ADVERTISEMENT

‘24 ಗಂಟೆಯಲ್ಲಿ ಪರಿಹರಿಸದಿದ್ದರೆ ಪ್ರತಿಭಟನೆ’

​ಪ್ರಜಾವಾಣಿ ವಾರ್ತೆ
Published 18 ಮೇ 2017, 6:06 IST
Last Updated 18 ಮೇ 2017, 6:06 IST
ಕೆಂಜಾರ್ ಸಮೀಪದ ನೀರು ಕಲುಷಿತಗೊಂಡಿರುವುದು (ಎಡಚಿತ್ರ). ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ನಡೆದ ಗೋಷ್ಠಿ.
ಕೆಂಜಾರ್ ಸಮೀಪದ ನೀರು ಕಲುಷಿತಗೊಂಡಿರುವುದು (ಎಡಚಿತ್ರ). ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ನಡೆದ ಗೋಷ್ಠಿ.   

ಬಜ್ಪೆ: ‘ಫಲ್ಗುಣಿ ನದಿಗೆ ವಿಷಪೂರಿತ ರಾಸಾಯನಿಕ ಸೇರಿಕೊಂಡ ಪರಿಣಾಮ ನೀರು ಕಲುಷಿತಗೊಂಡಿದ್ದು, ಜಲಚರ, ಜಾನುವಾರು ಸತ್ತಿವೆ. ಬಾವಿಗೂ ಕಲು ಷಿತ ನೀರು ಸೇರಿಕೊಂಡಿದೆ. 24 ಗಂಟೆ ಗಳ ಒಳಗಡೆ ಕ್ರಮ ಕೈಗೊಳ್ಳದೇ ಇದ್ದರೆ, ಜಿಲ್ಲೆಯಲ್ಲಿ ಮುಂದೆ ನಡೆಯಬಹುದಾದ ಎಲ್ಲ ದುರಂತಗಳಿಗೂ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿ ಗಳನ್ನೇ ನೇರ ಹೊಣೆಗಾರರನ್ನಾಗಿಸಿ ತೀವ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಪರಿಸರ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಎಚ್ಚರಿಕೆ ನೀಡಿದರು.

ಬುಧವಾರ ಮರವೂರು ಬಳಿ ಕಿಂಡಿ ಅಣೆಕಟ್ಟೆಯಲ್ಲಿನ ರಸಾಯನಿಕ ಮಿಶ್ರಿತ ನೀರನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಮರವೂರು ಕಿಂಡಿ ಅಣೆಕಟ್ಟೆಯ ನೀರಿಗೆ ವಿಷಪೂರಿತ ರಾಸಾಯನಿಕ ಸೇರಿಕೊಂಡಿದೆ. ಕೆಂಜಾರ್ ಬಳಿಯ ಪೇರಮಸೀದಿ ಸಮೀಪದ ನೀರೂ ಕಲುಷಿತವಾಗಿದೆ ಎಂದರು.

ಕೆಲ ಕಂಪೆನಿಗಳು, ಕುಡಿಯುವ ನೀರಿನ ಮೂಲವಾದ ನದಿಗೆ ವಿಷ ಪೂರಿತ ನೀರು ಬಿಡುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾ ಗಲಿ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ, ವರದಿ ಆಧರಿಸಿ, ಆಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರೆ, ಅದಕ್ಕೆ ಕಾಯುವುದು ಸಾಧ್ಯವಿಲ್ಲ. 24 ಗಂಟೆಯೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಟೆಂಟ್ ಹಾಕಿ, ಮಕ್ಕಳನ್ನೆಲ್ಲ ಸೇರಿಸಿ, ಅಲ್ಲೇ ಕುಳಿತು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ADVERTISEMENT

ಕೆಲದಿನಗಳ ಹಿಂದೆ ಚಿತ್ರನಟಿ ರಮ್ಯಾ ಅವರು ಮಂಗಳೂರನ್ನು ನರಕ ಎಂದಿದ್ದರು. ಈಗ ನೋಡಿದರೆ ಅವರು ಪರಿಶೀಲನೆ ನಡೆಸಿಯೇ ಹೇಳಿದ್ದಾರೆ ಎಂದೆನಿಸುತ್ತದೆ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಶಾಪಿಂಗ್ ಮಾಲ್, ಎಂಜಿ ನಿಯರಿಂಗ್‌ ಕಾಲೇಜ್‌ಗಳ ನಿರ್ಮಾಣ ವಲ್ಲ. ಅಭಿವೃದ್ಧಿ ಹೆಸರಲ್ಲಿ ಜಿಲ್ಲೆಯನ್ನು ಸರ್ವನಾಶ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.

**

ಕಂಗೆಟ್ಟ ಕೆಂಜಾರು ಜನತೆ

ರಾಸಾಯನಿಕದಿಂದಾಗಿ ಮರವೂರಿನ ಕಿಂಡಿ ಅಣೆಕಟ್ಟೆಯ ನೀರು ಕಲುಷಿತಗೊಂಡಿದೆ. ಜತೆಗೆ ಪೇಜಾವರ, ಕೆಂಜಾರು ಪ್ರದೇಶದ ನೀರಲ್ಲಿಯೂ ರಾಸಾಯನಿಕ ಸೇರಿಕೊಂಡಿದೆ ಎಂದು ಕೆಂಜಾರಿನ ಪೇರಮಸೀದಿ ಸಮೀಪದ ಜನತೆ ಅಳಲು ತೋಡಿಕೊಂಡರು.

ಕಳೆದ ಹಲವಾರು ದಿನಗಳಿಂದ ಈ ಸಮಸ್ಯೆ ಉದ್ಭವಿಸಿದೆ. ನೀರು ಕುಡಿಯಲು ಯೋಗ್ಯವಾಗಿಲ್ಲ. ಜಾನುವಾರು, ಜಲಚರಗಳು ಮೃತಪಟ್ಟಿವೆ. ಬಾವಿಯ ನೀರಿಗೂ ರಾಸಾಯನಿಕ ಸೇರಿಕೊಂಡಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಸ್ಥಳೀಯ ನಿವಾಸಿ ರೆಜಿನಾಲ್ಡ್ ಹೇಳಿದರು.

ಈ ಹಿಂದೆ ಅಗಾಧ ಪ್ರಮಾಣದಲ್ಲಿ ಮರಳುಗಾರಿಕೆ ನಡೆದಿದ್ದರಿಂದ ನೀರು ಲವಣಯುಕ್ತವಾಗಿದೆ. ಸಮುದ್ರದ ನೀರು ಸೇರಿಕೊಂಡು ಉಪ್ಪು ನೀರಾಗಿ ಪರಿಣಮಿಸಿದೆ. ಮರವೂರಿನಲ್ಲಿ ಡ್ಯಾಂ ನಿರ್ಮಿಸಿದ ಬಳಿಕ, ಉಪ್ಪಿನ ಪ್ರಮಾಣ ಜಾಸ್ತಿಯಾಗಿದೆ ಎಂದು ಸ್ಥಳೀಯರು ದೂರಿದರು.

**

ಈ ನೀರನ್ನು ಅಡುಗೆಗೂ ಉಪಯೋಗಿಸುವಂತಿಲ್ಲ. ಅನ್ನ ಕೆಂಪು ಬಣ್ಣಕ್ಕೆ ತಿರುಗುತ್ತಿದೆ. ನಾವೆಲ್ಲಾ ಕಂಗಾಲಾಗಿದ್ದು, ಯಾರೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ
-ರೆಜಿನಾಲ್ಡ್,
ಕೆಂಜಾರಿನ ಪೇರಮಸೀದಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.