಸಂಜೆ ವಿಶೇಷ ಪೂಜೆ, ಸಾಂಸ್ಕೃತಿಕ ಕಲಾ ಸೇವೆ, ಮಾತೆಯ ಸನ್ನಿಧಾನದಲ್ಲಿ ಜರುಗುತ್ತಿವೆ. ನವರಾತ್ರಿ ಯಲ್ಲಿಯೂ ಒಂಬತ್ತು ದಿನಗಳ ಕಾಲ ಪೂಜೆ ನಡೆಯಲಿದೆ. 
 
ಶ್ರೀ ಭಗವತಿ ಕ್ಷೇತ್ರದಲ್ಲಿ ವಾಸುಕಿ ಸುಬ್ರಹ್ಮಣ್ಯ (ನಾಗಬನ) ಸಾನ್ನಿಧ್ಯವಿದ್ದು ಪ್ರತಿ ನಾಗರ ಪಂಚಮಿಯಂದು ನಾಗನಿಗೆ ವಿಶೇಷ ತಂಬಿಲ ನಡೆದುಕೊಂಡು ಬರುತ್ತಿದೆ. ಕ್ಷೇತ್ರದಲ್ಲಿ ಅಣ್ಣಪ್ಪ ಪಂಜುರ್ಲಿ, ಗುಳಿಗ ದೈವಗಳ ಸಾನ್ನಿಧ್ಯಗಳಿಗೂ ಉಪಾಸನೆ ನಡೆಯುತ್ತದೆ.  
 
ಸಿಂಹಮಾಸದ ಪೂಜೆಯ ಸಂದರ್ಭದಲ್ಲಿ ಇಲ್ಲಿ ನಡೆಯುವ ಭಜನೆ, ಸಂಗೀತ, ಯಕ್ಷಗಾನ ತಾಳಮದ್ದಳೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾ ಸೇವಕರ ಸ್ವಯಂಪ್ರೇರಿತವಾದ ಆಸಕ್ತಿ ಇಲ್ಲಿಯ ವಿಶೇಷತೆ. ಸರ್ವಮಂಗಲೆಯಾದಂತ ಶ್ರೀ ಭಗವತಿ ದೇವಿಯ ಉತ್ಸವದಲ್ಲಿ ಊರ-ಪರವೂರ ಭಕ್ತರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.  
-ಎಲ್.ಎನ್.ಭಟ್ ಮಳಿ
 
ಔಷಧೋಪಾಸನಾ ವೃಕ್ಷಗಳ ರಕ್ಷಣೆ

ವಿಟ್ಲ ಭಗವತಿ ದೇವಸ್ಥಾನದ ಪರಿಸರದಲ್ಲಿ ಹಲವಾರು ಔಷಧಿ ಉಪಾಸನೆಗಳ ವೃಕ್ಷಗಳಿವೆ. ಪಾಲಾಶ, ರೋಹಿತಕ, ಸುರಗಿ, ಬಕುಳ (ರೆಂಜೆ) ಸಾಗುವಾನಿ, ಕಾಮಟೆ, ಅಶ್ವತ್ಥ, ಕಹಿಬೇವು, ಬಿಲ್ವಪತ್ರೆ, ಕರವೀರ, ಉತ್ತರಣೆ, ವಿಷ್ಣುಕ್ರಾಂತಿ, ಸಹದೇವಿ ಇತ್ಯಾದಿ ಅಮೂಲ್ಯ ಸಸ್ಯಸಂಪತ್ತನ್ನು ರಕ್ಷಿಸುವ ದೇವಳದ ಆಡಳಿತ ಮಂಡಳಿಯ ಕಾಳಜಿ ಬಹುಜನರಿಗೆ ಉಪಕಾರಿಯಾಗಿರುವುದು ಶ್ಲಾಘನೀಯವಾಗಿದೆ. ಇಲ್ಲಿ ನಾಗಬನವೂ ಇರುವುದರಿಂದ ಔಷಧೀಯ ವೃಕ್ಷಗಳು ಉಳಿದುಕೊಂಡಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.