ADVERTISEMENT

ಆಯುಷ್ ಆಸ್ಪತ್ರೆಗಳಿಗಿಲ್ಲವೇ ‘ಆಯಸ್ಸು’?

ಅಲೋಪತಿ ಔಷಧಿಗೆ ಮಾರುಹೋಗುತ್ತಿರುವ ರೋಗಿಗಳು: ಮಂಕಾದ ಆಯುರ್ವೇದ ಚಿಕಿತ್ಸಾ ಪದ್ಧತಿ

ಹೀರಾನಾಯ್ಕ ಟಿ.
Published 29 ಜೂನ್ 2015, 9:25 IST
Last Updated 29 ಜೂನ್ 2015, 9:25 IST

ದಾವಣಗೆರೆ:  ಆನಾದಿ ಕಾಲದಿಂದಲೂ ಉತ್ತುಂಗದಲ್ಲಿದ್ದ ಆಯುರ್ವೇದ ಚಿಕಿತ್ಸೆ ಇಂದು ಜಾಗತಿಕ ‘ಇಂಗ್ಲಿಷ್ ಮೆಡಿಷನ್’ ಪ್ರಭಾವಕ್ಕೆ ಸಿಲುಕಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

‘ಆಯುರ್ವೇದ ಚಿಕಿತ್ಸೆ’ ಎಂದರೆ ‘ದೇವರು ನೀಡಿದ ವರ’ ಎಂದು ಪರಿಗಣಿಸಲಾಗುತ್ತಿತ್ತು. ಮಹಾಮುನಿ, ಋಷಿಗಳು ನೈಸರ್ಗಿಕವಾಗಿ ದೊರೆಯುವ ಗಿಡಮೂಲಿಕೆಗಳಿಂದಲೇ ಅದೆಷ್ಟೋ ಕಾಯಿಲೆ ಗುಣಪಡಿಸುತ್ತಿದ್ದರು. ಆದರೆ,  ಇಂದಿನ ಆಧುನಿಕ  ವೈಜ್ಞಾನಿಕ ಜಗತ್ತಿನಲ್ಲಿ ಹೊಸ, ಹೊಸ ಸಂಶೋಧನೆಗಳು ಹೆಚ್ಚಾಗಿ ಬೆಳಕಿಗೆ ಬಂದಂತೆ ಆಯುರ್ವೇ ದ ಔಷಧ ಕಣ್ಮರೆಯಾಗುತ್ತಿವೆ.

ಇದಕ್ಕೆ ಸರ್ಕಾರ ಪ್ರಚಾರದ ಕೊರತೆಯೋ ಅಥವಾ ಜನರ ನಿರಾಸಕ್ತಿ ಯೋ ಇಂದು ಆಯುರ್ವೇದ ಆಸ್ಪತ್ರೆ ಗಳನ್ನು ಕೇಳುವರೇ  ಇಲ್ಲದಂತಾ ಗಿದೆ.  ಹೆಸರಿಗಷ್ಟೇ ಆಯುಷ್ಯ ಆಸ್ಪತ್ರೆ  ಎನ್ನುವಂತಾಗಿದೆ.

ಜಿಲ್ಲೆಯಲ್ಲಿ ಒಟ್ಟು 33 ಆಸ್ಪತ್ರೆ:   ದಾವಣಗೆರೆ ತಾಲ್ಲೂಕಿನಲ್ಲಿ ಏಳು, ಹರಿಹರ ಮೂರು, ಹರಪನಹಳ್ಳಿ ಏಳು, ಚನ್ನಗಿರಿ ಐದು, ಜಗಳೂರಲ್ಲಿ ಒಂದು, ಹೊನ್ನಾಳಿಯಲ್ಲಿ ಹತ್ತು ಆಸ್ಪತ್ರೆಗಳಿದ್ದವು. ಇದರಲ್ಲಿ ದಾವಣಗೆರೆ ಪ್ರಕೃತಿ ಚಿಕಿತ್ಸಾ ಕೇಂದ್ರ, ಚನ್ನಗಿರಿ ಆಯುರ್ವೇದ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗಿದೆ.

ಸರ್ಕಾರಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆ ಕಟ್ಟಡ ನಿರ್ಮಾಣ, ಸಿಬ್ಬಂದಿ ನೇಮಕ ಮಾಡಿದೆ. ಆದರೆ, ಇಲ್ಲಿಗೆ ಬರುವವರ ಸಂಖ್ಯೆ ಮಾತ್ರ ಸಂಪೂರ್ಣ ಇಳಿಮುಖವಾಗಿದೆ. ಇದಕ್ಕೆ ಆಯುರ್ವೇದ ಮಹತ್ವ ವನ್ನು ತಿಳಿಸಿಕೊಡುವಲ್ಲಿ ಸರ್ಕಾರದ ವಿಫಲವೋ ಅಥವಾ ಜನರಿಗೆ ಮಾಹಿತಿ ಇಲ್ಲವೋ ಆಯುರ್ವೇದ ಆಸ್ಪತ್ರೆಗಳತ್ತ ಜನಮುಖ ಮಾಡುತ್ತಿಲ್ಲ.

ಆಸ್ಪತ್ರೆ ಬಿಕೊ: ನಗರದ ಕೋರ್ಟ್ ಬಳಿ ಇರುವ ಆಯುಷ್ಯ ಆಸ್ಪತ್ರೆ ರೋಗಿಗಳೇ ಇಲ್ಲದೆ ಬಿಕೊ ಎನ್ನುತ್ತಿದೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಕೆಲಸವಿಲ್ಲದೇ ರೋಗಿಗಳಿಗಾಗಿ ಕಾಯುವ ಪರಿಸ್ಥಿತಿ ಬಂದಿದೆ. ಇದು ಕೇವಲ ದಾವಣಗೆರೆ ಆಸ್ಪತ್ರೆಗಳ ಸ್ಥಿತಿಯಲ್ಲ. ಜಿಲ್ಲೆಯಾದ್ಯಂತ ಬಹುತೇಕ ಆಯುಷ್ಯ ಆಸ್ಪತ್ರೆಗಳ ಸ್ಥಿತಿ ಇದೇ.  ಇಲ್ಲಿರುವ ವೈದ್ಯರು ಸಹ ಆಯುಷ್ಯಕ್ಕೆ ಪುನರ್ ಜೀವ ನೀಡುವ ಸರ್ಕಾರದ ಯೋಜನೆಗಳ ಬಗ್ಗೆ ಕಾತರರಾಗಿದ್ದಾರೆ.

ಸಿಬ್ಬಂದಿ ಕೊರತೆ:  ಜಿಲ್ಲೆಯ 33 ಆಸ್ಪತ್ರೆ ಗಳಲ್ಲಿ 29 ವೈದ್ಯರಿದ್ದು, ಅದರಲ್ಲಿ ಇಬ್ಬರು ಥೆರಪಿಸ್ಟ್ ಸಹಿತ ನಾಲ್ಕು ವೈದ್ಯರ ಹುದ್ದೆ ಖಾಲಿ ಇವೆ. ಅಲ್ಲದೆ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳು ಅರ್ಧದಷ್ಟು ಖಾಲಿ ಇವೆ. ಸರ್ಕಾರ ಪ್ರತಿ ವರ್ಷ ಜಿಲ್ಲೆಗೆ 15ಲಕ್ಷ ಮೌಲ್ಯದ ಔಷಧ ಪೂರೈಕೆ ಮಾಡುತ್ತದೆ. ಅದರಲ್ಲಿ ಶೇ 60ರಷ್ಟು ಔಷಧ ಸರ್ಕಾರ ಸರಬರಾಜು ಮಾಡುತ್ತದೆ. ಉಳಿದ ಶೇ 40 ರಷ್ಟು ಔಷಧವನ್ನು ಡ್ರಗ್ ಲಾಜಸ್ಟಿಕ್ ಮೂಲಕ ಒದಗಿಸುತ್ತದೆ.

ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾಂಪ್ರಾ ದಾಯಿಕ ಆಯುರ್ವೇದ ಆಸ್ಪತ್ರೆ ನಿರ್ಮಾಣ ಮಾಡಿದರೂ ಸಹ ಇಲ್ಲಿಗೆ ಬರುವವರ ಸಂಖ್ಯೆ ಮಾತ್ರ ಅಲ್ಪ. ಸರ್ಕಾರಗಳು ಸಾಂಪ್ರಾದಾಯಿಕ ಆಯು ರ್ವೇದ ಆಸ್ಪತ್ರೆ ಪುನರ್ ಚೇತನಗೊಳಿಸಬೇಕಾದರೆ ಜನರಲ್ಲಿ ಜಾಗೃತಿ, ಪ್ರಚಾರ ಹಾಗೂ ಕಾಯಕಲ್ಪ ನೀಡಬೇಕಿದೆ ಎನ್ನುವುದು ಇಲ್ಲಿನ ಜನರ ಆಶಯ. 

ಖಾಸಗಿ ಆಸ್ಪತ್ರೆಗಳ ಅಬ್ಬರ: ರಾಜ್ಯದಲ್ಲಿ ದಿನೆ ದಿನೇ ಖಾಸಗಿ ಆಸ್ಪತ್ರೆಗಳು ತಲೆ ಎತ್ತುತ್ತಿವೆ.  ಸರ್ಕಾರಿ ಆಸ್ಪತ್ರೆಗಳಲ್ಲಿ ಹೋಗುವ ರೋಗಿಗಳ ಸಂಖ್ಯೆ ಕಡಿಮೆ ಯಾಗುತ್ತಿದೆ. ಆರ್ಥಿಕವಾಗಿ ದುರ್ಬಲ ರಾದ ಕಡು ಬಡವರು, ನಿರ್ಗತಿಕರು, ಬಿಪಿಎಲ್‌ ಪಡಿತರ ಚೀಟಿ ದಾರರು ಮಾತ್ರ ಹೆಚ್ಚು ಸರ್ಕಾರಿ ಆಸ್ಪತ್ರೆಗಳತ್ತ ಹೋಗು ತ್ತಾರೆ.  ಖಾಸಗಿ ಆಸ್ಪತ್ರೆಗಳೆಲ್ಲ ಶ್ರೀಮಂತ ರಿಗೆ ಎಂಬ ಭಾವನೆ ಜನರಲ್ಲಿ ಬೇರೂ ರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.