ADVERTISEMENT

ಅಮಾಯಕರ ಸಾವಿಗೆ ಸರ್ಕಾರವೇ ಹೊಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 6:59 IST
Last Updated 18 ನವೆಂಬರ್ 2017, 6:59 IST
ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ   

ದಾವಣಗೆರೆ: ಆರೋಗ್ಯ ಸಚಿವರ ಪ್ರತಿಷ್ಠೆ ಹಾಗೂ ಖಾಸಗಿ ವೈದ್ಯರ ಹಠಮಾರಿತನಕ್ಕೆ ರಾಜ್ಯದಲ್ಲಿ 50ಕ್ಕೂ ಹೆಚ್ಚು ಅಮಾಯಕ ಜೀವಗಳು ಬಲಿಯಾಗಬೇಕಾಯಿತು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸರ್ಕೀಟ್ ಹೌಸ್‌ನಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ವೈದ್ಯರು ಮುಷ್ಕರ ಆರಂಭಿಸಿದಾಗಲೇ ಸರ್ಕಾರ ಮಾತುಕತೆಗೆ ಮುಂದಾಗಬೇಕಿತ್ತು. ಆದರೆ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿಲ್ಲ. ಪರಿಣಾಮ, ಸಾರ್ವಜನಿಕರಿಗೆ ತೊಂದರೆಯಾಯಿತು. 5 ದಿನಗಳ ಬಳಿಕವಾದರೂ ಸರ್ಕಾರ ಗೊಂದಲ ಬಗೆಹರಿಸಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಜ್ಯದಲ್ಲಿ ಶೇ 85ರಷ್ಟು ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ಆರೋಗ್ಯ ಇಲಾಖೆಯನ್ನು ಬಲಪಡಿಸದೆ ಖಾಸಗಿ ವೈದ್ಯರ ವಿರುದ್ಧ ನಿಂತಿದ್ದು ದುರಂತ. ಆರೋಗ್ಯ ಇಲಾಖೆಯಲ್ಲಿ 43 ಸಾವಿರ ಹುದ್ದೆಗಳು ಖಾಲಿ ಇವೆ. ತಜ್ಞ ವೈದ್ಯರ ಕೊರತೆ ಇದೆ. ಆರೋಗ್ಯ ಇಲಾಖೆಗೆ ಕಾಯಕಲ್ಪ ಕೊಡಲು ಇದು ಸಕಾಲ ಎಂದು ರವಿ ಸಲಹೆ ನೀಡಿದರು.

ADVERTISEMENT

‘ಸೂಕ್ತ ಚಿಕಿತ್ಸೆ ದೊರೆಯದೆ ಜನರು ಮೃತಪಟ್ಟಿರುವ ಬಗ್ಗೆ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿಗೆ ಸಾಕ್ಷ್ಯ ಕೇಳಿರುವುದು ಖಂಡನೀಯ. ಇದು ಮಾನವೀಯತೆ ಇರುವವವರ ಲಕ್ಷಣವಲ್ಲ. ಮೃತರ ಸಂಬಂಧಿಗಳ ಆಕ್ರಂದನವೇ ಸಾಕ್ಷ್ಯ’ ಎಂದರು.

ವೈದ್ಯರು ಬೀದಿಗಿಳಿಯದಂತೆ ನೋಡಿಕೊಳ್ಳಬೇಕಾದ ಕರ್ತವ್ಯ ಸರ್ಕಾರದ್ದು. ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಗಳಿಗೆ ಅನುಗುಣವಾಗಿ ‘ಗ್ರೇಡಿಂಗ್ ಪದ್ಧತಿ’ ಜಾರಿಯಾಗಬೇಕು. ಬಡವರು ದುಬಾರಿ ವೆಚ್ಚದ ಚಿಕಿತ್ಸೆ ಪಡೆದರೆ, ಸರ್ಕಾರವೇ ಭರಿಸಬೇಕು. ಹೀಗೆ ಜನಪರ ಅಂಶಗಳನ್ನು ಮಸೂದೆಯಲ್ಲಿ ಸೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ರವಿ ತಿಳಿಸಿದರು.

ಬೆಳಗಾವಿ ಅಧಿವೇಶನ ಚಳವಳಿಯ ಕೇಂದ್ರಸ್ಥಾನವಾಗಿರುವುದು ವಿಷಾದನೀಯ. ಸದನದೊಳಗೆ ಬಿಜೆಪಿ ಜನರ ಪರವಾಗಿ ದನಿ ಎತ್ತುತ್ತಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿದೆ. ಬಡ್ತಿ ಮೀಸಲಾತಿ, ಮೌಢ್ಯ ನಿಷೇಧ ಮಸೂದೆಗೂ ಬೆಂಬಲ ನೀಡಿದ್ದೇವೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ರಾಜಶೇಖರ್, ಧನಂಜಯ ಕಡ್ಲೇಬಾಳು, ಅಂಬರ್‌ಕರ್ ಜಯಪ್ರಕಾಶ್‌, ಜಯಣ್ಣ, ಧನುಷ್‌ ರೆಡ್ಡಿ, ಪ್ರವೀಣ್‌, ಶಿವನಗೌಡ ಅವರೂ ಇದ್ದರು

‘ಮಸೂದೆ ಜನಪರವಾಗಿದ್ದರೆ ಬೆಂಬಲ
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ಜನಪರವಾಗಿದ್ದರೆ ಮಾತ್ರ ಬಿಜೆಪಿ ಬೆಂಬಲ ನೀಡುತ್ತದೆ ಎಂದು ಸಿ.ಟಿ.ರವಿ ತಿಳಿಸಿದರು. ಸೋಮವಾರ ಅಧಿವೇಶನದಲ್ಲಿ ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ಸರ್ಕಾರ ಮಂಡಿಸಲಿದೆ.

ಅದರಲ್ಲಿ ಜನವಿರೋಧಿ ಅಂಶಗಳಿದ್ದರೆ ಮಾರ್ಪಾಡುಗೊಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ವೈದ್ಯರ ಮುಷ್ಕರದ ಪರಿಣಾಮ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ರವಿ ಒತ್ತಾಯಿಸಿದರು.

* * 

ಜಿಲ್ಲಾ ಬಿಜೆಪಿಯಲ್ಲಿ ಗೊಂದಲಗಳು ಬಗೆಹರಿದಿವೆ. 2008ರ ವಿಧಾನಸಭಾ ಚುನಾವಣಾ ಫಲಿತಾಂಶ ಮರುಕಳಿಸಲಿದೆ. ಗತ ವೈಭವ ಶುರುವಾಗಲಿದೆ.
ಸಿ.ಟಿ.ರವಿ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.