ADVERTISEMENT

ಮೆರವಣಿಗೆಗೆ ಮೆರುಗು ನೀಡಿದ ‘ರಾಜಕೀಯ ನಾಯಕರ ಬೆಸುಗೆ’

ಮೋಹನ್ ಕೆ.ಶ್ರೀಯಾನ್
Published 20 ನವೆಂಬರ್ 2017, 5:33 IST
Last Updated 20 ನವೆಂಬರ್ 2017, 5:33 IST
ಕಾಂಗ್ರೆಸ್‌ ಮುಖಂಡ ಬಿ.ಜನಾರ್ದನ ಪೂಜಾರಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆರೋಗ್ಯ ವಿಚಾರಿಸುವ ಮೂಲಕ ಗಮನ ಸೆಳೆದರು.
ಕಾಂಗ್ರೆಸ್‌ ಮುಖಂಡ ಬಿ.ಜನಾರ್ದನ ಪೂಜಾರಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆರೋಗ್ಯ ವಿಚಾರಿಸುವ ಮೂಲಕ ಗಮನ ಸೆಳೆದರು.   

ಬಂಟ್ವಾಳ: ಪೊಳಲಿ ರಾಜರಾಜೇಶ್ವರಿ ಕ್ಷೇತ್ರಕ್ಕೆ ಕೊಡಿಮರ ತರಲು ಭಾನುವಾರ ನಡೆದ ಮೆರವಣಿಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ರಾಜಕೀಯ ಮುಖಂಡರ ಸಮಾಗಮಕ್ಕೆ ವೇದಿಕೆಯಾಯಿತು. ಬಹು ದಿನಗಳಿಂದ ದೂರ ಉಳಿದಿದ್ದ ನಾಯಕರು ಒಟ್ಟಾಗಿ ಕೈ ಕುಲುಕಿ, ಕುಶಲೋಪರಿ ನಡೆಸಿರುವುದು ಅಚ್ಚರಿಗೆ ಕಾರಣವಾಯಿತು.

ಬಿಲ್ಲವ ಸಮುದಾಯದ ವತಿಯಿಂದ ದೇವಸ್ಥಾನಕ್ಕೆ ಕೊಡಿಮರವನ್ನು ಸಮ ರ್ಪಣೆ ಮಾಡಲಾಗಿದೆ. ಸಮುದಾಯದ ಹಿರಿಯ ನಾಯಕ ಹಾಗೂ ಜಿಲ್ಲೆಯ ರಾಜಕಾರಣಿ ಬಿ.ಜನಾರ್ದನ ಪೂಜಾರಿ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಚುನಾವಣೆಯಲ್ಲಿ ಎರಡು ಬಾರಿ ಅವರನ್ನು ಮಣಿಸಿರುವ ಸಂಸದ ನಳಿನ್‌ ಕುಮಾರ್ ಕಟೀಲ್‌ ಹಾಗೂ ಒಂದೇ ಪಕ್ಷದಲ್ಲಿದ್ದರೂ ಭಿನ್ನಾ ಭಿಪ್ರಾಯದ ಕಾರಣದಿಂದ ದೂರ ಉಳಿದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಲವು ದಿನಗಳ ಬಳಿಕ ಪೂಜಾರಿ ಅವರೊಂದಿಗೆ ಕಾಣಿಸಿ ಕೊಂಡರು.

ನಮಸ್ಕಾರ, ಹಾರೈಕೆ: ನಳಿನ್‌ಕುಮಾರ್ ಕಟೀಲ್‌ ತುಸು ಮುಂಚಿತವಾಗಿಯೇ ಬಿ.ಸಿ.ರೋಡ್‍ ತಲುಪಿದ್ದರು. ಅಲ್ಲಿಗೆ ಬಂದ ಪೂಜಾರಿ ಅವರನ್ನು ಕಾರಿನ ಬಳಿ ಹೋಗಿ ಸ್ವಾಗತಿಸಿದರು. ಕೈ ಹಿಡಿದು ತುಸು ದೂರದವರೆಗೂ ಕರೆದುಕೊಂಡು ಬಂದರು. ಕಾರಿನಿಂದ ಇಳಿಯುವ ಮುನ್ನ ಕಟೀಲ್‌ ಕೈ ಮುಗಿದು ನಮಸ್ಕರಿಸಿದರೆ, ಪೂಜಾರಿ ಬೆನ್ನುತಟ್ಟಿ ಹರಸಿದರು. ಈ ಮಧ್ಯೆ ಪೂಜಾರಿಯವರ ಆರೋಗ್ಯ ಸ್ಥಿತಿ ಕುರಿತು ಸಂಸದರು ವಿಚಾರಿಸಿದರು.

ADVERTISEMENT

ಇಬ್ಬರೂ ಮುಖಂಡರು ಅಲ್ಲಿರುವ ವೇಳೆಯಲ್ಲೇ ರಮಾನಾಥ ರೈ ಬಿ.ಸಿ.ರೋಡ್ ತಲುಪಿದರು. ಹಲವು ದಿನಗ ಳಿಂದ ಪರಸ್ಪರ ಮಾತುಕತೆ ಇಲ್ಲದೇ ದೂರವಿರುವ ಪೂಜಾರಿ ಅವರ ಬಳಿ ಹೋಗಿ ಕೈ ಕುಲುಕಿದರು. ನಗುತ್ತಲೇ ಪೂಜಾರಿ ಅವರನ್ನು ಮಾತನಾಡಿಸಿ, ಆರೋಗ್ಯದ ಕುರಿತು ಕೇಳಿದರು.

ಹಲವರು ನಾಯಕರ ಸಮಾಗಮದ ಫೋಟೊಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಯಬಿಟ್ಟರು. ಪೂಜಾರಿ– ನಳಿನ್‌ ಮತ್ತು ಪೂಜಾರಿ– ರೈ ಅವರ ಆಪ್ತ ಭೇಟಿ ಜಿಲ್ಲೆಯ ರಾಜಕೀಯ ಬೆಳಗಣಿಗೆಗಳ ಕುರಿತ ತರಹೇವಾರಿ ಚರ್ಚೆಗೂ ನಾಂದಿ ಹಾಡಿತು. ವಾಟ್ಸ್ ಆ್ಯಪ್, ಫೇಸ್‌ ಬುಕ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಈ ನಾಯಕರ ಮುಖಾಮುಖಿ ಭೇಟಿಯ ಚಿತ್ರಗಳು ಭಾರಿ ಸದ್ದು ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.