ADVERTISEMENT

ಭಾವತೀವ್ರತೆಯೇ ಕವಿತೆಯ ಜೀವಾಳ

‘ಬದುಕು ಭಾವದ ತೆನೆ’ ಬಿಡುಗಡೆ ಮಾಡಿದ ಡಾ.ಚಿನ್ನಪ್ಪ ಗೌಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 5:35 IST
Last Updated 18 ಜೂನ್ 2018, 5:35 IST

ಮಂಗಳೂರು: ‘ನಿಜವಾದ ಭಾವ ತೀವ್ರತೆಯೇ ಕಾವ್ಯದ ಜೀವಾಳ ಎಂಬುದನ್ನು ಕವಿಗಳು ಮನಗಾಣಬೇಕು’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು.

ಉರ್ವಸ್ಟೋರ್‌ನ ತುಳುಭವನದ ಸಿರಿ ಚಾವಡಿಯಲ್ಲಿ ಅಕ್ಷಯ ಆರ್.ಶೆಟ್ಟಿ ಅವರ ‘ಬದುಕು ಭಾವದ ತೆನೆ’ ಕವನ ಸಂಕಲನವನ್ನು ಇತ್ತೀಚಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಂಕಲನದ ಹೆಸರೇ ಸೂಚಿಸುವಂತೆ ಅಕ್ಷಯ ಅವರ ಕವಿತೆಗಳೆಲ್ಲ ಭಾವ ಪ್ರಧಾನವಾದವುಗಳು. ಅವುಗಳಲ್ಲಿ ಹೆಣ್ಣೊಬ್ಬಳ ಗಟ್ಟಿ ಧ್ವನಿ ಇದೆ. ಸ್ತ್ರೀವಾದಿ ಚಿಂತನೆಯ ನೆಲೆ ಇದೆ. ತನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಜ್ಞೆಗೆ ಅನುಗುಣವಾಗಿ ಆವರಣದ ಒಳಗಿನ ಒಬ್ಬ ಕವಯಿತ್ರಿ ಆವರಣದ ಹೊರಗೆ ಇಣುಕಿ ನೋಡುವ, ಅಲ್ಲಿ ಏನಿದೆಯೆಂದು ಕುತೂಹಲದಿಂದ ಕಣ್ಣು ಹಾಯಿಸುವ ಕೆಲಸ ಪ್ರಸ್ತುತ ಕವಿತೆಗಳಲ್ಲಿ ಎದ್ದು ಕಾಣುತ್ತದೆ ಎಂದು ವಿಶ್ಲೇಷಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ, ತುಳು ಮತ್ತು ಕನ್ನಡ ಭಾಷೆಗಳಿಗೆ ಯಾವುದೇ ರೀತಿಯ ಭೇದವಿಲ್ಲ. ಅವೆರಡೂ ನಮ್ಮ ಕಣ್ಣುಗಳಿದ್ದಂತೆ’ ಎಂದರು.

ಕೃತಿ ಪರಿಚಯ ಮಾಡಿದ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ, ‘ಬದುಕು ಭಾವದ ತೆನೆ ಕೃತಿಯಲ್ಲಿ ಬದುಕನ್ನು ಬಹಳ ಸಕಾರಾತ್ಮಕವಾದ ಮನೋ ದೃಷ್ಟಿಯಿಂದ ಕವಿತೆಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಕವಿಯಾದವನು ಧನಾತ್ಮಕವಾಗಿ ಚಿಂತಿಸದೆ ಇದ್ದರೆ, ಅಂತಹ ಚಿಂತನೆಯನ್ನು ಬೇರೆಯವರಿಂದ ನಿರೀಕ್ಷಿಸುವ ಹಾಗಿಲ್ಲ. ಕವಿಯಾದವನು ಋಷಿಯ ಹಂತಕ್ಕೆ ಬರಬೇಕು. ಜಾತಿ, ಮತ, ಧರ್ಮ, ಪಂಗಡ ಮೀರಿ ಬೆಳೆಯಬೇಕು’ ಎಂದು ಹೇಳಿದರು.

ಕವಯಿತ್ರಿ ಅಕ್ಷಯ ಆರ್.ಶೆಟ್ಟಿ ಪೆರಾರ ಮುಂಡಬೆಟ್ಟು ಸ್ವಾಗತಿಸಿದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ನಿರೂಪಿಸಿದರು. ತುಡರ್ ಪ್ರಕಾಶನದ ರವಿ ಶೆಟ್ಟಿ ಗೌರವಿಸಿದರು.

ಶಿಕ್ಷಕಿ ಮಂಜುಳಾ ಶೆಟ್ಟಿ ವಂದಿಸಿದರು. ಜ್ಯೂನಿಯರ್ ರಾಜಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಅವರು ಸಂಕಲನದಿಂದ ಆಯ್ದ ಕವನಗಳಿಗೆ ರಾಗ ಸಂಯೋಜಿಸಿ ಹಾಡಿದರು.

‘ನವ್ಯ ಕಾವ್ಯದಿಂದ ಭಾವ ಬರಡು’

ಕನ್ನಡದಲ್ಲಿ ಅತ್ಯುತ್ತಮ ನವ್ಯ ಕವಿತೆಗಳನ್ನು ಕೊಟ್ಟಿರುವ ಹಿರಿಯ ಕವಿ ಗೋಪಾಲಕೃಷ್ಣ ಅಡಿಗ ಮತ್ತು ಇತರ ನವ್ಯ ಕವಿಗಳನ್ನು ಅನುಸರಿಸಲು ಹೋದ ಎಳೆಯ ಕವಿಗಳು ಭಾವ ತೀವ್ರತೆಗೆ ಎರವಾಗಿ, ಬಹಳ ಸಪ್ಪೆ ಗದ್ಯದ ರಚನೆಯನ್ನೇ ಕಾವ್ಯದ ಒಡಲಾಗಿಸಿದಂತೆ ಕಾಣಿಸುತ್ತದೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಚಿನ್ನಪ್ಪ ಗೌಡ ಹೇಳಿದರು.

‘ತಾಯಿ– ಸಾಕು ತಾಯಿ’

‘ತುಳು ನಮಗೆ ತಾಯಿ ಭಾಷೆಯಾದರೆ ಕನ್ನಡ ತುಳುವಿನ ಸಾಕು ತಾಯಿಯಂತೆ. ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದ ಬಹುತೇಕ ತುಳುವರು ಈ ನೆಲದ ಉತ್ಕೃಷ್ಟ ಸಂಸ್ಕೃತಿಯನ್ನು ತಮ್ಮ ಕೃತಿಗಳಲ್ಲಿ ಕಟ್ಟಿ ಕೊಟ್ಟಿದ್ದಾರ’ ಎಂದು ಎ.ಸಿ.ಭಂಡಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.