ADVERTISEMENT

ಉಚ್ಚಂಗಿದುರ್ಗ: ಬಿರುಗಾಳಿಗೆ ತತ್ತರಿಸಿದ ಜನರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 6:52 IST
Last Updated 18 ಏಪ್ರಿಲ್ 2018, 6:52 IST
ಬಿರುಗಾಳಿ ಮಳೆಗೆ ಮರಗಳು ಉರುಳಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.
ಬಿರುಗಾಳಿ ಮಳೆಗೆ ಮರಗಳು ಉರುಳಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.   

ಉಚ್ಚಂಗಿದುರ್ಗ: ಇಲ್ಲಿನ ಬಸಾಪುರ, ಗೋಲ್ಲರಹಟ್ತಿ, ನಾಗತಿಕಟ್ಟೆ, ಲಕ್ಷ್ಮೀಪುರ, ಹಿರೆಮೇಗಳಗೆರೆ ಹಾಗೂ ಇತರೆ ಗ್ರಾಮಗಳಲ್ಲಿ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ನೂರಾರು ಮರಗಳು ಧರೆಗುರುಳಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿತು.

ಉಚ್ಚಂಗಿದುರ್ಗ ಹಾಗೂ ಪುಣಬಘಟ್ಟ ವಿದ್ಯುತ್ ಪ್ರಸರಣ ಘಟಕ ವ್ಯಾಪ್ತಿಯಲ್ಲಿ ಬರುವಂತಹ ಹಳ್ಳಿಗಳಲ್ಲಿ ಬಿರುಗಾಳಿಯ ಅಬ್ಬರಕ್ಕೆ 50ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕಚ್ಚಿದವು. ಜಂಬುಲಿಂಗನಹಳ್ಳಿ ಗ್ರಾಮದಲ್ಲಿ 5 ಪರಿವರ್ತಕ ಕೇಂದ್ರಗಳು ಸುಟ್ಟುಹೊಗಿದ್ದು ಕಂಬ ಸಹಿತ ನೆಲಕ್ಕೆ ಉರಳಿವೆ. ಬಸಾಪುರ ಗ್ರಾಮದಲ್ಲಿ ಗಾಳಿಗೆ ವಿದ್ಯುತ್ ತಂತಿ ಮೇಲೆ ಮರ ಬಿದ್ದು ಐದಕ್ಕೂ ಅಧಿಕ ಕಂಬಗಳು ಹಾನಿಯಾಗಿದೆ.

ಅರಸೀಕೆರೆ ಹೋಬಳಿಯಲ್ಲಿ ಗುಡುಗು ಸಹಿತ ಮಳೆಗೆ ಹಲವು ಕಡೆ ಕಂಬಗಳು ನೆಲಕ್ಕೆ ಬಿದ್ದಿವೆ. ಇದರಿಂದ ಹಳ್ಳಿಗಳಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದ್ದು ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ADVERTISEMENT

ಆಲಿಕಲ್ಲು ಸಹಿತ ಮಳೆ: ಹಿರೇಮೇಗಳಗೆರೆ ಹಾಗೂ ಲಕ್ಷ್ಮೀಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು ಗಾಳಿಯ ರಭಸಕ್ಕೆ ಭತ್ತದ ಬೆಳೆ ನೆಲಕಚ್ಚಿದೆ. ಗದ್ದೆಗಳಲ್ಲಿ ನೀರು ಇದ್ದು ಬೆಳೆ ಕೊಳೆಯುವ ಭೀತಿ ಎದುರಾಗಿದೆ.

ಮನೆಗಳಿಗೆ ಹಾನಿ: ಸೋಮವಾರ ಸಂಜೆ ಏಕಾಏಕಿ ಬೀಸಿದ ಬಿರುಗಾಳಿಗೆ ಲಕ್ಷ್ಮೀಪುರ ಪಂಚಾಯ್ತಿ ವ್ಯಾಪ್ತಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ 4 ಮನೆಗಳು ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ರುದ್ರೇಶ ಎಂಬುವವರ ಮನೆಯ ಚಾವಣಿಯ ಶೀಟುಗಳು ಹಾರಿದ್ದು ಹೆಂಡತಿ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಂಬುಲಿಂಗನಹಳ್ಳಿ, ಬಸಾಪುರ ಗ್ರಾಮಗಳಲ್ಲಿ ತಲಾ ಎರಡು ಮನೆಗಳು ಹಾನಿಯಾಗಿವೆ. ಉಚ್ಚಂಗಿದುರ್ಗದಲ್ಲಿ ಅಂಗಡಿ ಮುಂದೆ ಹಾಕಿದ್ದ ಚಪ್ಪರಗಳು ಗಾಳಿಯ ರಭಸಕ್ಕೆ ಹಾರಿವೆ.

ಸಂಚಾರ ಸ್ಥಗಿತ: ಗಾಳಿಯ ರಭಸಕ್ಕೆ ಅರಸೀಕೆರೆ ಹೋಬಳಿಯಲ್ಲಿ ನೂರಾರು ಮರಗಳು ಬೇರು ಸಹಿತ ಬಿದ್ದಿವೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.