ADVERTISEMENT

ಇನ್ನೆರಡು ತಿಂಗಳಲ್ಲಿ ಇಂದಿರಾ ಕ್ಯಾಂಟೀನ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 6:21 IST
Last Updated 6 ನವೆಂಬರ್ 2017, 6:21 IST
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್   

ದಾವಣಗೆರೆ: ಜಿಲ್ಲೆಯಲ್ಲೂ ಜನರಿಗೆ ₹ 5 ಕ್ಕೆ ತಿಂಡಿ, ₹ 10ಕ್ಕೆ ಊಟ ಸಿಗುವ ದಿನಗಳು ದೂರ ಇಲ್ಲ. 2018ರ ಜನವರಿ 1ಕ್ಕೆ ಜಿಲ್ಲೆಯಲ್ಲಿ 13 ಇಂದಿರಾ ಕ್ಯಾಂಟೀನ್‌ಗಳು ಆರಂಭಗೊಳ್ಳಲಿವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆ ಯಶಸ್ವಿಯಾಗಿದ್ದರಿಂದ ರಾಜ್ಯದ 171 ಕೇಂದ್ರಗಳಲ್ಲಿ 246 ಕ್ಯಾಂಟೀನ್‌ಗಳು ಆರಂಭಿಸಲು ಅಕ್ಟೋಬರ್‌ನಲ್ಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಅದರಂತೆ ನವೆಂಬರ್ ಅಂತ್ಯದೊಳಗೆ ಸೂಕ್ತ ಸ್ಥಳ ಗುರುತಿಸಬೇಕು, ಡಿಸೆಂಬರ್ 17ರ ಒಳಗೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚಿಸಲಾಗಿತ್ತು.

ಜಿಲ್ಲೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಸ್ಥಳ ಗುರುತಿಸುವಿಕೆ ಕಾರ್ಯ ಪೂರ್ಣಗೊಂಡಿದ್ದು, ಅದರ ವರದಿಯನ್ನು ನಗರಾಭಿವೃದ್ಧಿ ಕೋಶವು ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಿಕೊಟ್ಟಿದೆ.

ಎಲ್ಲೆಲ್ಲಿ ಕ್ಯಾಂಟೀನ್‌?: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 8 ಕಡೆ ಕ್ಯಾಂಟೀನ್‌ ಆರಂಭಗೊಳ್ಳಲಿದೆ. ಸರ್ಕಾರಿ ಹೆರಿಗೆ ಆಸ್ಪತ್ರೆ ಆವರಣದಲ್ಲಿರುವ ಖಾಲಿ ಸ್ಥಳ, ಎಪಿಎಂಸಿ ಯಾರ್ಡ್‌ ಆವರಣ, ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿರುವ ನಿರಾಶ್ರಿತರ ವಸತಿ ಕೇಂದ್ರ ಆವರಣ, ಜಿಲ್ಲಾ ಕ್ರೀಡಾಂಗಣದ ಆವರಣ, ಹರಿಹರ ಬಸ್‌ ನಿಲ್ದಾಣ ಹಿಂಭಾಗದ ಹೈಸ್ಕೂಲ್‌ ಮೈದಾನದ ಮೂಲೆ, ಪ್ರಾದೇಶಿಕ ಸಾರಿಗೆ ಕಚೇರಿ ಆವರಣ, ಕರೂರು ಕೈಗಾರಿಕಾ ವಸಾಹತು ಪ್ರದೇಶದ ಆವರಣ ಹಾಗೂ ಲೋಕಿಕೆರೆ ರಸ್ತೆ ಕೈಗಾರಿಕಾ ವಸಾಹತು ಪ್ರದೇಶಗಳನ್ನು ಗುರುತಿಸಲಾಗಿದೆ.

ADVERTISEMENT

ಇದಲ್ಲದೆ ಉಳಿದ ಐದು ತಾಲ್ಲೂಕುಗಳಲ್ಲಿ ಐದು ಸ್ಥಳಗಳನ್ನು ಗುರುತಿಸಲಾಗಿದೆ. ಹರಿಹರ ನಗರಸಭೆ ಆವರಣ, ಹರಪನಹಳ್ಳಿ ಹಳೇ ತಾಲ್ಲೂಕು ಕಚೇರಿ ಆವರಣ, ಚನ್ನಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿರುವ ಪುರಸಭೆಯ ಜಾಗ, ಹೊನ್ನಾಳಿ ಖಾಸಗಿ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಕುರಿ ಸಂತೆ ಮೈದಾನ, ಜಗಳೂರು ಮಹಾತ್ಮ ಗಾಂಧಿ ಖಾಸಗಿ ಬಸ್‌ ನಿಲ್ದಾಣದ ಆವರಣಗಳನ್ನು ಗುರುತಿಸಲಾಗಿದೆ.

ಈ 13 ಸ್ಥಳಗಳಲ್ಲಿ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ಮಾಲೀಕತ್ವ ಹೊಂದಿರುವ ಪ್ರದೇಶಗಳು 6 ಇವೆ. ಉಳಿದ 7 ಸ್ಥಳಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ನಗರಾಭಿವೃದ್ಧಿ ಕೋಶವು ಆಯಾ ಇಲಾಖೆಗಳಿಗೆ ಆದೇಶ ನೀಡಿದೆ.

ಎಷ್ಟು ವೆಚ್ಚ?: ಈ ಯೋಜನೆಗೆ ಪ್ರತಿದಿನ ₹ 29 ಲಕ್ಷದಂತೆ, ಪ್ರತಿ ತಿಂಗಳಿಗೆ ಸುಮಾರು ₹ 189 ಕೋಟಿ ವೆಚ್ಚವಾಗಲಿದೆ. ಅಡುಗೆಗೆ ಬೇಕಾದ ಸಾಮಗ್ರಿಯನ್ನು ಕೆಆರ್‌ಐಡಿಸಿಎಲ್‌ (ಲ್ಯಾಂಡ್‌ ಆರ್ಮಿ) ಒದಗಿಸಲಿದೆ. ಆಹಾರ ಮತ್ತು ಸೇವೆ ಒದಗಿಸುವ ಜವಾಬ್ದಾರಿ ನಗರಾಭಿವೃದ್ಧಿ ಕೋಶದ್ದು ಎಂದು ಜಿಲ್ಲಾ ನಗರಾಭಿವೃದ್ಧಿ
ಕೋಶದ ಯೋಜನಾ ನಿರ್ದೇಶಕ ಜಿ.ಟಿ.ವೀರೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ವ್ಯವಸ್ಥಿತವಾಗಿ ಜಾರಿ ಮಾಡಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಹೇಳಿದ್ದಾರೆ.

ಬಾಲಕೃಷ್ಣ ಪಿ.ಎಚ್. ಶಿಬಾರ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.