ADVERTISEMENT

ಉತ್ತರಕುಮಾರ ಆಗಬೇಡಿ,ಯುದ್ಧಕ್ಕೆ ಸಿದ್ಧರಾಗಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 5:17 IST
Last Updated 8 ಜುಲೈ 2017, 5:17 IST

ದಾವಣಗೆರೆ: ‘ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್ ಉತ್ತರಕುಮಾರರಂತೆ ಹೇಳಿಕೆ ನೀಡುವುದನ್ನು ಬಿಟ್ಟು ಕಲಿಯುಗದ ಭೀಮನಂತೆ ಧರ್ಮಯುದ್ಧಕ್ಕೆ ಸಿದ್ಧರಾಗಿ’ ಎಂದು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸವಾಲು ಹಾಕಿದರು.

‘ಮೂರು ವರ್ಷಗಳ ಹಿಂದೆ ಆದರ್ಶ ಗ್ರಾಮವನ್ನಾಗಿಸಲು ಆಯ್ಕೆ ಮಾಡಿಕೊಂಡ ಜಗಳೂರಿನ ಮುಸ್ಟೂರನ್ನು ಇದುವರೆಗೂ ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ್ಲ. ಇನ್ನು ಜಿಲ್ಲೆಯನ್ನು ಅಭಿವೃದ್ಧಿ ಪಡಿಸುತ್ತಾರಾ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ನೀವು( ಸಿದ್ದೇಶ್ವರ) ಸಮರ್ಥರಾಗಿದ್ದರೆ ಪ್ರಧಾನಿ ನಿಮ್ಮನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದೇಕೆ?  ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಿಕ್ಕ ಒಂದು ಅವಕಾಶವನ್ನೂ ನೀವು ಹಾಳು ಮಾಡಿ ಕೊಂಡಿರಿ’ ಎಂದು ಮೂದಲಿಸಿದರು.

ADVERTISEMENT

‘ಮಲ್ಲಿಕಾರ್ಜುನ ಅವರು ದಾವಣಗೆರೆ ನಗರದ ಜನರಿಗೆ ಕುಡಿಯುವ ನೀರಿಗಾಗಿ ಕುಂದವಾಡ ಕೆರೆ ಅಭಿವೃದ್ಧಿಪಡಿಸಿದ್ದಾರೆ. ರಸ್ತೆಗಳನ್ನು ಕಾಂಕ್ರೀಟ್‌ ಮಾಡಿಸಿದ್ದಾರೆ. ಗಾಜಿನ ಮನೆ ನಿರ್ಮಿಸುತ್ತಿದ್ದಾರೆ. ಇವು ನಿಮಗೆ ಕಣ್ಣಿಗೆ ಕಾಣಿಸುತ್ತಿಲ್ಲವೇ? ರಾಜಕೀಯ ಭಿನ್ನಾಭಿಪ್ರಾಯ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸುವುದನ್ನು ಕಲಿಯಿರಿ’ ಎಂದು ಸಿದ್ದೇಶ್ವರ ವಿರುದ್ಧ ವಾಗ್ದಾಳಿ ನಡೆಸಿದರು. ‘ರೇಣುಕಾಚಾರ್ಯ ಇತಿಹಾಸ ಯಾರಿಗೆ ತಾನೇ ತಿಳಿದಿಲ್ಲ? ನೈತಿಕತೆ ಇಲ್ಲದ ಮನುಷ್ಯನಿಂದ ಯಾರೂ ಪಾಠ ಕಲಿತುಕೊಳ್ಳುವ ಅಗತ್ಯ ಇಲ್ಲ’ ಎಂದರು.

ಸಂಸದರು ಹಾಗೂ ಬಿಜೆಪಿ ಅಧ್ಯಕ್ಷರ ವರ್ತನೆ ಹೀಗೆ ಮುಂದುವರಿದರೆ ಅವರ ನಿವಾಸಗಳ ಎದುರು ಪ್ರತಿಭಟನೆ ನಡೆಸ ಲಾಗುವುದು ಎಂದು ಎಚ್ಚರಿಕೆ ನೀಡಿದರು. ಪಾಲಿಕೆ ಸದಸ್ಯ ಶಿವನಳ್ಳಿ ರಮೇಶ್‌ ಮಾತನಾಡಿ, ‘ದಾವಣಗೆರೆ ನಗರದಲ್ಲಿ ನಿಮ್ಮ ಅನುದಾನದಲ್ಲಿ ಕೊರೆಸಿದ 40 ಬೋರ್‌ವೆಲ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಿಫಲವಾಗಿವೆ. ವಾರ್ಡ್‌ ನಂ 22ರಲ್ಲಿ ಹನಿ ನೀರು ಸಿಗುವುದಿಲ್ಲ ಎಂದು ಜಲ ಸಮೀಕ್ಷೆ ಹೇಳಿದರೂ ನೀವು ಅಲ್ಲಿ ಯಾವ ಪುರುಷಾರ್ಥಕ್ಕೆ ಬೋರ್‌ವೆಲ್‌ ಕೊರೆಸಿದ್ದೀರಿ’ ಎಂದು ಪ್ರಶ್ನಿಸಿದರು.

‘ಸಚಿವರು, ಶಾಸಕರ ವಿರುದ್ಧ ಹಗುರವಾಗಿ ಮಾತನಾಡಿರುವುದು ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ. ಓಟಿಗೆ ರಾಜಕಾರಣ ಬೇಡ, ಅಭಿವೃದ್ಧಿಗೆ ರಾಜಕಾರಣ ಮಾಡಿ’ ಎಂದರು.

ಮುಖಂಡರಾದ ಬಿ.ವೀರಣ್ಣ, ಹಾಲೇಶಪ್ಪ ಮಾತನಾಡಿ, ‘ನೀವು ಭೀಮಸಮುದ್ರದ ಭೀಮ ಆದರೆ ಮಲ್ಲಿಕಾರ್ಜುನ ದಾವಣಗೆರೆಯ ಮಲ್ಲ. ನಿಮ್ಮ ಜೊತೆಗಿರುವವರು ನಕಲಿ ಪೈಲ್ವಾ ನರು. ನಾವು ಅಸಲಿ. ಕುಸ್ತಿ ಆಡು ವುದಕ್ಕೆ ಬೇಕಾದರೆ ಹೈಸ್ಕೂಲ್‌ ಮೈದಾನಕ್ಕೆ ಬನ್ನಿ’ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್‌ ಅನಿತಾಬಾಯಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಅಶ್ವಿನಿ ಪ್ರಶಾಂತ್‌, ಮುಖಂಡರಾದ ದಿನೇಶ್‌ ಕೆ.ಶೆಟ್ಟಿ, ಎ.ನಾಗರಾಜ, ಟಿ.ಬಸವರಾಜ್, ಚಂದ್ರಣ್ಣ, ಮುಜಾಹಿದ್, ಮಾಲತೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.