ADVERTISEMENT

ವೈದ್ಯರ ಕೆಲಸಕ್ಕೆ ಸುರಕ್ಷಿತ ವಾತಾವರಣ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮೇ 2017, 5:53 IST
Last Updated 23 ಮೇ 2017, 5:53 IST

ಮಂಗಳೂರು: ವೈದ್ಯರ ರಕ್ಷಣೆಗಾಗಿ ಕಾನೂನುಗಳು ಇದ್ದರೂ ಅವರು ದಾಳಿಗೆ ಒಳಗಾಗುವ ಸಂಭವ ಇದೆ ಎನ್ನುವುದನ್ನು ಇತ್ತೀಚೆಗೆ ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿ ನಡೆದ ಘಟನೆ ಸಾಬೀತು ಮಾಡಿದೆ ಎಂದು ಭಾರತೀಯ ವೈದ್ಯಕೀಯ ಸಂಘಟನೆಯ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ರಾಘವೇಂದ್ರ ಭಟ್‌ ಹೇಳಿದರು.

ಇತ್ತೀಚೆಗೆ ಯೇನೆಪೋಯ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಸಂಬಂಧಿಕರು ಅಲ್ಲಿನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಅಭಿಜಿತ್‌ ಸುಧಾಕರ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಅವರನ್ನು ಅಪಹರಿಸಿದ ಪ್ರಕರಣವನ್ನು ವಿರೋಧಿಸಿ ವೈದ್ಯಕೀಯ ಸಿಬ್ಬಂದಿ, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಅರೆವೈದ್ಯ ಕೀಯ ಕಾಲೇಜು ವಿದ್ಯಾರ್ಥಿಗಳು ನಗರದ ಅಂಬೇಡ್ಕರ್‌ ವೃತ್ತದಿಂದ ನೆಹರು ಮೈದಾನದವರೆಗೆ ಮೆರವಣಿಗೆ ನಡೆಸಿದ ಬಳಿಕ ಮೈದಾನದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ವೈದ್ಯಕೀಯ ಸೇವಾ ಸಿಬ್ಬಂದಿ ಮೇಲೆ ನಡೆಯುವ ಹಿಂಸೆಯನ್ನು ತಡೆಯುವ ಮತ್ತು ವೈದ್ಯಕೀಯ ಸೇವಾ ಸಂಸ್ಥೆಗಳ ಮೇಲಾಗುವ ಹಾನಿಯನ್ನು ತಡೆಯುವ ಕಾಯ್ದೆಯೊಂದನ್ನು ರಾಜ್ಯ ಸರ್ಕಾರವು 2009ರಲ್ಲಿ ತಂದಿದೆ. ಆದರೆ ಆ ಕಾಯ್ದೆ ಪ್ರಕಾರ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದ್ದರಿಂದ ವೈದ್ಯರ ಪರವಾಗಿರುವ ಕಾಯ್ದೆಗಳು ಕೇವಲ ಕಾಗದ ಪತ್ರದ ಮೇಲಷ್ಟೇ ಉಳಿಯುವಂತಾಗಿದೆ ಎಂದರು.

ADVERTISEMENT

ವೈದ್ಯರ ಮೇಲೆ ಹಲ್ಲೆ ಮಾಡುವುದು ಮತ್ತು ಅವರನ್ನೇ ಅಪಹರಿಸುವುದು ಭಯೋತ್ಪಾದನೆಯೇ ಸರಿ. ಇಂತಹ ಘಟನೆಗಳು ಇಡೀ ವೈದ್ಯಕೀಯ ಸಮುದಾಯದ ಅತ್ಮಸ್ಥೈರ್ಯ ಕುಸಿಯು ವಂತೆ ಮಾಡುತ್ತದೆ. ವೈದ್ಯಕೀಯ ಸಮುದಾಯವೇ ಗೂಂಡಾಗಳ ಕಾಟಕ್ಕೆ ಸುಲಭದ ತುತ್ತಾದಂತೆ ಇದೆ. ಇಂತಹ ಘಟನೆಗಳ ವಿರುದ್ಧ ಕ್ರಮ ತೆಗೆದು ಕೊಳ್ಳದೇ ಇದ್ದರೆ, ರೋಗಿಗಳ ಆರೋ ಗ್ಯದ ಮೇಲೆ ಇವು ತೀವ್ರ ಪರಿಣಾಮ ಬೀರುತ್ತವೆ.

ರೋಗಿಯ ಒಳಿತಿಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ವೈದ್ಯರು ಹಿಂದೇಟು ಹಾಕಬೇಕಾದ ಪರಿಸ್ಥಿತಿ ಸೃಷ್ಟಿಯಾ ದಂತಿದೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದರು. 

ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಶಾಂತಾರಾಮ್‌ ಶೆಟ್ಟಿ ಮಾತನಾಡಿ, ‘ಎಲ್ಲ ವೈದ್ಯರು ಕರ್ತವ್ಯಕ್ಕೆ ಬದ್ಧರಾಗಿ, ನಿಯಮಗಳಿಗೆ ಅನುಸಾರ ಕೆಲಸ ಮಾಡುತ್ತಾ ಇರುತ್ತಾರೆ. ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದರು.ಹಲ್ಲೆ ಪ್ರಕರಣವನ್ನು ಉಲ್ಲೇಖಿಸಿ, ವೈದ್ಯರ ಸೌಜನ್ಯ ಮತ್ತು ಒಳ್ಳೆಯತನವನ್ನು ಅವರ ದೌರ್ಬಲ್ಯ ಎಂಬಂತೆ ಪರಿಗಣಿಸ ಬಾರದು ಎಂದರು.

ಸುಮಾರು 90 ವರ್ಷ ವಯಸ್ಸಿನ ಶ್ರೀನಿವಾಸ ಕಾಮತ್‌ ಕೂಡ ಪ್ರತಿಭಟನೆ ಯಲ್ಲಿ ಭಾಗವಹಿಸಿ ವೈದ್ಯರಿಗೆ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಡಾ. ಕೆ. ಜಿ. ಜಗದೀಶ ಅವರಿಗೆ ಮನವಿ ಪತ್ರ ಸಲ್ಲಿಸಿ, ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ನಿಟ್ಟಿ ನಲ್ಲಿ ಸಂಯೋಜನಾ ಸಮಿತಿ ಯೊಂದನ್ನು ರಚಿಸಬೇಕು ಎಂದು ಆಗ್ರಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.