ADVERTISEMENT

ತನಿಖೆಯ ದಾರಿ ತಪ್ಪಿಸುತ್ತಿರುವ ಮಾಜಿ ಸಿಎಂ: ಡಾ. ಭರತ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 4:50 IST
Last Updated 9 ಜನವರಿ 2018, 4:50 IST

ಮಂಗಳೂರು: ದೀಪಕ್ ರಾವ್ ಹತ್ಯೆಗೆ ಸುಪಾರಿ ಕೊಟ್ಟಿರುವುದಾಗಿ ಆರೋಪಿ ಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಬಿಜೆಪಿ ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಡಾ. ಭರತ್ ಶೆಟ್ಟಿ ಹೇಳಿದರು.

ಅವರು ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಹಲವರು ಈಗಾಗಲೇ ಹಲವು ವಿಧದ ಹೇಳಿಕೆ ನೀಡಿದ್ದಾರೆ. ಹತ್ಯೆಯ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಶಾಸಕರು ಹೇಳಿದ್ದರು. ಸಚಿವರೂ ಸಂಘ ಪರಿವಾರದವರ ಮೇಲೆ ಆರೋಪ ಹೊರಿಸಿದ್ದರು. ಇದೀಗ ಕಮಾರಸ್ವಾಮಿಯವರು ಕೂಡ ಇಂತಹ ಹೊಣೆಗಾರಿಕೆ ಇಲ್ಲದ ಹೇಳಿಕೆ ನೀಡಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು ಖಂಡ ನೀಯ’ ಎಂದು ಅವರು ಹೇಳಿದರು.

‘ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಫಾರೂಕ್ ಅವರೇ ಕುಮಾರಸ್ವಾಮಿ ಮೂಲಕ ಈ ಹೇಳಿಕೆ ಕೊಡುವಂತೆ ಪ್ರೇರೇಪಿಸಿರಬಹುದು. ಇದು ತನಿಖೆಯ ದಿಕ್ಕು ತಪ್ಪಿಸುವ ಷಡ್ಯಂತ್ರವಾಗಿದೆ. ಆದ್ದರಿಂದ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿ ಶಾಸಕರನ್ನು ಮತ್ತು ಹೇಳಿಕೆ ನೀಡಿದ ಕುಮಾರಸ್ವಾಮಿ ಅವರ ವಿಚಾರಣೆ ನಡೆಸಬೇಕು. ಇಂತಹ ಹೇಳಿಕೆಗಳ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿರುವುದು ಸರಿಯಲ್ಲ’ ಎಂದರು. ಪಾಲಿಕೆ ಸದಸ್ಯರಾದ ತಿಲಕ್ ರಾಜ್, ವಿರೋಧ ಪಕ್ಷದ ನಾಯಕ ಗಣೇಶ್ ಹೊಸಬೆಟ್ಟು, ಬಿಜೆಪಿ ಮುಖಂಡರಾದ ವಿಕಾಸ್ ಪುತ್ತೂರು, ಕಿಶೋರ್ ರೈ ಇದ್ದರು.

ADVERTISEMENT

ತನಿಖೆಗೆ ಸಿದ್ಧ: ದೀಪಕ್ ರಾವ್ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾಗಿದ್ದು, ಕಲ್ಪಿಸಲು ಸಾಧ್ಯವಾಗದ ಆರೋಪವನ್ನು ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದಾರೆ. ಈ ಬಗ್ಗೆ ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಪಾಲಿಕೆ ಸದಸ್ಯ ತಿಲಕ್ ರಾಜ್ ಸ್ಪಷ್ಟಪಡಿಸಿದರು

ದೀಪಕ್‌ ರಾವ್ ಹತ್ಯೆಯಲ್ಲಿ ಸ್ಥಳೀಯ ಸುರತ್ಕಲ್‌ನ ಬಿಜೆಪಿ ಕಾರ್ಪೊರೇಟರ್ ಕೈವಾಡ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರಿನಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುತ್ತ ಅವರು ಈ ಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.