ADVERTISEMENT

ಸಿಬಿಐ, ನ್ಯಾಯಾಂಗ ತನಿಖೆಗೆ ಆದೇಶಿಸಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 8:30 IST
Last Updated 13 ನವೆಂಬರ್ 2017, 8:30 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಮಂಗಳೂರು: ‘ತಾನು ಭ್ರಷ್ಟಾಚಾರ ಮಾಡಿಯೇ ಇಲ್ಲ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕತ್ತಿದ್ದರೆ ಅವರ ವಿರುದ್ಧದ ಆರೋಪಗಳ ಕುರಿತು ಸಿಬಿಐ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದರು.

ಭಾನುವಾರ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಭ್ರಷ್ಟಾಚಾರ ಮಾಡಿರುವುದಕ್ಕೆ ದಾಖಲೆ ಕೊಡಿ ಎಂದು ಮುಖ್ಯಮಂತ್ರಿ ಪದೇ ಪದೇ ಕೇಳುತ್ತಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅಕ್ರಮ ಡಿನೋಟಿಫಿಕೇಷನ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅನುದಾನದ ದುರ್ಬಳಕೆ, ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜು ಡೈರಿ ಹಗರಣ, ದುಬಾರಿ ವಾಚ್‌ ಹಗರಣ, ಮುಖ್ಯಮಂತ್ರಿ ಮಗನ ಪ್ರಯೋಗಾಲಯಕ್ಕೆ ಅನುಮತಿ ನೀಡುವಲ್ಲಿ ನಡೆದ ಅಕ್ರಮಗಳಿಗೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಸ್ವಯಂ ರಕ್ಷಣೆಗಾಗಿ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿ ರಚಿಸಿದರು. ಮುಖ್ಯಮಂತ್ರಿ ವಿರುದ್ಧ ದಾಖಲಾದ 30 ದೂರುಗಳ ಕುರಿತು ಎಸಿಬಿ ಅಧಿಕಾರಿಗಳು ತನಿಖೆಯನ್ನೇ ನಡೆಸಿಲ್ಲ. ಈ ಎಲ್ಲ ವಿವರಗಳನ್ನೂ ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಬಹಿರಂಗಪಡಿಸುತ್ತದೆ. ಮುಖ್ಯಮಂತ್ರಿಗೆ ತಾಕತ್ತಿದ್ದರೆ ತನಿಖೆಗೆ ಆದೇಶಿಸಲಿ ಎಂದು ಆಗ್ರಹಿಸಿದರು.

ADVERTISEMENT

ರಾಜ್ಯ ಸರ್ಕಾರ ದಿವಾಳಿ: ‘ಸಿದ್ದರಾಮಯ್ಯ ಅವರ ದುರಾಡಳಿತದಿಂದ ರಾಜ್ಯ ಸರ್ಕಾರ ದಿವಾಳಿ ಆಗಿದೆ. ರೈತರ ಸಾಲಮನ್ನಾ ಹಣ ಹೊಂದಿಸಲಾಗದೇ ಮೈಸೂರು ಮಿನರಲ್ಸ್‌ ಕಂಪೆನಿಯ ₹ 1,400 ಕೋಟಿ ಮೊತ್ತದ ಠೇವಣಿಗೆ ಕೈ ಹಾಕಿದ್ದಾರೆ. ಬಿಬಿಎಂಪಿ ಆಸ್ತಿಗಳನ್ನು ಅಡವಿರಿಸಿ ಸಾಲ ಪಡೆದಿದ್ದಾರೆ. ಯಾವ ಕೆಲಸವನ್ನೂ ಮಾಡಲಾಗದೇ ಬರೀ ಭರವಸೆ ಕೊಟ್ಟುಕೊಂಡು ತಿರುಗುವ ಪರಿಸ್ಥಿತಿ ಬಂದಿದೆ’ ಎಂದು ಆರೋಪಿಸಿದರು.

ಬಡವರ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಯೋಜನೆಯಲ್ಲೂ ಈ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಬಟ್ಟೆ ವಿತರಿಸಲಾಗಿದೆ. ಹೊಲಿಗೆ ವೆಚ್ಚವನ್ನು ಈವರೆಗೆ ನೀಡಿಲ್ಲ. ಆ ಬಟ್ಟೆಯನ್ನು ಹೊಲಿಸಿ, ಧರಿಸಲಾಗದ ಪರಿಸ್ಥಿತಿಯಲ್ಲಿ ಮಕ್ಕಳಿದ್ದಾರೆ ಎಂದರು.

‘ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಮತ್ತು ಭ್ರಷ್ಟಾಚಾರಿ ಸಿದ್ದರಾ ಮಯ್ಯ ಸೇರಿಕೊಂಡು ಕರ್ನಾಟಕದ ಖಜಾನೆ ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರಿ ಮತ್ತು ಅತ್ಯಾಚಾರಿಯ ಲೂಟಿ ತಡೆಗೆ ಬಿಜೆಪಿ ಹೋರಾಟ ಆರಂಭಿಸಿದೆ. ಇನ್ನು ಮೂರು ತಿಂಗಳಲ್ಲಿ ಇದಕ್ಕೆ ಕಡಿವಾಣ ಬೀಳುತ್ತದೆ’ ಎಂದರು.

ಎನ್‌ಐಎ ಕಚೇರಿ: ‘ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕೇರಳದ ಮಾದರಿಯ ಕೊಲೆಗಡುಕ ರಾಜಕೀಯ ಆರಂಭವಾಗಿದೆ. ರಾಜ್ಯ ಸರ್ಕಾರ ಇದಕ್ಕೆ ಬೆಂಬಲ ನೀಡುತ್ತಿದೆ. ಕಾಸರಗೋಡು, ಮಂಗಳೂರು, ಭಟ್ಕಳ ಮತ್ತು ಬೆಂಗಳೂರಿನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದನಾ ಸಂಘಟನೆಗೆ ನೇಮಕಾತಿ ನಡೆಯುತ್ತಿದೆ. ಇದಕ್ಕೆಲ್ಲ ತಡೆ ಹಾಕಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪ್ರಾದೇಶಿಕ ಕಚೇರಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಎನ್‌ಐಎ ಕಚೇರಿ ಆರಂಭಕ್ಕೆ ಸರ್ಕಾರ ಈವರೆಗೆ ಯಾವ ಕ್ರಮ ಕೈಗೊಂಡಿಲ್ಲ. ಅಗತ್ಯ ಮೂಲಸೌಕರ್ಯಗಳನ್ನೂ ಒದಗಿಸಿಲ್ಲ. ಕೇಂದ್ರ ಗೃಹ ಇಲಾಖೆ ಇಂತಹ ಸೂಚನೆ ನೀಡಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.