ADVERTISEMENT

30 ಪವನ್ ಚಿನ್ನಾಭರಣ ಕಳವು

ಉಪ್ಪಿನಂಗಡಿ ಕರಾಯ ಗ್ರಾಮದ ಉದ್ಯಮಿ ಮನೆಯಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:38 IST
Last Updated 17 ಜುಲೈ 2017, 7:38 IST

ಉಪ್ಪಿನಂಗಡಿ: ಇಲ್ಲಿಗೆ ಸಮೀಪ ಕರಾಯ ಗ್ರಾಮದ ಮುರಿಯಾಳ ಎಂಬಲ್ಲಿ ಶುಕ್ರವಾರ ರಾತ್ರಿ ಉದ್ಯಮಿ ಯೊಬ್ಬರ ಮನೆಯಿಂದ ಸುಮಾರು 30 ಪವನ್ ಚಿನ್ನಾಭರಣ ಕಳ್ಳತನವಾಗಿದೆ.

ಗಜಾನನ ಸ್ಟೋರ್ಸ್ ಪೈಂಟ್ ಮತ್ತು ಹಾರ್ಡ್‌ವೇರ್‌ ಅಂಗಡಿ ಹೊಂದಿರುವ ಕರಾಯ ಮುರಿಯಾಳ ನಿವಾಸಿ ಸುರೇಶ್ ಅವರ ಮನೆಯೊಳಗೆ ಪ್ರತ್ಯೇಕ ಬೆಡ್ ರೂಂನಲ್ಲಿ ಇದ್ದ ಕಪಾಟು ತೆಗೆದಿರುವ ಕಳ್ಳರು ಅದರ ಒಳಗಡೆ ಇದ್ದ ಬಳೆ, ಸರ ಸಹಿತ ವಿವಿಧ ರೀತಿಯ ಒಡವೆ ಸೇರಿ ಒಂದು ಮೊಬೈಲ್ ಕಳವು ಆಗಿದೆ ಎಂದು ಸುರೇಶ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳ್ಳತನ ನಡೆದಿರುವ ಮನೆಯಲ್ಲಿ ಯಜಮಾನ ಸುರೇಶ್, ಅವರ ಪತ್ನಿ ಪೂರ್ಣಿಮಾ, ಮಕ್ಕಳಾದ ದುರ್ಗಾ, ಲಕ್ಷ್ಮೀ ಸಾಗರ್, ವಿದ್ಯಾಸಾಗರ್ ಇದ್ದರು. ಬೆಳಿಗ್ಗೆ ಎದ್ದಾಗ ಮನೆಯ ಹಿಂದಿನ ಮತ್ತು ಎದುರಿನ ಬಾಗಿಲು ತೆರೆದುಕೊಂಡಿತ್ತು. ಬಳಿಕ ಕಪಾಟು ನೋಡುವಾಗ ಅದರ ಬಾಗಿಲು ತೆರೆದ ಸ್ಥಿತಿಯಲ್ಲಿ ಇದ್ದು, ಅದರೊಳಗೆ ಇದ್ದ ಚಿನ್ನಾಭರಣ ಕಳವು ಆಗಿರುವುದು ಬೆಳಕಿಗೆ ಬಂದಿದೆ.

ADVERTISEMENT

ಕಳ್ಳರು ಅವಿತು ಕುಳಿತು ಕೃತ್ಯ ಎಸಗಿರುವ ಶಂಕೆ ಇದೆ.

ಕಪಾಟುನಲ್ಲಿದ್ದ ಚಿನ್ನಾಭರಣ ಕಳವು ಆಗಿರುವುದು ಬಿಟ್ಟರೆ ಯಾವುದೇ ಕರುಹುಗಳು ಕಂಡು ಬರುತ್ತಿಲ್ಲ, ಇಲ್ಲಿ ಮನೆಯವರಿಗೆ ತಿಳಿಯದೆ ರಾತ್ರಿಗೆ ಮುನ್ನ ಮನೆಯೊಳಗೆ ಬಂದು ಅಡಗಿ ಕುಳಿತು, ಆಹೋ ರಾತ್ರಿಯಲ್ಲಿ ಕಳವು ಮಾಡಿ ತಾವೇ ಬಾಗಿಲು ತೆರೆದು ಹೋಗಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತವಾಗಿದೆ.

‘ಮನೆಯಲ್ಲಿ ಮಗುವಿಗೆ ಜ್ವರ ಇದ್ದ ಕಾರಣ ಪತ್ನಿ ತಡ ರಾತ್ರಿ ತನಕವೂ ಎಚ್ಚರರಿಂದ ಇದ್ದು, ರಾತ್ರಿ 2.30ಕ್ಕೆ ಔಷಧಿ ಕುಡಿಸಿದ್ದಾಳೆ. ಬೆಳಿಗ್ಗೆ ನಾನು ಎದ್ದಾಗ ಮನೆಯ ಹಿಂದಿನ ಬಾಗಿಲು ತೆರೆದುಕೊಂಡಿತ್ತು. ಮುಂದಿನ ಬಾಗಿಲು ಚಿಲಕ ಹಾಕಿಕೊಂಡಿರಲಿಲ್ಲ, ಮಗಳು ತೆರೆದಿರಬಹುದು ಆಕೆ ಹೊರಗೆ ಹೋಗಿರಬಹುದು ಅಂದು ಕೊಂಡೆ, ಆದರೆ ಬಳಿಕ ನೋಡುವಾಗ ಆಕೆ ಎದ್ದಿರಲಿಲ್ಲ, ಕ್ರಮೇಣ ನೋಡುವಾಗ ಕಳ್ಳರು ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಯಿತು" ಎಂದು ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್‌ ಅನಿಲ್ ಕುಲಕರ್ಣಿ, ಎ.ಎಸ್.ಐ. ಯೋಗೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬೆರಳಚ್ಚು ಮತ್ತು ಶ್ವಾನದಳವನ್ನು ಕರೆಸಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.