ADVERTISEMENT

ಸವಾರಿ ಜತೆ ಹೆಜ್ಜೆ ಹಾಕಿದ ಭಕ್ತರು

ಅವಭೃತ ಸ್ನಾನಕ್ಕೆ ಮಹಾಲಿಂಗೇಶ್ವರ ದೇವರ ಪಯಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2014, 7:54 IST
Last Updated 19 ಏಪ್ರಿಲ್ 2014, 7:54 IST

ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಮಹಾ­ತೋಬಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ದೇವರ ಅವಭೃತ ಸ್ನಾನ ಸವಾರಿ ಶುಕ್ರವಾರ ಸಂಜೆ ದೇವಾಲಯದಿಂದ ಪುತ್ತೂರು ಪೇಟೆಯ ಮುಖ್ಯ ರಸ್ತೆಯಾಗಿ ವೀರಮಂಗಲಕ್ಕೆ ಸಾಗಿತು. ಸಹಸ್ರಾರು  ಸಂಖ್ಯೆಯಲ್ಲಿ ಭಕ್ತರು ದೇವರ ಸವಾರಿಯ ಜತೆ ಹೆಜ್ಜೆ ಹಾಕಿದರು.

ಅರ್ಚಕ ಪ್ರೀತಂ ಪುತ್ತೂರಾಯ ಅವರು ದೇವರ ಮೂರ್ತಿ ಹೊತ್ತು ಸವಾರಿ ಹೊರಟರು. ಪುತ್ತೂರು ಪೇಟೆಯ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ದೇವರಿಗೆ ಕಟ್ಟಪೂಜೆ, ದೀಪಾರಾಧನೆ, ಕರ್ಪೂರ ಆರತಿ -ಅರ್ಚನೆ ನಡೆಯಿತು. ಪುತ್ತೂರು ಪೇಟೆಯ ಕಲ್ಲಾರೆ, ದರ್ಬೆ, ಕಾವೇರಿಕಟ್ಟೆ ಸೇರಿದಂತೆ ಅಲ್ಲಿಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದಾರಿಯುದ್ದಕ್ಕೂ ಅಲ್ಲಲ್ಲಿ ಭಾರಿ ಪ್ರಮಾಣದ ಸುಡುಮದ್ದು ಪ್ರದರ್ಶನ ನಡೆಯಿತು.

ದೇವರ ಅವಭೃತ ಸ್ನಾನ ಸವಾರಿ ರಾತ್ರಿಯ ವೇಳೆಗೆ ಪುತ್ತೂರಿನ ಅರುಣಾ ಚಿತ್ರ ಮಂದಿರ ಬಳಿಗೆ ಬಂದಿದ್ದು, ಬಳಿಕ ಅಲ್ಲಿಂದ ಮುಖ್ಯ ರಸ್ತೆಯಾಗಿ ದರ್ಬೆ ತನಕ ಸಾಗಿ, ನಂತರ ಕಾಣಿಯೂರು ರಸ್ತೆಯಾಗಿ ವೀರ ಮಂಗಲ ಕಡೆಗೆ ಸಾಗಿತು.

ಐಸ್‌ಕ್ರೀಂನಲ್ಲಿ ಏಕತೆ ಸಂದೇಶ: ಪುತ್ತೂರಿನ ಕೆಳಗಿನ ಪೇಟೆ ಜೈಟೌನ್ ಫ್ರೆಂಡ್ಸ್‌ನವರು ದೇವರ ಸವಾರಿಯ ವೇಳೆ ಬಸ್ ನಿಲ್ದಾಣ ಸಮೀಪದ ಹೆಗ್ಡೆ ಪ್ಲಾಸ್ಟಿಕ್ ಅಂಗಡಿಯ ಎದುರಿನ ಮುಖ್ಯ ರಸ್ತೆಯಲ್ಲಿ ಐಸ್‌ಕ್ರೀಂ  ಮತ್ತು  ಫ್ರುಟ್ ಸಲಾಡ್ ವಿತರಿಸುವ ಮೂಲಕ ದೇವರ ಸವಾರಿಯಲ್ಲಿ ಪಾಲ್ಗೊಂಡು ಬಸವಳಿದಿದ್ದ ಭಕ್ತರ ಮನತಣಿಸಿದರು.

ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ಹೆಗ್ಡೆ, ಅಧ್ಯಕ್ಷ ನರಸಿಂಹ ಹೆಗ್ಡೆ, ಸದಸ್ಯರಾದ ರೋಶನ್ ರೈ ಬನ್ನೂರು, ಮಯೂರ್ ಹೆಗ್ಡೆ, ದಾಮೋದರ್ ಹೆಗ್ಡೆ, ರಝಾಕ್ ಬಿ.ಎಚ್, ಮಹೇಶ್ ಶೆಣೈ, ವೆಂಕಟೇಶ್ ಶೆಣೈ, ಅಝೀಝ್ ಸಿಟಿ 21, ಮಹಮ್ಮದ್ ಬಿ.ಎಚ್, ಇಸ್ಮಾಯಿಲ್, ಶಿವ್, ರಂಜಿತ್, ಸಹನ್, ರಿತೇಶ್, ದಿನೇಶ್ ಭಟ್, ಸಿದ್ಧಾರ್ಥ್, ಇಬ್ರಾಹಿಂ ಅವರು ಜಾತಿ ಮತ ಬೇಧ ಮರೆತು ಜತೆಯಾಗಿ ಈ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೊಂದು ಸೌಹಾರ್ದ ಸಂದೇಶ ಸಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.