ADVERTISEMENT

ಇಂದಿನಿಂದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 8:20 IST
Last Updated 23 ಏಪ್ರಿಲ್ 2017, 8:20 IST

ದಾವಣಗೆರೆ: ಬಸವಪ್ರಭಾತ್ ಫೇರಿ ಶತಮಾನೋತ್ಸವ ಅಂಗವಾಗಿ ಇದೇ 23ರಿಂದ 29ರವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.ದೇಶದಲ್ಲೇ ಮೊದಲ ಬಾರಿಗೆ 1913ರಲ್ಲಿ ಬಸವಣ್ಣನವರ ಜಯಂತಿಯನ್ನು ಆಚರಿಸಿದ ಹೆಮ್ಮೆ ದಾವಣಗೆರೆಯ ವಿರಕ್ತಮಠಕ್ಕಿದೆ. ಅಲ್ಲದೇ, 1917ರಲ್ಲಿ ಮೃತ್ಯುಂಜಯ ಅಪ್ಪಗಳು, ಹರ್ಡೇಕರ ಮಂಜಪ್ಪ ಅವರು ಬಸವಪ್ರಭಾತ್ ಫೇರಿ ಆರಂಭಿಸಿದ ಕೀರ್ತಿಯೂ ಈ ಮಠದ್ದಾಗಿದೆ. ನಂತರ ಫೇರಿಯನ್ನು ಕಣಕುಪ್ಪಿ ಕೊಟ್ರಬಸಪ್ಪ, ಗುರುಪಾದಪ್ಪ ಅವರು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ ಎಂದು ಸ್ವಾಮೀಜಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಾದಯಾತ್ರೆಗೆ 23ರಂದು ಬೆಳಿಗ್ಗೆ 8ಕ್ಕೆ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡುವರು. ಅಂದು ವಿರಕ್ತಮಠದಿಂದ ಹೊರಡುವ ಪಾದಯಾತ್ರೆ ಸ್ವಾಗೇರಪೇಟೆ, ಒಕ್ಕಲಿಗರಪೇಟೆ, ಕಾಯಿಪೇಟೆ ಮೂಲಕ ಮತ್ತೆ ವಿರಕ್ತಮಠದಲ್ಲಿ ಕೊನೆಗೊಳ್ಳುವುದು ಎಂದರು.24ರಂದು ವಿರಕ್ತಮಠದಿಂದ ಬಕ್ಕೇಶ್ವರ ದೇವಸ್ಥಾನ, ಮಹಾರಾಜಪೇಟೆ, ಗಾಂಧಿನಗರ, ಕಾಳಿಕಾದೇವಿ ರಸ್ತೆ, 25ರಂದು ವಿರಕ್ತಮಠದಿಂದ ಮದಕರಿ ನಾಯಕ ವೃತ್ತ, ಜಾಲಿನಗರ, 26ರಂದು ವಿರಕ್ತಮಠದಿಂದ ಮದಕರಿನಾಯಕ ವೃತ್ತ, ಛಲವಾದಿ ಕೇರಿ, 27ರಂದು ವಿರಕ್ತಮಠದಿಂದ ಬೂದಾಳ್‌ ರಸ್ತೆ, ಕಾಳಿಕಾದೇವಿ ರಸ್ತೆ ಹಾಗೂ28ರಂದು ವಿರಕ್ತಮಠದಿಂದ ಬೆಳ್ಳೂಡಿಗಲ್ಲಿ, ಹರ್ಡೇಕರಮಂಜಪ್ಪ ವೃತ್ತ, ಮಂಡಿಪೇಟೆ, ಚಾಮರಾಜಪೇಟೆ ಮೂಲಕ ಬಂದು ವಿರಕ್ತಮಠದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.

ಅಲ್ಲದೇ, ಶಿವಯೋಗಾಶ್ರಮದಲ್ಲಿ 27ರಂದು ಸಂಜೆ 6.30ಕ್ಕೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಕವಿಗೋಷ್ಠಿ ಆಯೋಜಿಸಲಾಗಿದೆ. 28ರಂದು ಸಂಜೆ 4ಕ್ಕೆ ವಿರಕ್ತಮಠದಲ್ಲಿ ಮಕ್ಕಳಿಗಾಗಿ ವಚನ ಗಾಯನ, ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ADVERTISEMENT

29ರಂದು ಬಸವ ಜಯಂತಿ: 29ರಂದು ಜಯಂತಿ ಅಂಗವಾಗಿ ಐತಿಹಾಸಿಕ ಶ್ರೀಗುರು ಬಸವಣ್ಣನವರ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಬಸವಣ್ಣನವರ ಭಾವಚಿತ್ರದೊಂದಿಗೆ ಶರಣರ ಗ್ರಂಥ ಮೆರವಣಿಗೆ ನಡೆಸಲಾಗುವುದು. ಈ ಪಲ್ಲಕ್ಕಿ ಉತ್ಸವ ವೀರಶೈವ ತರುಣ ಸಂಘದೊಂದಿಗೆ ನಡೆಯಲಿದ್ದು, ಮೆರವಣಿಗೆಯು ವಿರಕ್ತಮಠದಿಂದ ಹೊರಟು ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ವೃತ್ತ, ಬಸವರಾಜಪೇಟೆ, ಆನೆಕೊಂಡಪೇಟೆ, ಹಳೇಪೇಟೆಯಿಂದಮಠಕ್ಕೆ ಹಿಂತಿರುಗಲಿದೆ ಎಂದು ಹೇಳಿದರು.

ಅದೇ ದಿನ ಬೆಳಿಗ್ಗೆ 11ಕ್ಕೆ ಮಠದಲ್ಲಿ ತೊಟ್ಟಿಲು ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಣ್ಣ ಮಕ್ಕಳಿಗೆ ನಾಮಕರಣ ಮಾಡಲಾಗುವುದು. ಇಲ್ಲಿ ಸರ್ವಧರ್ಮದವರಿಗೂ ಅವಕಾಶವಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಜಯಕುಮಾರ್, ಪಲ್ಲಾಗಟ್ಟೆ ಕೊಟ್ಟೂರೇಶ್ವರ, ಮುರುಗೇಶ್, ಮಹಾದೇವಮ್ಮ, ಕಣಕುಪ್ಪಿ ಮಹೇಶ್, ಎಂ.ಕೆ.ಬಕ್ಕಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.