ADVERTISEMENT

28ಕ್ಕೆ ಅಡ್ಯಾರ್‌ನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಮೇ 2017, 8:39 IST
Last Updated 24 ಮೇ 2017, 8:39 IST

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಇದೇ 28ರಂದು ಬೆಳಿಗ್ಗೆ 9ರಿಂದ ರಾತ್ರಿ 12ರವರೆಗೆ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಅಡ್ಯಾರ್‌ ಗಾರ್ಡನ್‌ನಲ್ಲಿ ‘ಯಕ್ಷಧ್ರುವ ಪಟ್ಲ ಸಂಭ್ರಮ’ ನಡೆಯಲಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಈ ವಿಷಯ ತಿಳಿಸಿದರು. 

ಬೆಳಿಗ್ಗೆ 8.30ಕ್ಕೆ ಅಬ್ಬರ ತಾಳ, 9ಕ್ಕೆ ಯಕ್ಷಗಾನ ಪೂರ್ವರಂಗ, 9.45ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ಟ್ರಸ್ಟ್ ಸದಸ್ಯರು ಮತ್ತು ಯಕ್ಷಾ ಭಿಮಾನಿಗಳಿಂದ ರಕ್ತದಾನ ಶಿಬಿರ,  ಯಕ್ಷಗಾನ ಕಲಾವಿದರಿಗೆ ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಔಷಧ ವಿತರಣೆ ನಡೆಯಲಿದೆ. 11 ಗಂಟೆಗೆ ಏಳು ಮಂದಿ ಭಾಗವ ತರಿಂದ ಸಪ್ತಸ್ವರ ಭಾಗವತಿಕೆ, ಮಧ್ಯಾಹ್ನ 1.30ರಿಂದ ಮಹಿಳಾ ಕಲಾವಿದೆಯ ರಿಂದ ಯಕ್ಷಗಾನ ವೈಭವ, 2.30ರಿಂದ `ಗೇಲ್ದ ಬೀರೆ ವಾಲಿ' ತುಳು ತಾಳಮದ್ದಳೆ ನಡೆಯಲಿದೆ ಎಂದರು.

ಯಕ್ಷಗಾನ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರಿಗೆ ₹ 1 ಲಕ್ಷ ನಗದಿನೊಂದಿಗೆ ಪಟ್ಲ ಪ್ರಶಸ್ತಿ 2017 ಪ್ರದಾನ ಮಾಡಲಾಗುವುದು. ಇದೇ ಸಂದರ್ಭ ಬಲಿಪ ಭಾಗವತರ 14 ಯಕ್ಷಗಾನ ಪ್ರಸಂಗಗಳ ಸಂಪುಟ ಬಿಡುಗಡೆಗೊಳ್ಳಲಿದೆ. ಕಲಾವಿದರಾದ ಕುಂಬ್ಳೆ ಸುಂದರ ರಾವ್, ದಿವಾಣ ಶಿವಶಂಕರ ಭಟ್‌, ಮೂಡಂಬೈಲು ಗೋಪಾಲಕಷ್ಣ ಶಾಸ್ತ್ರಿ, ರಾಘವ ನಂಬಿ ಯಾರ್, ಮಾರ್ಷಲ್ ನರೋನ್ಹ , ಗೋಡೆ ನಾರಾಯಣ ಹೆಗಡೆ, ಕುಂದಾಪುರ ಕೃಷ್ಣ ಗಾಣಿಗ, ಮಾಲತಿ ವೆಂಕಟೇಶ್‌, ಮಾಲಿನಿ ಅಂಚನ್ ಅವರಿಗೆ ಯಕ್ಷಧ್ರುವ ಕಲಾ ಗೌರವ ಪ್ರದಾನ ಮಾಡಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ADVERTISEMENT

ತೆಂಕು ಬಡಗಿನ 16 ಮಂದಿ ಅಶಕ್ತ ಕಲಾವಿದರಿಗೆ ತಲಾ ₹ 50 ಸಾವಿರ, 9 ಮಂದಿಗೆ ಗೃಹ ನಿರ್ಮಾಣಕ್ಕೆ ತಲಾ ₹ 25 ಸಾವಿರ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ 90ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ವೃತ್ತಿಪರ ಕಲಾವಿದರ ಮಕ್ಕಳಿಗೆ ಬಂಗಾರದ ಪದಕ, ಅಶಕ್ತ ವೃತ್ತಿ ಕಲಾವಿದರ 80 ಮಂದಿ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ. 

ಟ್ರಸ್ಟ್‌ನ ಸದಸ್ಯರು, ಅಭಿಮಾನಿಗಳು ವೈಯಕ್ತಿಕವಾಗಿ ಹಣ ಸಂಗ್ರಹಿಸಿ ಸೈನಿಕರ ಕುಟುಂಬಕ್ಕೆ ₹50 ಸಾವಿರ ನೆರವು ನೀಡುವ ಉದ್ದೇಶವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಉಪಾಧ್ಯಕ್ಷ ರಾದ ಗಣೇಶ ಶೆಟ್ಟಿ ಐಕಳ, ಡಾ. ಮನುರಾವ್, ಪುರುಷೋತ್ತಮ ಭಂಡಾರಿ ಅಡ್ಯಾರ್,  ಸುದೇಶ್ ಕುಮಾರ್ ರೈ,  ರಾಜೀವ ಪೂಜಾರಿ ಕೈಕಂಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.