ADVERTISEMENT

ಸಂಘ ಪರಿವಾರದಿಂದ ಕೋಮುಗಲಭೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 29 ಮೇ 2017, 9:15 IST
Last Updated 29 ಮೇ 2017, 9:15 IST

ಮಂಗಳೂರು: ‘ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಮುಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಸಂಘ ಪರಿವಾರ ಯತ್ನಿಸುತ್ತಿದೆ. ಅದರ ಭಾಗವಾಗಿಯೇ ಕಲ್ಲಡ್ಕದಲ್ಲಿ ಚೂರಿ ಇರಿತದ ಘಟನೆ ನಡೆದಿದೆ’ ಎಂದು ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಆರೋಪಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಯನ್ನು ಗುರಿಯಾಗಿ ಇರಿಸಿಕೊಂಡು ಕರಾವಳಿ ಭಾಗದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಲು ಸಂಘ ಪರಿವಾ ರದ ಸಂಘಟನೆಗಳು ಹೊಂಚು ಹಾಕು ತ್ತಿವೆ. ಕಲ್ಲಡ್ಕ ಪಟ್ಟಣದಲ್ಲಿ ಶುಕ್ರವಾರ ನಡೆದ ಘಟನೆಯಲ್ಲಿ ಯಾವ ಕಾರಣವೂ ಇಲ್ಲದೆ ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿ, ಚೂರಿಯಿಂದ ಇರಿಯಲಾಗಿದೆ. ಈ ಘಟನೆಯ ಹಿಂದೆ ಪ್ರಬಲವಾದ ಪಿತೂರಿ ಇದೆ’ ಎಂದರು.

‘ಚೂರಿ ಇರಿದವರನ್ನು ಸಮರ್ಥಿಸಿ ಕೊಂಡಿರುವ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌, ‘ಅದು ಆತ್ಮ ರಕ್ಷಣೆಗಾಗಿ ಮಾಡಿದ ಕೃತ್ಯ’ ಎಂದಿದ್ದಾರೆ. ಹಲ್ಲೆ ಮತ್ತು ಚೂರಿ ಇರಿತದಲ್ಲಿ ಭಾಗಿಯಾದವರು ಪ್ರಭಾಕರ ಭಟ್‌ ಅವರ ಶಿಷ್ಯರು. ಅವರಲ್ಲಿ ಮಿಥುನ್‌ ಎಂಬಾತ ಎರಡು ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ಭಾಗಿಯಾ ಗಿದ್ದಾನೆ. ಎಲ್ಲ ಸಂದರ್ಭಗಳಲ್ಲಿ ಆತ ಜಾಮೀನು ಪಡೆದು ಜೈಲಿನಿಂದ ಹೊರಬರಲು ಪ್ರಭಾಕರ ಭಟ್‌ ನೆರವು ನೀಡಿದ್ದರು’ ಎಂದು ಆರೋಪಿಸಿದರು.

ADVERTISEMENT

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಇಂತಹ ಕೃತ್ಯಗಳ ಹಿಂದೆ ಪ್ರಭಾ ಕರ ಭಟ್‌ ಕೈವಾಡ ಇರುತ್ತದೆ. ಜಿಲ್ಲೆಯ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಅವರು ಈ ಸಮಯದಲ್ಲಿ ಜೈಲಿನಲ್ಲಿ ಇರಬೇಕಾಗಿತ್ತು. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕೂಡ ಪ್ರಭಾಕರ ಭಟ್‌ ವಿರುದ್ಧ ಕ್ರಮ ಜರುಗಿಸುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಕೂಡ ಸಂಘ ಪರಿವಾರದ ಕೋಮು ಪ್ರಚೋದನೆಯ ರಾಜಕಾರಣವನ್ನು ಬಗ್ಗುಬಡಿಯಲು ಯಾವ ಕ್ರಮವನ್ನೂ ಜರುಗಿಸಿಲ್ಲ’ ಎಂದರು.

‘ಬಂಟ್ವಾಳದಲ್ಲಿ ಹಿಂದೂಗಳು ಅಭ ದ್ರತೆಯಲ್ಲಿದ್ದಾರೆ ಎಂಬುದಾಗಿ ಪ್ರಭಾಕರ ಭಟ್‌ ಪ್ರಚೋದನಕಾರಿ ಹೇಳಿಕೆ ನೀಡಿ ದ್ದಾರೆ. ಕರಾವಳಿಯಲ್ಲಿ ಮುಸ್ಲಿಂ ಧರ್ಮೀ ಯರ ಮೇಲೆ ಸಂಘ ಪರಿವಾರದಿಂದ ನಿರಂತರವಾಗಿ ಹಲ್ಲೆ, ದೌರ್ಜನ್ಯ ನಡೆ ಯುತ್ತಿದೆ. ಆದರೆ, ಈಗ ಹಿಂದೂಗಳು ಅಭದ್ರತೆಯಲ್ಲಿದ್ದಾರೆ ಎಂಬ ಹೇಳಿಕೆ ಮೂಲಕ ದಾಳಿಗಳಿಗೆ ಪ್ರಚೋದನೆ ನೀಡಲು ಮುಂದಾಗಿದ್ದಾರೆ’ ಎಂದರು.

ಐದು ಕಡೆ ಸ್ಪರ್ಧೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡುಬಿದಿರೆ, ಉಳ್ಳಾಲ ಮತ್ತು ಬೆಳ್ತಂಗಡಿ ಕ್ಷೇತ್ರದಲ್ಲಿ ಸ್ಪರ್ಧಿ ಸಲಿದೆ. ಈಗಾಗಲೇ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಪಕ್ಷದ ರಾಜ್ಯ ಮಂಡಳಿ ಅನುಮೋದನೆ ಬಳಿಕ ಹೆಸರು ಪ್ರಕಟಿಸಲಾಗುವುದು ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

ಸಿಪಿಎಂ ರಾಜ್ಯ ಮಂಡಳಿ ಸದಸ್ಯ ರಾದ ಜೆ.ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಸುನೀಲ್‌ ಕುಮಾರ್ ಬಜಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.