ADVERTISEMENT

‘ವಕ್ಫ್‌ ಆಸ್ತಿ ಸಂರಕ್ಷಿಸಲು ಕಾರ್ಯಪಡೆ ರಚನೆ’

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 5:14 IST
Last Updated 30 ಡಿಸೆಂಬರ್ 2017, 5:14 IST

ಮಂಗಳೂರು: ವಕ್ಫ್ ಆಸ್ತಿಯನ್ನು ಮರಳಿ ಪಡೆಯಲು ಹೋರಾಟ ಸಮಿತಿಯ ಅಗತ್ಯ ಕಂಡು ಬರುವುದಿಲ್ಲ. ವಕ್ಫ್ ಆಸ್ತಿಗಳನ್ನು ಸಂರಕ್ಷಿಸುವ ಸಲುವಾಗಿ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಜಿಲ್ಲಾ ವಕ್ಫ್‌ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ ಮೋನು ಕಣಚೂರು ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದಲ್ಲಿ ವಕ್ಫ್‌ ಆಸ್ತಿಗಳನ್ನು ಸಂರಕ್ಷಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಅಧ್ಯಕ್ಷರಾಗಿರುತ್ತಾರೆ. ಇದರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗೃಹ, ಸಾರಿಗೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಮುಖ್ಯಸ್ಥರು ಸದಸ್ಯರಾಗಿರುತ್ತಾರೆ. ವಕ್ಫ್‌ ಆಸ್ತಿಗಳು ಒತ್ತುವರಿಯಾಗಿದ್ದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಅಧಿಕಾರ ವಕ್ಫ್‌ ಕಾರ್ಯಪಡೆಗೆ ಇದೆ. ಯಾರಿಗೂ ವಕ್ಫ್‌ ಆಸ್ತಿ ರಕ್ಷಣೆಗೆ ಹೋರಾಟ ಸಮಿತಿ ರಚನೆ ಮಾಡಿ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.

ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿ ಮಸೀದಿ, ಮದ್ರಸ ಹಾಗೂ ದರ್ಗಾ ಪದಾಧಿಕಾರಿಗಳನ್ನು ಸೇರಿಸಿ ಇಲಾಖೆಯಿಂದ ಅವುಗಳಿಗೆ ಸಿಗಬೇಕಾದ ಸೌಲಭ್ಯಗಳ ಮಾಹಿತಿ ನೀಡಲಾಗುವುದು. ಇದರ ಭಾಗವಾಗಿ ಮುಂದಿನ ವರ್ಷ ಬಂಟ್ವಾಳ ತಾಲ್ಲೂಕಿನಿಂದ ಈ ಕಾರ್ಯಕ್ರಮ ಪ್ರಾರಂಭವಾಗಲಿರುವುದು. ಬಂಟ್ವಾಳ ಶಾಸಕ ಹಾಗೂ ಉಸ್ತುವಾರಿ ಸಚಿವ ರೈ ಅವರು ಈ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಜೀರ್‌ ಮಠ್, ಅಬೂಬಕ್ಕರ್‌, ಡಿ.ಎಂ. ಆಸ್ಲಮ್‌, ಬಾಷಾ ತಂಗಳ್‌, ನೂರುದ್ದೀನ್‌ ಸಾಲ್ಮರ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.