ADVERTISEMENT

ಯಾರಿಗೆ ಕೃಷ್ಣನ ಆಶೀರ್ವಾದ...!

ದೇವಸ್ಥಾನದ ಬಳಿ ಎದುರಾದ ಲೋಬೊ– ಕಾಮತ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 11:04 IST
Last Updated 23 ಏಪ್ರಿಲ್ 2018, 11:04 IST

ಮಂಗಳೂರು: ಚುನಾವಣಾ ಕುರುಕ್ಷೇತ್ರಕ್ಕೆ ಧುಮುಕಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳಿಬ್ಬರು ಭಾನುವಾರ ಪರಸ್ಪರ ಎದುರಾಗಿದ್ದು, ಶ್ರೀಕೃಷ್ಣ ಆಶೀರ್ವಾದಕ್ಕೆ ಮುಗಿಬಿದ್ದರು.

ಸೋಮವಾರ ನಾಮಪತ್ರ ಸಲ್ಲಿಸಲು ನಿರ್ಧರಿಸಿರುವ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌. ಲೋಬೊ, ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್‌ ಕಾಮತ್‌, ಭಾನುವಾರ ನಗರದ ವಿವಿಧ ದೇವಸ್ಥಾನಗಳನ್ನು ಸುತ್ತಿದರು.

ಮಧ್ಯಾಹ್ನದ ವೇಳೆಗೆ ಜೆ.ಆರ್. ಲೋಬೊ ಅವರು ಮರೋಳಿ ಸೂರ್ಯ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ, ವಾಪಸಾಗಬೇಕು ಎನ್ನುವಷ್ಟರಲ್ಲಿಯೇ ವೇದವ್ಯಾಸ ಕಾಮತ್‌ ಅವರ ವಾಹನ ದೇವಸ್ಥಾನಕ್ಕೆ ಬಂತು. ಕಾಮತ್‌ರನ್ನು ಎದುರುಗೊಂಡ ಲೋಬೊ, ನಗುತ್ತಲೇ ಬರಮಾಡಿಕೊಂಡರು.

ADVERTISEMENT

ಕಾಮತ್ ಕಾರು ಇಳಿಯುತ್ತಿದ್ದಂತೆಯೇ ಮಾತನಾಡಿದ ಜೆ.ಆರ್. ಲೋಬೊ, ‘ಅರ್ಜುನ ಕೃಷ್ಣನ ಬಳಿ ಹೋಗಿ ಆಶೀರ್ವಾದ ಪಡೆದಂತೆ, ನಾನು ಮೊದಲೇ ಕೃಷ್ಣನ ಪಾದಕ್ಕೆ ಎರಗಿ ಆಶೀರ್ವಾದ ಪಡೆದಿದ್ದೇನೆ. ಇನ್ನು ನೀವು ಕೃಷ್ಣನ ತಲೆಯ ಬಳಿಯೇ ಕೂರಬೇಕು’ ಎಂದು ಹೇಳಿದರು.

ಇದಕ್ಕೆ ಅಷ್ಟೇ ಸಮಾಧಾನದಿಂದ ಉತ್ತರಿಸಿದ ವೇದವ್ಯಾಸ ಕಾಮತ್‌, ‘ಯಾರಿಗೆ ಆಶೀರ್ವಾದ ನೀಡಬೇಕು ಎನ್ನುವುದು ಶ್ರೀಕೃಷ್ಣ ಪರಮಾತ್ಮನಿಗೆ ಚೆನ್ನಾಗಿ ಗೊತ್ತಿದೆ’ ಎಂದರು.

‘ಏನು ನೀವು ಯುವಕರಂತೆ ಇನ್‌ಶರ್ಟ್‌ ಮಾಡಿಕೊಂಡು ಟ್ರಿಮ್ಮಾಗಿ ಬಂದ್ದಿದ್ದೀರಿ’ ಎಂಬ ಕಾಮತ್‌ರ ಮಾತಿಗೆ ಉತ್ತರಿಸಿದ ಲೋಬೊ, ‘ನಿಮ್ಮಂತಹ ಯುವಕರು ಇರುವಾಗ ನಾವು ಇಷ್ಟು ಮಾಡದಿದ್ದರೆ ಹೇಗೆ’ ಎಂದರು.

ಇದಾದ ನಂತರ ಮಾತನಾಡಿದ ವೇದವ್ಯಾಸ ಕಾಮತ್‌, ‘ಸೈದ್ಧಾಂತಿಕವಾಗಿ ನಾವು ಬೇರೆ ಬೇರೆ ಪಕ್ಷದಲ್ಲಿದ್ದರೂ, ಇಬ್ಬರೂ ಮಂಗಳೂರಿನವರು. ಮಂಗಳೂರಿನ ಅಭಿವೃದ್ಧಿಗಾಗಿ ಒಳ್ಳೆಯ ರೀತಿಯಲ್ಲಿ ಚುನಾವಣೆ ಎದುರಿಸೋಣ’ ಎಂದು ಹೇಳಿದರು.

ನಂತರ ಅಷ್ಟಿಷ್ಟು ಉಭಯಕುಶಲೋಪರಿ ವಿಚಾರಿಸಿದ ಉಭಯ ನಾಯಕರು, ಕೈಕುಲುಕಿದರು. ಬಳಿಕ ಲೋಬೊ ಕಾರನ್ನೇರಿ ಮುಂದಿನ ಪ್ರಯಾಣ ಬೆಳೆಸಿದರೆ, ಕಾಮತ್‌ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.