ADVERTISEMENT

ಅಲ್ಪಸಂಖ್ಯಾತರ ಮತ ವಿಭಜನೆಗೆ ಬಿಜೆಪಿ ಕುತಂತ್ರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:21 IST
Last Updated 22 ಅಕ್ಟೋಬರ್ 2017, 5:21 IST

ಹರಿಹರ: ರಾಜ್ಯದಲ್ಲಿ ಅಲ್ಪಸಂಖ್ಯಾತರ ಮತ ವಿಭಜನೆಗೆ ಬಿಜೆಪಿಯು ಪ್ರಾದೇಶಿಕ ಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಎಐಸಿಸಿ ಕಾರ್ಯದರ್ಶಿ ಮಧುಗೌಡ ಯಾಸ್ಕಿ ಆರೋಪಿಸಿದರು. ನಗರದ ಮುಮ್ತಾಜ್ ಶಾದಿ ಮಹಲ್‌ನಲ್ಲಿ ಶನಿವಾರ ನಡೆದ ಬ್ಲಾಕ್ ಮಟ್ಟದ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೆಡಿಎಸ್ ಹಾಗೂ ಎಐಎಂಐಎಂ ಪಕ್ಷಗಳಿಗೆ ದೇಣಿಗೆ ನೀಡುವ ಬಿಜೆಪಿ ಅಲ್ಪಸಂಖ್ಯಾತರ ಮತ ವಿಭಜನೆಗೆ ಕುತಂತ್ರ ರೂಪಿಸಿದೆ. ಅಲ್ಪಸಂಖ್ಯಾತರು ಇಂಥ ತಂತ್ರಗಳಿಗೆ ಬಲಿಯಾಗದೇ, ಪಕ್ಷವನ್ನು ಬೆಂಬಲಿಸುವ ಮೂಲಕ ರಾಜ್ಯವನ್ನು ಕೋಮುವಾದಿಗಳಿಂದ ರಕ್ಷಿಸಬೇಕು’  ಎಂದು ಕರೆ ನೀಡಿದರು.

ಧರ್ಮ ಹಾಗೂ ಜಾತಿ ಆಧಾರದ ಮೇಲೆ ದೇಶದ ವಿಭಜನೆಗೆ ಯತ್ನಿಸುತ್ತಿರುವ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುವ ಅಗತ್ಯವಿದೆ. ಮುಂದಿನ ಸಂಸತ್ ಚುನಾವಣೆಗೆ ರಾಜ್ಯದ ವಿಧಾನಸಭೆ ಚುನಾವಣೆ ದಿಕ್ಸೂಚಿಯಾಗಲಿದೆ ಎಂದರು.

ADVERTISEMENT

ಅಬ್ಬರದ ಪ್ರಚಾರ ಹಾಗೂ ಮೆರವಣಿಗೆಯಿಂದ ಮತದಾರರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಪಕ್ಷದ ಮುಖಂಡರು, ಬೂತ್‌ ಮಟ್ಟದ ಸಮಿತಿಗಳನ್ನು ರಚಿಸಿ ಅವರನ್ನು ತರಬೇತುಗೊಳಿಸಿ, ಚಿಕ್ಕ ಚಿಕ್ಕ ಗುಂಪುಗಳನ್ನಾಗಿ ರಚಿಸಿ ಸರ್ಕಾರದ ಸೌಲಭ್ಯಗಳು ಹಾಗೂ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ, ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್‌ ಮಾತನಾಡಿ, ‘ಕೇವಲ ಆಶ್ವಾಸನೆಯ ಮಾತಿನಿಂದ ದೇಶ ನಡೆಸಲು ಸಾಧ್ಯವಿಲ್ಲ. ಅರ್ಥವ್ಯವಸ್ಥೆಯ ಜ್ಞಾನವಿಲ್ಲದೇ, ನೋಟು ರದ್ಧತಿ ಹಾಗೂ ಜಿಎಸ್‌ಟಿ ಜಾರಿಗೊಳಿಸಿರುವುದು ಮಾತ್ರ ಬಿಜೆಪಿ ಸಾಧನೆಯಾಗಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಎಸ್. ರಾಮಪ್ಪ ಮಾತನಾಡಿ, ಪಕ್ಷದಲ್ಲಿ ಆಂತರಿಕ ಗೊಂದಲಗಳನ್ನು ಮರೆತು ಸರ್ಕಾರದ ಸಾಧನೆಯನ್ನು ಮತದಾರರಿಗೆ ತಲುಪಿಸುವ ಕಾರ್ಯಕ್ಕೆ ಮುಖಂಡರು ಮುಂದಾಗಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿಗಳಾದ ಮಂಜುಳಾ, ಶ್ರೀನಾಥ್, ಜಿ.ಪಂ. ಸದಸ್ಯೆ ಅರ್ಚನಾ ಬಸವರಾಜ್, ಡಿ.ಬಸವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಎಚ್.ಬಿ. ಮಂಜಪ್ಪ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಡಿ.ಜಿ.ರಘುನಾಥ, ಅಬಿದ್ ಅಲಿ, ನಗರಸಭೆ ಅಧ್ಯಕ್ಷೆ ಎಂ.ಆಶಾ, ಸದಸ್ಯರಾದ ಬಿ. ರೇವಣಸಿದ್ದಪ್ಪ, ಸಿಗ್ಬತ್‌ಉಲ್ಲಾ, ಏಜಾಜ್ ಅಹಮದ್, ನಿಂಬಕ್ಕ ಚಂದಾಪೂರ, ಎಸ್.ಎಂ.ವಸಂತ, ಎಂ. ನಾಗೇಂದ್ರಪ್ಪ, ಮುಖಂಡರಾದ ಎಚ್.ಮಹೇಶ್ವರಪ್ಪ, ಸಿ.ಎನ್. ಹುಲಿಗೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.