ADVERTISEMENT

12 ಅಡಿ ಎತ್ತರದ ಗಾಂಜಾ ಗಿಡ ಪತ್ತೆ ಮೂವರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:15 IST
Last Updated 8 ನವೆಂಬರ್ 2017, 9:15 IST

ಮಂಗಳೂರು: ನಗರದ ಬಂಗ್ರಕೂಳೂರು ಗ್ರಾಮದ ಕೋಡಿಕಲ್‌ ತಿರುವು ಬಳಿಯ ಕರಾವಳಿ ಕಾಲೇಜು ಪಕ್ಕದ ಖಾಸಗಿ ನಿವೇಶನವೊಂದರಲ್ಲಿ 12 ಅಡಿ ಎತ್ತರದ ಗಾಂಜಾ ಗಿಡ ಬೆಳೆಸಿರುವುದನ್ನು ಪತ್ತೆ ಮಾಡಿರುವ ರೌಡಿನಿಗ್ರಹ ದಳ, ಅದನ್ನು ಕಾವೂರು ಠಾಣೆ ಪೊಲೀಸರ ವಶಕ್ಕೆ ನೀಡಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೋಡಿಕಲ್‌ ತಿರುವು ಬಳಿ ಇರುವ ಕ್ಲಾಸಿಕ್‌ ಹಾರ್ಡ್‌ವೇರ್‌ ಮಳಿಗೆಯ ಆವರಣದಲ್ಲಿ ಗಾಂಜಾ ಗಿಡ ಬೆಳೆದಿರುವ ಕುರಿತು ಮಂಗಳೂರು ಕೇಂದ್ರ ಉಪ ವಿಭಾಗದ ರೌಡಿನಿಗ್ರಹ ದಳಕ್ಕೆ ಮಾಹಿತಿ ಲಭ್ಯವಾಗಿತ್ತು. ಈ ತಂಡದಲ್ಲಿರುವ ಉರ್ವ ಠಾಣೆ ಇನ್‌ಸ್ಪೆಕ್ಟರ್‌ ರವೀಶ್‌ ನಾಯಕ್‌, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಬಿ.ಕೃಷ್ಣ, ನರೇಂದ್ರ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಮತ್ತು ಸಿಬ್ಬಂದಿ ಮಂಗಳವಾರ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು.

‘ವಿನಿತ್‌ ಜಲಾನ್‌ ಎಂಬುವವರಿಗೆ ಸೇರಿದ ನಿವೇಶನದಲ್ಲಿ 12 ಅಡಿ ಎತ್ತರದ ಗಾಂಜಾ ಗಿಡ ಪತ್ತೆಯಾಗಿದೆ. ಈ ನಿವೇಶನವನ್ನು ಹ್ಯಾರೀಸ್‌ ಮತ್ತು ಖಾಲಿದ್‌ ಎಂಬುವವರಿಗೆ ಬಾಡಿಗೆ ನೀಡಲಾಗಿತ್ತು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ADVERTISEMENT

ಗಾಂಜಾ ಗಿಡವನ್ನು ಕಿತ್ತು ವಶಕ್ಕೆ ಪಡೆದ ಪೊಲೀಸರು, ಅದನ್ನು ಕಾವೂರು ಠಾಣೆಗೆ ಒಪ್ಪಿಸಿದರು. ರೌಡಿ ನಿಗ್ರಹ ದಳದ ಅಧಿಕಾರಿಗಳ ದೂರು ಆಧರಿಸಿ ವಿನಿತ್‌ ಜಲಾನ್‌, ಹ್ಯಾರೀಸ್‌ ಮತ್ತು ಖಾಲಿದ್‌ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ತಿಳಿಸಿದ್ದಾರೆ.

ಸಿಮೆಂಟ್‌, ಕಬ್ಬಿಣ ಮತ್ತಿತರ ವಸ್ತುಗಳನ್ನು ದಾಸ್ತಾನು ಮಾಡಿದ್ದ ಜಾಗದಲ್ಲಿ ಗಾಂಜಾ ಗಿಡ ಬೆಳೆಯಲಾಗಿತ್ತು. ಹಸಿಯಾದ ಗಿಡ 5 ಕೆ.ಜಿ.ಯಷ್ಟು ತೂಕವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.