ADVERTISEMENT

ಮಿಶ್ರ ಬೆಳೆಯಿಂದ ಯಶಸ್ವಿ ಕೃಷಿಕರಾಗಲು ಸಾಧ್ಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 9:54 IST
Last Updated 13 ಸೆಪ್ಟೆಂಬರ್ 2017, 9:54 IST
ಅಳದಂಗಡಿ ಪದವಿಪೂರ್ವ ಕಾಲೇಜಿನಲ್ಲಿ ಗೇರು ಕೃಷಿ ವಿಚಾರ ಸಂಕಿರಣ ಮತ್ತು ಗೇರು ಸಸಿಗಳ ವಿತರಣಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಉದ್ಘಾಟಿಸಿದರು.
ಅಳದಂಗಡಿ ಪದವಿಪೂರ್ವ ಕಾಲೇಜಿನಲ್ಲಿ ಗೇರು ಕೃಷಿ ವಿಚಾರ ಸಂಕಿರಣ ಮತ್ತು ಗೇರು ಸಸಿಗಳ ವಿತರಣಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಉದ್ಘಾಟಿಸಿದರು.   

ಬೆಳ್ತಂಗಡಿ: ಬೆಳೆಗಳ ಬಗ್ಗೆ ವೈಜ್ಞಾನಿಕವಾದ ಸಮರ್ಪಕ ಮಾಹಿತಿ ಇದ್ದರೆ ಲಾಭದಾಯಕವನ್ನಾಗಿಸಿಕೊಳ್ಳಬಹುದು. ಮಿಶ್ರ ಬೆಳೆಯಿಂದ ಕೃಷಿಕ ಯಶಸ್ವಿಯಾಗಲು ಸಾಧ್ಯ ಎಂದು ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಹೇಳಿದರು.

ಅಳದಂಗಡಿ ಪದವಿಪೂರ್ವ ಕಾಲೇಜಿನಲ್ಲಿ ಎಸ್‍ಕೆಡಿಆರ್‍ಡಿಪಿ ಅಳದಂಗಡಿ ವಲಯ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಮೂಡುಬಿದಿರೆಯ ಶ್ರೀ ವಿಜಯಲಕ್ಷ್ಮೀ ಫೌಂಡೇಶನ್ ಸಹಯೋಗದೊಂದಿಗೆ ಭಾನುವಾರ ನಡೆದ ಗೇರು ಕೃಷಿ ವಿಚಾರ ಸಂಕಿರಣ ಹಾಗೂ ಗೇರು ಸಸಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿನ ಕೃಷಿಕರಿಗೆ ಅಡಿಕೆ, ತೆಂಗು, ಭತ್ತ ಬೆಳೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದು, ಗೇರು ಕೃಷಿಯ ಬಗ್ಗೆ ವೈಜ್ಞಾನಿಕ ಮಾಹಿತಿ ಸಿಗುವ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆ. ರೈತರು ಇದರ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸಬೇಕು. ರೈತ ಒಂದೇ ಕೃಷಿಯನ್ನು ನಂಬಿ ಕುಳಿತುಕೊಳ್ಳಬಾರದು. ಮಿಶ್ರ ಕೃಷಿಯಿಂದ ಕೃಷಿಕ ಕೃಷಿಕನಾಗಿ ಸಂತೋಷಿತನಾಗಬೇಕು ಎಂಬ ಉದ್ದೇಶದಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಅವರು ಶ್ಲಾಘಿಸಿದರು.

ADVERTISEMENT

ಗೇರುಗಿಡಗಳನ್ನು ವಿತರಿಸಿ ಮಾತನಾಡಿದ ಶ್ರೀವಿಜಯಲಕ್ಷ್ಮೀ ಫೌಂಡೇಷನ್‍ನ ಸಂಸ್ಥಾಪಕ ಎ.ಕೆ.ರಾವ್ ‘ದೇಶದಲ್ಲಿ ವಾರ್ಷಿಕವಾಗಿ ಗೋಡಂಬಿಗೆ 20 ಲಕ್ಷ ಟನ್‌ನಷ್ಟು ಬೇಡಿಕೆ ಇದೆ. ಆದರೆ ಉತ್ಪಾದನೆಯಾಗುತ್ತಿರುವುದು 7.5 ಲಕ್ಷ ಟನ್‍ನಷ್ಟು ಮಾತ್ರ. ಯಾಂತ್ರೀಕರಣದಿಂದ 25 ಲಕ್ಷ ಟನ್ ಉತ್ಪಾದಿಸುವ ಸಾಮರ್ಥ್ಯ ನಮ್ಮ ರೈತರಿಗಿದೆ ಎಂದರು.

ಇಲ್ಲಿನ ಗೇರು ಬೀಜ ಕಾರ್ಖಾನೆಯವರು ಅನಿವಾರ್ಯವಾಗಿ ಆಫ್ರಿಕಾ, ವಿಯೆಟ್ನಾಂನ ಬೀಜಗಳನ್ನೇ ನೆಚ್ಚಿಕೊಂಡಿದ್ದು,  1,80,000 ಟನ್ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ 2ಲಕ್ಷ ಟನ್ ನಷ್ಟು ಬೇಡಿಕೆಯಿದ್ದರೂ ಉತ್ಪಾದನೆಯಾಗುತ್ತಿರುವುದು 60 ಸಾವಿರ ಟನ್ ಮಾತ್ರ ಎಂದರು.

ತಾಲ್ಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಮಾತನಾಡಿದರು. ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಬಿ.ರತ್ನಾಕರ ಶೆಟ್ಟಿ, ಲಯನ್ಸ್ ಕ್ಲಬ್ ಅಳದಂಗಡಿ ಅಧ್ಯಕ್ಷ ವಿಜಯ ಕುಮಾರ್ ಜೈನ್, ಅಳದಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಭಾಶ್ಚಂದ್ರ ರೈ, ಒಕ್ಕೂಟಗಳ ವಲಯಾಧ್ಯಕ್ಷ ದೀಪಕ್ ಆಠವಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಳದಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು  ಅಧ್ಯಕ್ಷತೆಯಲ್ಲಿ ಗೇರು ನಾಟಿ ಮತ್ತು ನಿರ್ವಹಣೆ-ಕೀಟ ಹಾಗೂ ರೋಗ ಭಾದೆ ವಿಷಯದಲ್ಲಿ ಗೋಷ್ಠಿ ನಡೆಯಿತು. ಮಂಗಳೂರು ಕೃಷಿ ವಿಜ್ಞಾನ ಕೇಂದ್ರ  ಇದರ ತೋಟಗಾರಿಕೆ ವಿಜ್ಞಾನಿ ರಶ್ಮಿ ಹಾಗೂ ಯೋಜನೆಯ ಹಸಿರು ಇಂಧನ ಕಾರ್ಯಕ್ರಮ ಯೋಜನಾಧಿಕಾರಿ ಸುಧೀರ್ ಜೈನ್ ಪವರ್‍ಪಾಯಿಂಟ್ ಮೂಲಕ ಗೋಷ್ಠಿಯನ್ನು ನಿರ್ವಹಿಸಿದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯಶೋಧರ ಸುವರ್ಣ ಉಪಸ್ಥಿತರಿದ್ದರು. ಅಂಡಿಂಜೆ ಕೃಷಿಕ ಗೋಪಾಲ ಗೌಡ ಅನುಭವ ಹಂಚಿಕೊಂಡರು. ಕಾರ್ಯಕ್ರಮಕ್ಕೆ ಗ್ರಾ.ಪಂ. ಅಳದಂಗಡಿ, ಅಳದಂಗಡಿ ಲಯನ್ಸ್ ಕ್ಲಬ್, ಅಳದಂಗಡಿ ಸಿ.ಎ. ಬ್ಯಾಂಕ್ ಸಹಯೋಗ ನೀಡಿತ್ತು.  ಯೋಜನೆಯ ಕೃಷಿ ಮೇಲ್ವಿಚಾರಕ ಉಮೇಶ್ ಸ್ವಾಗತಿಸಿದರು. ಕೃಷ್ಣಪ್ಪ ಪೂಜಾರಿ ಬಿಕ್ಕಿರ ವಂದಿಸಿದರು. ಅಳದಂಗಡಿ ವಲಯ ಮೇಲ್ವಿಚಾರಕ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.