ADVERTISEMENT

‘ನಾವು ನಕ್ಸಲರು; ಏನೂ ಮಾಡುವುದಿಲ್ಲ’

ಸಿದ್ದಿಕ್ ನೀರಾಜೆ
Published 17 ಜನವರಿ 2018, 4:58 IST
Last Updated 17 ಜನವರಿ 2018, 4:58 IST
ನಕ್ಸಲ್ ತಂಡ ಭೇಟಿ ನೀಡಿ ಉಪ್ಪಿನಂಗಡಿ ಸಮೀಪ ಶಿರಾಡಿ ಮಿತ್ತಮಜಲು ಎಂಬಲ್ಲಿನ ಮನೆ ಸಮೀಪ ಮಂಗಳವಾರ ನಕ್ಸಲ್ ನಿಗ್ರಹ ಪಡೆ ತಂಡಕ್ಕೆ ಡಿವೈಎಸ್‍ಪಿ ಶ್ರೀನಿವಾಸ್ ಮಾಹಿತಿ ನೀಡಿದರು.
ನಕ್ಸಲ್ ತಂಡ ಭೇಟಿ ನೀಡಿ ಉಪ್ಪಿನಂಗಡಿ ಸಮೀಪ ಶಿರಾಡಿ ಮಿತ್ತಮಜಲು ಎಂಬಲ್ಲಿನ ಮನೆ ಸಮೀಪ ಮಂಗಳವಾರ ನಕ್ಸಲ್ ನಿಗ್ರಹ ಪಡೆ ತಂಡಕ್ಕೆ ಡಿವೈಎಸ್‍ಪಿ ಶ್ರೀನಿವಾಸ್ ಮಾಹಿತಿ ನೀಡಿದರು.   

ಉಪ್ಪಿನಂಗಡಿ: ‘ಭಾನುವಾರ ಕತ್ತಲಾಗಿತ್ತು. ಸುಮಾರು 7.30 ಗಂಟೆ ಆಗಿರಬಹುದು. ಇಬ್ಬರು ಪುರುಷರು, ಒಬ್ಬಾಕೆ ಮಹಿಳೆ ಇದ್ದ ತಂಡ ಮನೆಯೊಳಗೆ ಪ್ರವೇಶ ಮಾಡಿತು. ನಾನು, ಅಮ್ಮ, ತಮ್ಮನ ಮಗಳು ಮನೆಯ ಒಳಗೆ ಇದ್ದೆವು. ಬಂದವರೇ ನಾವು ನಕ್ಸಲರು ಎಂದು ಪರಿಚಯಿಸಿಕೊಂಡರು..’

‘ಅಕ್ಕಿ, ಸಾಮಗ್ರಿ ಕೊಡಿ ಎಂದು ಕೇಳಿದರು. ನಾನು ನಮ್ಮಲ್ಲಿ ಇಲ್ಲ ಎಂದು ಹೇಳುತ್ತ, ಚಹಾ ಮಾಡಿದ್ದು ಇದೆ, ದೋಸೆ ಇದೆ. ಅದನ್ನು ಕೊಡುತ್ತೇನೆ ಎಂದೆ. ಆದರೆ ಅದು ಬೇಡ ಎಂದು ಹೇಳಿದರು’.ಶಿರಾಡಿ ಗ್ರಾಮದ ಮಿತ್ತಮಜಲಿನಲ್ಲಿ ಮೂವರಿದ್ದ ನಕ್ಸಲರ ತಂಡ ಭೇಟಿ ನೀಡಿದ್ದ ಮನೆಯ ಮಹಿಳೆಯೊಬ್ಬರು ಹೇಳಿದ ಮಾತುಗಳಿವು.

‘ನಾವು ನಕ್ಸಲರು, ನಾವು ನಿಮಗೆ ಏನೂ ಮಾಡುವುದಿಲ್ಲ. ಪುರುಷೋತ್ತಮ, ರಾಜೇಶ್, ಲತಾ ಎಂದು ಪರಿಚಯಿಸಿಕೊಂಡರು. ಲತಾ ನಾನು ಶೃಂಗೇರಿಯವಳು ಎಂದು ಹೇಳಿಕೊಂಡಳು. ಶ್ರೀಮಂತರು ಇಲ್ಲಿ ಯಾರು ಇದ್ದಾರೆ, ಅಂತಹವರು ಇದ್ದರೆ ತಿಳಿಸಿ, ಎಂದರು. ಅಂಥವರು ಯಾರೂ ಇಲ್ಲ. ನಾವೆಲ್ಲ ಬಡವರು ಎಂದು ಹೇಳುತ್ತಿದ್ದಂತೆ, ಅಲ್ಲಿಗೆ ಪಕ್ಕದ ಮನೆಯವರು ಬಂದರು’ ಎಂದು ಮಾತು ಮುಂದುವರಿಸಿದರು.

ADVERTISEMENT

‘ಬಳಿಕ ಅವರೆಲ್ಲ ನೇರವಾಗಿ ಪಕ್ಕದ ಮನೆಗೆ ಹೋದರು. ನಮ್ಮ ಮನೆಯಲ್ಲಿ ಒಟ್ಟು 10 ನಿಮಿಷ ಮಾತ್ರ ಇದ್ದರು, 3 ಮಂದಿ ಹಸಿರು ಬಣ್ಣದ ಪ್ಯಾಂಟ್, ಶರ್ಟ್ ಧರಿಸಿದ್ದರು. ಅವರೆಲ್ಲರ ಬಳಿ ಬಂದೂಕು ಇದ್ದವು’ ಎಂದು ತಿಳಿಸಿದರು.

ಕುಚಲಕ್ಕಿ, ಬೆಳ್ತಿಗೆ ತೆಗೆದುಕೊಂಡು ಹೋದರು: ‘ರಾಜೇಶ್ ಎಂದು ಹೇಳಿಕೊಂಡ ವ್ಯಕ್ತಿ ನಮಗೆ 10 ಕೆಜಿ ಅಕ್ಕಿ ಮತ್ತು ಸಾಮಾನು ತಂದು ಕೊಡಿ ಎಂದು ಹೇಳಿದ. ಆದರೆ ನಾನು ಇಲ್ಲಿ ಪಕ್ಕದಲ್ಲಿ ಎಲ್ಲೂ ಅಂಗಡಿ ಇಲ್ಲ ಎಂದು ಹೇಳಿದ್ದು, ಆಗ ನಿಮ್ಮಲ್ಲಿ ಇದ್ದ ಅಕ್ಕಿ ಸಾಮಾನು ಕೊಡಿ ಎಂದು ಕೇಳಿದ‘ ಎಂದು ಪಕ್ಕದ ಮನೆಯವರು ಮಾಹಿತಿ ನೀಡಿದರು.

‘ಆಗ ನಾನು ನಮ್ಮ ಮನೆಯಲ್ಲಿ ಅಕ್ಕಿ ಸಾಮಾನು ಜಾಸ್ತಿ ಇಲ್ಲ ಎಂದು ಹೇಳಿದೆ. ಮನೆಯಲ್ಲಿ ಇದ್ದ 3 ಕೆಜಿಯಷ್ಟು ಕುಚ್ಚಲಕ್ಕಿ, 8 ಕೆಜಿಯಷ್ಟು ಬೆಳ್ತಿಗೆ, ಟೊಮ್ಯಾಟೋ, ಬಟಾಟೆ ಇದ್ದವುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ರಾಜೇಶ್ ಮನೆಯ ಒಳಗೆ ಆಹಾರ ಸಾಮಗ್ರಿಗಳನ್ನು ತೆಗೆದುಕೊಳ್ಳುತ್ತಿದ್ದು, ಉಳಿದ ಇಬ್ಬರು ಹೊರಗಡೆ ಬಂದೂಕು ಹಿಡಿದು ನಿಂತಿದ್ದರು. ಬಳಿಕ ಬಂದ ದಾರಿಯಲ್ಲಿ ಮತ್ತೆ ಹಿಂತಿರುಗಿ ಹೋದರು’ ಎಂದು ವಿವರಿಸಿದರು.

‘ಅಕ್ಕಿ ಕೇಳುವ ಜತೆಗೆ ಅವರು ಇಲ್ಲಿನ ಬಿಜು ಎಲ್ಲಿದ್ದಾನೆ, ಅವನು ಕಳೆದ ಬಾರಿ ನಾವು ಸುಬ್ರಹ್ಮಣ್ಯಕ್ಕೆ ಬಂದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ, ಹೀಗಾಗಿ ನಮ್ಮ ಸಹಪಾಠಿ ಯಲ್ಲಪ್ಪ ಸಾಯುವಂತಾಯಿತು. ಆದ ಕಾರಣ ನಮಗೆ ಬಿಜು ಬೇಕಾಗಿದ್ದಾನೆ’ ಎಂದು ಹೇಳಿದ್ದನ್ನು ಉಲ್ಲೇಖಿಸಿದರು.

ಓಡಿ ಹೋದೆ: ‘ನಕ್ಸಲರು ಕಾಡಿನಿಂದ ಇಳಿದು ಬಂದವರು ಪ್ರಥಮವಾಗಿ ಭೇಟಿ ಆಗಿದ್ದು ನನ್ನನ್ನು. ಆದರೆ ನನಗೆ ಹೆದರಿಕೆ ಆಯಿತು. ನಾನು ಓಡಿ ಹೋದೆ‘ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ತಂದೆ, ತಾಯಿ, ತಮ್ಮ ಎಲ್ಲರೂ ಸಂಕ್ರಾಂತಿ ಸಲುವಾಗಿ ದೇವಸ್ಥಾನಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬಾತ ಇದ್ದಾಗ, ಮನೆಯ ಹಿಂಭಾಗದಿಂದ ನಾಯಿ ಬೊಗಳುತ್ತಿತ್ತು. ಮನೆ ಹೊರಗೆ ಬಂದು ನೋಡುತ್ತಿದ್ದಂತೆ 3 ಮಂದಿ ನೇರವಾಗಿ ಅಂಗಳಕ್ಕೆ ಬಂದರು. ಶಸ್ತ್ರಸಜ್ಜಿತರಾಗಿದ್ದರು. ಬಂದವರು ನಾವು ನಕ್ಸಲರು ಎಂದು ಹೇಳುತ್ತಿದ್ದಂತೆ, ನನಗೆ ಹೆದರಿಕೆ ಆಯಿತು. ಅವರೊಂದಿಗೆ ಮರು ಮಾತನಾಡದೆ ನೇರವಾಗಿ ಚಿಕ್ಕಪ್ಪನ ಮನೆಗೆ ಓಡಿ ಹೋದೆ ಎಂದು ಅವರು ಪ್ರತಿಕ್ರಿಯಿಸಿದರು.

ನಕ್ಸಲರು ಭೇಟಿ ನೀಡಿರುವ ಮನೆಗಳಿಗೆ ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್, ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಗೋಪಾಲ ನಾಯ್ಕ್, ಉಪ್ಪಿನಂಗಡಿ ಸಬ್ ಇನ್‌ಸ್ಪೆಕ್ಟರ್ ನಂದಕುಮಾರ್ ಭೇಟಿ ನೀಡಿ, ಮೂರೂ ಮಂದಿಯಿಂದ ಪ್ರತ್ಯೇಕ ಹೇಳಿಕೆ ಪಡೆದರು.

ಹೆದ್ದಾರಿಯಿಂದ 2 ಕಿಮೀ ದೂರ

ನಕ್ಸಲರು ಭೇಟಿ ನೀಡಿರುವ ಮಿತ್ತಮಜಲು ಶಿರಾಡಿ ಗ್ರಾಮದ ಅಂಚಿನಲ್ಲಿ ಮತ್ತು ರಕ್ಷಿತ ಅರಣ್ಯ ಪ್ರದೇಶಕ್ಕೆ ತಾಗಿಕೊಂಡಿದೆ. ಉಪ್ಪಿನಂಗಡಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಹೊಳೆಯಿಂದ ಎಡಕ್ಕೆ ಕಚ್ಚಾ ರಸ್ತೆಯಲ್ಲಿ 2 ಕಿಮೀ ಹೋದರೆ ಮಿತ್ತಮಜಲು ಇದ್ದು, ಇಲ್ಲಿ ಬಹುತೇಕ ದಲಿತ ಕುಟುಂಬಗಳು ನೆಲೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.