ADVERTISEMENT

‘ಶಾಂತಿ ಕಾಪಾಡಲು ಬೀಟ್‌ ಪದ್ಧತಿ’

ಕಂದಾವರ ಗ್ರಾಮ ಸಭೆಯಲ್ಲಿ ಬಜ್ಪೆ ಎಸ್‍ಐ ರಾಜಾರಾಂ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:32 IST
Last Updated 17 ಜುಲೈ 2017, 7:32 IST

ಬಜ್ಪೆ: ಗ್ರಾಮ ಮಟ್ಟದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಬೀಟ್ ಪದ್ಧತಿ ಅಳವಡಿಸಲಾಗುವುದು ಎಂದು ಬಜ್ಪೆ ಠಾಣಾ ಎಸ್‍ಐ ರಾಜಾರಾಂ ಹೇಳಿದ್ದಾರೆ.

ಗುರುಪುರ ಕೈಕಂಬ ವ್ಯಾಪ್ತಿಯ ಕಂದಾವರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಇತ್ತೀಚೆಗೆ ಜಿಲ್ಲೆಯಲ್ಲಿ ಅನೇಕ ಗಲಭೆ ಪ್ರಕರಣಗಳು ನಡೆದಿವೆ. ಅದಕ್ಕೆಲ್ಲ ಹೆಚ್ಚಾಗಿ ವದಂತಿಯೇ ಕಾರಣ. ಈ ಕಾರಣದಿಂದ ಬಜ್ಪೆ ಠಾಣಾ ವ್ಯಾಪ್ತಿಯ 46 ಕಡೆಗಳಲ್ಲಿ ಬೀಟ್ ಪದ್ಧತಿ ಅಳವಡಿಸಲಾಗುವುದು. ಗ್ರಾಮದ 50 ಜನರನ್ನೊಳಗೊಂಡ ಪ್ರದೇಶದಲ್ಲಿ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್‌ ನಿಯೋಜಿಸಲಾಗುತ್ತದೆ. ಇಲ್ಲಿ ವಾಟ್ಸ್‌ಆ್ಯಪ್‌ ಗುಂಪು ರಚಿಸಿಕೊಂಡು ಗ್ರಾಮಸ್ಥರು ಹಾಗೂ ಪೊಲೀಸರ ಜತೆಗೆ ಮಾಹಿತಿ ವಿನಿಮಯ ಮಾಡಲಾಗುತ್ತದೆ. ಊರಿನಲ್ಲಿ ಅಪಘಾತ, ಗಲಭೆ, ಇತ್ಯಾದಿ ಅನಾಹುತ ನಡೆದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯ  ಎಂದು ಅವರು ನುಡಿದರು.

ADVERTISEMENT

ಎಡಪದವಿನಲ್ಲಿ ಈಚೆಗೆ ನಡೆದ ಅಬೂಬಕ್ಕರ್ ಹಲ್ಲೆ ಪ್ರಕರಣವನ್ನು ತಾವು ನಿಭಾಯಿಸಿ ಪರಿಸ್ಥಿತಿಗೆ ತಂದಿರುವುದರ ಬಗ್ಗೆ ಗ್ರಾಮ ಸಭೆಯಲ್ಲಿ ತಿಳಿಸಿದರು. ಕುಪ್ಪೆಪದವು ನಿವಾಸಿ ಅಬೂಬಕ್ಕರ್ ಎಂಬಾತ ತನ್ನ ಮೇಲೆ ಅನ್ಯಕೋಮಿನವರು ಹೊಡೆದು ಪರಾರಿಯಾದರೆಂದು ತಿಳಿಸಿ ಆಸ್ಪತ್ರೆಗೆ ದಾಖಲಾದ. ಈ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಸುದ್ದಿ ಹರಡಿ ಗಲಭೆಯಾಗುವ ವಾತಾವರಣ ಸೃಷ್ಟಿಯಾಗಿತ್ತು. ಎಡಪದವು ಹಾಗೂ ಕುಪ್ಪೆಪದವು ಕಡೆಗಳ ಜನರು ಒಟ್ಟಾಗಿದ್ದರು. ಪೊಲೀಸರು ತನಿಖೆ ನಡೆಸಿದಾಗ ಅಬೂಬಕ್ಕರ್ ಸಿದ್ದಿಕ್ ತಲೆಯ ಮೇಲೆ ತಾನೇ ಗೀರಿ ಗಾಯ ಮಾಡಿಕೊಂಡಿರುವುದು ಬಹಿರಂಗವಾಯಿತು. ವಾಟ್ಸ್‌ಆ್ಯಪ್‌ನಲ್ಲಿ ಹರಡಿದ ವದಂತಿಯಿಂದ ಅನಾಹುತ ಸೃಷ್ಟಿಯಾಗುವ ಸಾಧ್ಯತೆ ಇತ್ತು. ಆದರೆ ಪೊಲೀಸರು ಈ ಪ್ರಕರಣವನ್ನು ಸರಿಯಾಗಿ ನಿಭಾಯಿಸಿದ್ದರಿಂದ ಯಾವುದೇ ಅನಾಹುತ ಉಂಟಾಗಲಿಲ್ಲ. ಆದ್ದರಿಂದ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ವದಂತಿ ಹರಡಬೇಡಿ, ಪೊಲೀಸರ ಜತೆಗೆ ಮಾಹಿತಿ ವಿನಿಮಯ ಮಾಡಿಕೊಳ್ಳಿ ಎಂದು ತಿಳಿಸಿದರು.

ಬಜ್ಪೆ ವ್ಯಾಪ್ತಿಯಲ್ಲಿ ಸಂಚಾರ ತೊಂದರೆ ಇದೆ ಇದನ್ನು ನಿಭಾಯಿಸಲಾಗುತ್ತಿದೆ. ಸಣ್ಣ ಮಕ್ಕಳಿಗೆ ವಾಹನ ಕೊಡಬೇಡಿ. ಪರವಾನಗಿ ಹಾಗೂ ವಿಮೆ ಇಲ್ಲದೆ ವಾಹನ ಸಂಚಾರ ಅಪರಾಧ. 18 ವರ್ಷದ ಒಳಗಿನವರು ವಾಹನ ಓಡಿಸಿದರೆ ಅವರ ತಂದೆ ತಾಯಿಯ ಮೇಲೆ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ವಿವರಿಸಿದರು.

ಸಭೆಯಲ್ಲಿ ವಿದ್ಯುತ್, ಪಡಿತರ, ನೀರು, ಕಸ ಇತ್ಯಾದಿ ವಿಚಾರಗಳು ಚರ್ಚೆಗೆ ಬಂದವು. ಸಭೆಯಲ್ಲಿ ವಿವಿಧ ಸಂಪನ್ಮೂಲ ಅಧಿಕಾರಿಗಳು ಇದ್ದರು.

**

ಸದ್ದು ಮಾಡಿದ ಹಕ್ಕು ಪತ್ರ

ಗ್ರಾಮ ಸಭೆಯಲ್ಲಿ ಹಕ್ಕುಪತ್ರದ ವಿಚಾರ ಚರ್ಚೆಗೆ ಬಂತು. 15 ವರ್ಷಗಳಿಂದ ಹಕ್ಕು ಪತ್ರ ಸಿಕ್ಕಿಲ್ಲ. ಕೆಲವರಿಗೆ ಎರಡೆರಡು ಹಕ್ಕು ಪತ್ರ ಸಿಕ್ಕಿವೆ. ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಸುಸ್ತಾಗಿ ಜಾಗ ಖರೀದಿ ಮಾಡಿದರೆ ಅವರ ಹಕ್ಕು ಪತ್ರವನ್ನು ರದ್ದುಗೊಳಿಸಲಾಗುತ್ತದೆ. ಪಂಚಾಯಿತಿನಲ್ಲಿ ಒಮ್ಮೆ ತಗೆದುಕೊಂಡ ನಿರ್ಣಯವನ್ನು ಬದಲಿಸಿ ಬೇರೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂಬ ಹಲವು ಚರ್ಚೆ ನಡೆಯಿತು. ಈ ಬಗ್ಗೆ ಮಾತಾಡಿದ ಪಂಚಾಯಿತಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಹಕ್ಕು ಪತ್ರ ಸಿಗದವರು ಅರ್ಜಿ ಸಲ್ಲಿಸಿದರೆ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗುತ್ತದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.