ADVERTISEMENT

ಅದ್ಧೂರಿ ಮಾರಿ ಹಬ್ಬಗಳಿಂದ ಆರ್ಥಿಕ ಹಿನ್ನಡೆ

ದೇವಸ್ಥಾನ , ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ನಿರಂಜನಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:59 IST
Last Updated 19 ಜನವರಿ 2017, 5:59 IST

ಹರಪನಹಳ್ಳಿ: ಶೋಷಿತ ಸಮಾಜ ಮೂಢನಂಬಿಕೆ ಬಲಿಯಾಗಿ ಆಚರಿಸುವ ಅದ್ಧೂರಿ ಮಾರಿ ಹಬ್ಬಗಳಿಂದ  ಆರ್ಥಿಕ ಹಿನ್ನೆಡೆಯಾಗುತ್ತಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಅರೆಮಜ್ಜಿಗೇರಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ, ಛತ್ರಪತಿ ಶಿವಾಜಿ ಯುವಕ ಸಂಘ ಮತ್ತು ಸಿದ್ಧರಾಮೇಶ್ವರ ಯುವಕ ಸಂಘ ಸಂಯುಕ್ತವಾಗಿ ಬುಧವಾರ ಏರ್ಪಡಿಸಿದ್ದ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಾಣಿಗಳನ್ನು ವಧೆ ಮಾಡಿ  ದೇವಿ ಯನ್ನು ಆರಾಧಿಸಲು ಲಕ್ಷಾಂತರ ರೂಪಾಯಿ ಸಾಲ ಮಾಡಿ ಆಚರಿಸುವ  ಈ ಮಾರಿ ಹಬ್ಬಗಳು ಸಮಾಜಕ್ಕೆ, ಕುಟುಂಬಕ್ಕೆ ಅವಶ್ಯಕತೆ ಇಲ್ಲ ಎಂಬುದನ್ನು ಶೋಷಿತ ಸಮಾಜ ಅರಿತುಕೊಳ್ಳಬೇಕಾಗಿದೆ ಎಂದರು.

ಪ್ರಾಣಿ ಬಲಿಕೊಡದಿದ್ದರೆ ದೇವಿ ಮುನಿಸಿಕೊಳ್ಳುತ್ತಾಳೆ ಎಂಬುದು ಭ್ರಮೆ ಯಾಗಿದೆ. ಹೆಣ್ಣು ದೇವತೆ ಸಿಹಿ ಅಡುಗೆ ಬೇಡ ಎಂದು ಹೇಳಿಲ್ಲ. ಮೂಢನಂಬಿಕೆ ಗಳನ್ನು ಕೈಬಿಟ್ಟು ಗ್ರಾಮದಲ್ಲಿ ದೇಣಿಗೆ ಸಂಗ್ರಹಿಸಿ ಸಿಹಿ ಅಡುಗೆ ತಯಾರಿಸಿ  ಸಹ ಪಂಕ್ತಿ ಭೋಜನ ಮಾಡುವ ಮೂಲಕ ಏಕತೆ, ಕೋಮು ಸಾಮರಸ್ಯ, ಸಹಬಾಳ್ವೆ ಯಿಂದ ನಡೆದುಕೊಂಡಾಗ  ಜೀವನ ಸಾರ್ಥಕವಾಗುತ್ತದೆ ಎಂದರು.

ರಾಜ್ಯದಲ್ಲಿ ಆಚರಿಸುವ ಕನಕ ಜಯಂತ್ಯುತ್ಸವ ಸಮಾರಂಭಗಳಿಗೆ ಡಿಜೆ ಬಳಸುವುದನ್ನು ನಿಷೇಧಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಬಹುತೇಕ ಜಿಲ್ಲಾಧಿಕಾರಿಗಳು ಸ್ಪಂದಿಸಿ ದ್ದಾರೆ. ಡಿಜೆಗೆ ವೆಚ್ಚ ಮಾಡುವ ಹಣ ವನ್ನು ಕನಕದಾಸರ ಸಾಹಿತ್ಯ ಪ್ರಸಾರಕ್ಕೆ ವ್ಯಯ ಮಾಡಿ ಎಂದು ಕರೆ ನೀಡಿದರು.

ನೀಲಗುಂದ ಗ್ರಾಮದ ಜಂಗಮ ಪೀಠದ ಗುಡ್ಡದ ಸಂಸ್ಥಾನದ ಚನ್ನಬಸವ ಶಿವಯೋಗಿ ಮಾತನಾಡಿ, ‘ಕೇವಲ ಗ್ರಾಮದವರೇ ಹಣ ಸಂಗ್ರಹಿಸಿ ನಿರ್ಮಿಸಿರುವ ನೂತನ ದೇವಸ್ಥಾನ ಪ್ರಶಂಸನೀಯ.  ದೇವಸ್ಥಾನ ಸೋಮಾರಿಗಳ ಅಡ್ಡೆಯಾಗದೆ ನಿರಂತರ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದರು. 
ಐರಣಿ ಹೊಳೆಮಠದ ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಮತ್ತು ಕೂಲಹಳ್ಳಿ ಗೋಣಿ ಬಸವೇಶ್ವರ ಸಂಸ್ಥಾನ ಮಠದ ಚಿನ್ಮಯ ಸ್ವಾಮೀಜಿ ಆರ್ಶಿವಚನ ನೀಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಸ್‌.ಚಿದಾನಂದಪ್ಪ, ಎನ್‌.ಕೊಟ್ರೇಶ್‌, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸುವರ್ಣ ಆರುಂಡಿ ನಾಗರಾಜ್‌, ಎಚ್‌.ಬಿ.ಪರುಶುರಾಮಪ್ಪ, ಕೆ.ಜಯಶೀಲ, ವೈ.ಕೆ.ಬಿ.ದುರುಗಪ್ಪ, ಕೆ.ವೆಂಕಟೇಶ್‌ ರೆಡ್ಡಿ, ಕೋಡಿಹಳ್ಳಿ ಭೀಮಪ್ಪ, ಎಂ.ಬಸವರಾಜ್‌ ಕಲ್ಲೇರ, ಗ್ರಾಮದ ಮುಖಂಡರಾದ ಆಲೂರು ಕಾಳಮ್ಮ ಪೂಜಾರ್‌ ದೇವೇಂದ್ರಪ್ಪ, ಹನಮಂತಪ್ಪ, ಸಣ್ಣ ಹುಲುಗಪ್ಪ, ಭೋವಿ ದುರುಗಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.