ADVERTISEMENT

ಎಪಿಎಂಸಿ ಅಧ್ಯಕ್ಷರಾಗಿ ರಾಜಪ್ಪ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 7:35 IST
Last Updated 14 ಫೆಬ್ರುವರಿ 2017, 7:35 IST
ಚನ್ನಗಿರಿಯ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಬಿ. ರಾಜಪ್ಪ ಮತ್ತು ಉಪಾಧ್ಯಕ್ಷ ಎಸ್.ಎಂ. ವಿಜಯಕುಮಾರ್ ಅವರನ್ನು ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅಭಿನಂದಿಸಿದರು. ಪಿ.ಎಸ್. ಸಿದ್ದೇಶ್, ಎಂ.ಎನ್. ಪುಷ್ಪಾವತಿ ಇದ್ದರು.
ಚನ್ನಗಿರಿಯ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಬಿ. ರಾಜಪ್ಪ ಮತ್ತು ಉಪಾಧ್ಯಕ್ಷ ಎಸ್.ಎಂ. ವಿಜಯಕುಮಾರ್ ಅವರನ್ನು ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅಭಿನಂದಿಸಿದರು. ಪಿ.ಎಸ್. ಸಿದ್ದೇಶ್, ಎಂ.ಎನ್. ಪುಷ್ಪಾವತಿ ಇದ್ದರು.   
ಚನ್ನಗಿರಿ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ಸೋಮವಾರ ನಡೆಯಿತು.
 
ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಚನ್ನಗಿರಿ ಕ್ಷೇತ್ರದ ಎಂ.ಬಿ. ರಾಜಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆರೆಬಿಳಚಿ ಕ್ಷೇತ್ರದ ಎಸ್‌.ಎಂ. ವಿಜಯ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಎಸ್.ಪದ್ಮಾಕುಮಾರಿ ಘೋಷಿಸಿದರು.
 
ಒಟ್ಟು 13 ಸದಸ್ಯ ಬಲವುಳ್ಳ ಎಪಿಎಂಸಿಯಲ್ಲಿ ಬಿಜೆಪಿ ಬೆಂಬಲಿತ 10 ಹಾಗೂ ಕಾಂಗ್ರೆಸ್ ಬೆಂಬಲಿತ 3 ಸದಸ್ಯರು ಆಯ್ಕೆಯಾಗಿದ್ದರು. ಈಗ ಎಪಿಎಂಸಿ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಹಿಡಿದಿದೆ. ಕಳೆದ ಬಾರಿಯೂ ಬಿಜೆಪಿ ಅಧಿಕಾರವನ್ನು ನಡೆಸಿತ್ತು.
 
ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ‘ಎಪಿಎಂಸಿಗೆ ಕೇಂದ್ರ ಸರ್ಕಾರದ ಅನುದಾನ ಹೆಚ್ಚಾಗಿ ಬರುತ್ತದೆ. ಬೇರೆಯವರು ಎಪಿಎಂಸಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಗಟ್ಟಿ, ಬಂದ ಅನುದಾನವನ್ನು ರೈತರ ಅನುಕೂಲಕ್ಕಾಗಿ ಸದ್ಬಳಕೆ ಮಾಡಬೇಕು. ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವ ಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ, ಆಡಳಿತ ನಡೆಸಿದ್ದು, ಇದಕ್ಕೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ವಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಕಂಡು ಬೇಸತ್ತು ಜನರು ಬಿಜೆಪಿ ಬೆಂಬಲಿಸಿದ್ದಾರೆ’ ಎಂದರು.
 
ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಿ.ಎಸ್. ಸಿದ್ದೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಎಂ.ಎನ್. ಪುಷ್ಪಾವತಿ, ತುಮ್ಕೋಸ್ ಸದಸ್ಯ ಟಿ.ವಿ. ರಾಜು ಪಟೇಲ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಎನ್. ಮರುಳಪ್ಪ, ಸದಸ್ಯರಾದ ಜಯ್ಯಮ್ಮ, ಜಗನ್ನಾಥ್, ಅಂಜನಪ್ಪ, ಕೆ.ಎಸ್. ಮಂಜುನಾಥ್, ಮೀನಾಕ್ಷಮ್ಮ, ಪ್ರಕಾಶ್, ವೀರಭದ್ರಪ್ಪ, ಟಿ. ನಾಗರಾಜ್, ಶ್ರೀಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.