ADVERTISEMENT

ಭಯೋತ್ಪಾದನೆ ವಿರುದ್ಧ ಹೋರಾಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:54 IST
Last Updated 24 ಏಪ್ರಿಲ್ 2017, 6:54 IST

ಪಡುಬಿದ್ರಿ: ‘ಅಮಾಯಕ ವ್ಯಕ್ತಿಯನ್ನು ವಿನಾಕಾರಣ ಕೊಲೆ ಮಾಡುವುದರಿಂದ ಇಡೀ ಮಾನವಕುಲವನ್ನು ಕೊಂದ ಪಾಪ ಅವನಿಗೆ ಅಂಟಿಕೊಳ್ಳುತ್ತದೆ. ಆತನಿಗೆ ಭಯಾನಕ ಶಿಕ್ಷೆ ಕಾದಿದೆ. ಭಯೋ ತ್ಪಾದಕರು ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಯುವಜನತೆ ಬಲಿಯಾಗದೆ ಇಂತಹ ದುಷ್ಟಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕಾಗಿದೆ’ ಎಂದು ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್ ಅಲ್ಬುಖಾರಿ ಕಡಲುಂಡಿ ಸಲಹೆ ನೀಡಿದರು.

ಕಣ್ಣಂಗಾರ್ ಜುಮ್ಮಾ ಮಸೀದಿ ಮುಂಭಾಗದಲ್ಲಿರುವ ಶೇಖ್ ಸಿರಾಜು ದ್ದೀನ್ ದರ್ಗಾ ಶರೀಫ್ ಹೆಸರಿನಲ್ಲಿ ಮೂರು ವರುಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಕಣ್ಣಂಗಾರ್ ಉರೂಸ್ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

‘ಯುವಜನತೆ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗಿದ್ದು, ಅಪ ರಾಧ ಕೃತ್ಯಗಳಿಂದಲೂ, ಮಾದಕ ದೃವ್ಯಗಳಿಂದಲೂ ದೂರವಿರಬೇಕು. ಕುರಾನ್ ನೀಡಿದ ಸಂದೇಶ ಹಾಗೂ ಪ್ರವಾದಿಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ‘ಇಸ್ಲಾಂ ಧರ್ಮದ ಸಂದೇಶಗಳು ಎಲ್ಲ ಧರ್ಮಕ್ಕೂ ಅನ್ವಯವಾಗುತ್ತದೆ. ಈ ಮೂಲಕ ಎಲ್ಲರೂ ದೇವರಿಗೆ ಸಂಪೂರ್ಣ ಶರಣಾಗುವುದದಿಂದ ತಮಗೆ ಶಕ್ತಿ ಮತ್ತು ಅನುಗ್ರಹ ಸಿಗುತ್ತದೆ’ ಎಂದು ತಿಳಿಸಿದರು.

ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ‘ಧಾರ್ಮಿಕ ಕೇಂದ್ರಗಳು ಶಾಂತಿ, ಸೌಹಾರ್ದತೆಯ ತಾಣ. ಹಿಂದಿನ ದಿನಗಳಲ್ಲಿ ಎಲ್ಲ ಧರ್ಮದವರು ಕೂಡಿ ಬಾಳುತ್ತಿದ್ದರು. ಇದಕ್ಕೆ ಈ ಹಿಂದಿನ ಚಾರಿತ್ರಿಕ ಘಟನೆಗಳು ಕರಾವಳಿಯಲ್ಲಿ ಸಾಕ್ಷಿಯಾಗಿದೆ. ಇದನ್ನು ಮುಂದುವರಿಸಿ ಕೊಂಡು ಹೋಗಬೇಕಾಗಿದೆ’ ಎಂದು ಹೇಳಿದರು.

ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯಕುಮಾರ್ ಸೊರಕೆ, 40ವರ್ಷಗಳ ಕಾಲ ಕಣ್ಣಂಗಾರ್ ಜುಮ್ಮಾ ಮಸೀದಿಯಲ್ಲಿ ಸೇವೆ ಸಲ್ಲಿಸಿದ ಮುಕ್ರಿ ಹಾಜಿ ಅವರನ್ನು ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್ ಅಲ್ಬುಖಾರಿ ಕಡಲುಂಡಿ ಸನ್ಮಾನಿಸಿದರು.

ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಯು.ಕೆ. ಅಧ್ಯಕ್ಷತೆ ವಹಿಸಿದ್ದರು. ಸಂಯುಕ್ತ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಿದರು. ಮರ್ಕಝುಲ್ ಹುದಾ ಕುಂಬ್ರ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ.ಅಬ್ದುಲ್‌ ರಶೀದ್ ಸಖಾಫಿ ಝೈನಿ ಕಾಮಿಲ್ ಮುಖ್ಯಪ್ರಭಾಷಣ ಮಾಡಿದರು.

ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಕಣ್ಣಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ, ಸಚಿವರಾದ ಯು.ಟಿ.ಖಾದರ್, ಶಾಸಕ ಬಿ.ಎಂ. ಮೊಯಿದ್ದೀನ್ ಬಾವ, ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.