ADVERTISEMENT

‘ಎಲ್ಲಾ ಧರ್ಮಕ್ಕಿಂತ ಸೇವಾಧರ್ಮ ದೊಡ್ಡದು’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 7:34 IST
Last Updated 16 ಏಪ್ರಿಲ್ 2017, 7:34 IST

ದಾವಣಗೆರೆ: ಎಲ್ಲಾ ಧರ್ಮಕ್ಕಿಂತ ದೊಡ್ಡದು ಸೇವಾಧರ್ಮ. ನಮ್ಮತನವನ್ನು ಮರೆತು ಸಮಾಜಸೇವೆ ಮಾಡಬೇಕು ಎಂದು ಮಾಜಿ ಸಚಿವೆ, ಹಿರಿಯ ಸಮಾಜ ಸೇವಕಿ ನಾಗಮ್ಮ ಕೇಶವಮೂರ್ತಿ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ಜೆ.ಎಚ್.ಪಟೇಲ್ ಕಾಲೇಜು ಶನಿವಾರ ಹಮ್ಮಿಕೊಂಡಿದ್ದ ‘ಸಮಾಜವಾದಿ ಜೆ.ಎಚ್.ಪಟೇಲ್’ ಪ್ರಶಸ್ತಿ ಪ್ರದಾನ ಹಾಗೂ ‘ಯಂಗ್ ಸ್ಪ್ರಿಂಗ್ಸ್‌್–2017’ ಕಾರ್ಯಕ್ರಮದಲ್ಲಿ ‘ಸಮಾಜವಾದಿ ಜೆ.ಎಚ್.ಪಟೇಲ್‌’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡಬೇಕು. ಪ್ರೇಮಪೂರಿತ ಸೇವೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಅಸಹಾಯಕರಿಗೆ, ಅನಕ್ಷರಸ್ತರಿಗೆ ಹಾಗೂ ತಳಮಟ್ಟದ ಜನರ ಶ್ರೇಯೋಭಿವೃದ್ಧಿಗೆ ಎಲ್ಲರೂ ಬದ್ಧರಾಗಬೇಕು. ಅಬಲೆಯರ ಸಬಲೀಕರಣಕ್ಕೆ ಸೂಕ್ತ ವೇದಿಕೆಗಳನ್ನು ನಿರ್ಮಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸ ಆಗಬೇಕು ಎಂದು ಅವರು ಸಲಹೆ ನೀಡಿದರು.

‘ನಾನು ಸೇವಾಕ್ಷೇತ್ರಕ್ಕೆ ಬಂದಿದ್ದು ತಂದೆಯವರ ಪ್ರಭಾವ ಹಾಗೂ ಯಶೋಧಮ್ಮ ದಾಸಪ್ಪನವರ ಪ್ರೇರಣೆಯಿಂದ. ಯಶೋಧಮ್ಮ ದಾಸಪ್ಪನವರ ಜೊತೆ ಇದ್ದುಕೊಂಡು ಸೇವಾ ಮನೋಭಾವ ಬೆಳೆಸಿಕೊಂಡೆ. ಅವರ ಒಡನಾಟ ನನಗೆ ಅತೀವ ಆಸಕ್ತಿ ತಂದುಕೊಟ್ಟಿತು. ರಾಜಕೀಯ ಹಾಗೂ ಸಮಾಜ ಸೇವೆಯಲ್ಲಿ ಅವರು ನನಗೆ ಆದರ್ಶ ವ್ಯಕ್ತಿಯಾಗಿದ್ದರು’ ಎಂದು ತಿಳಿಸಿದರು.

ADVERTISEMENT

ಯಶೋಧಮ್ಮ ಅವರು ಸ್ಥಾಪಿಸಿದ ಕಸ್ತೂರಬಾ ಟ್ರಸ್ಟ್‌, ಭಾರತಿ ಗ್ರಾಮೀಣ ಸಂಸ್ಥೆಗಳಲ್ಲಿ ಸೇವೆ ಮಾಡುವ ಮೂಲಕ ಮಹಿಳೆಯರ ಕಷ್ಟ ಮತ್ತು ಸಮಸ್ಯೆಗಳನ್ನು ಆರ್ಥೈಸಿಕೊಳ್ಳಲಾಯಿತು. ನಂತರ ಮಹಿಳಾ ಟ್ರಸ್ಟ್‌ಗಳನ್ನು ಸ್ಥಾಪಿಸಿ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಯಿತು. ಲೋಕಸುಂದರ ರಾಮನ್‌ ಸೇರಿದಂತೆ ಹತ್ತಾರು
ಜನರ ಪರಿಚಯದಿಂದ ವಿವಿಧಸಂಘ–ಸಂಸ್ಥೆಗಳ ಜಿಲ್ಲಾಶಾಖೆಗಳನ್ನು ಪ್ರಾರಂಭಿಸಿ ಸಮಾಜ ಸೇವೆಗೆ ಆದ್ಯತೆ ನೀಡಲಾಯಿತುಎಂದು ಅವರು ತಿಳಿಸಿದರು.

ಸಮಾಜಸೇವೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ವೈಯಕ್ತಿಕ ಅಭಿವೃದ್ಧಿಗೆ ಸೀಮಿತಗೊಳ್ಳದೆ ಬಡವರ, ದೀನ ದಲಿತರ ಹಾಗೂ ಅನಾಥರ ಬೆಳವಣಿಗೆಗೆ ಪೂರಕ ಕೆಲಸ ಮಾಡಬೇಕು. ಈಗಾಗಲೇ ವೃದ್ಧರಿಗೆ ಆನಂದಧಾಮ ಹಾಗೂ ಬಡ ಅನಾಥ ಮಕ್ಕಳಿಗೆ ಪ್ರೇಮಾಲಯ ವಸತಿ ನಿಲಯಗಳನ್ನು ಸ್ಥಾಪಿಸಲಾಗಿದ್ದು, ಮನೆಯಲ್ಲಿ ಒಂಟಿಯಾಗಿರುವ ವೃದ್ಧರಿಗೆ ಆರೈಕೆ ಕೇಂದ್ರ ಹಾಗೂ ಬಡ ಮಕ್ಕಳಿಗೆ ಆಟದ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ನಾಗಮ್ಮ ಕೇಶವಮೂರ್ತಿ ತಿಳಿಸಿದರು.

‘ಯಂಗ್‌ ಸ್ಪ್ರಿಂಗ್ಸ್‌–2017’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉರಗ ರಕ್ಷಕ ಸಂಗಮೇಶ ವೈ ಚಕ್ರಸಾಲಿ, ‘ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಪ್ರಾಣಿಗಳನ್ನು ಕೊಲ್ಲುವ ಕೃತ್ಯವನ್ನು ಯಾರೂ ಮಾಡಬಾರದು. ಅವುಗಳ ಜೀವ ಉಳಿಸುವ ಕೆಲಸ ಮಾಡೋಣ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜೆ.ಎಚ್.ಪಟೇಲ್ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ವಿಶ್ವನಾಥ್, ಪ್ರಾಂಶುಪಾಲ ರಾದ ಪ್ರತಿಭಾ ಪಿ.ದೊಗ್ಗಳ್ಳಿ ಅಭಿನಂದನಾ ನುಡಿಗಳನ್ನಾಡಿದರು.

ಹಿರಿಯ ವೈದ್ಯ, ರಂಗ ಕಲಾವಿದ ಡಾ.ಕೆ.ಎಚ್.ಪಂಚಾಕ್ಷರಪ್ಪ ಅಧ್ಯಕ್ಷತೆ ವಹಿಸಿದ್ದರು.ಕಾಲೇಜು ನಿರ್ದೇಶಕರಾದ ಎಲ್‌. ರೆಡ್ಡಿನಾಯ್ಕ್‌, ಎಂ.ಗುರುಸಿದ್ದಸ್ವಾಮಿ, ನಿವೃತ್ತ ಶಿಕ್ಷಣ ಸಂಯೋಜಕ ಎ.ಎಚ್.ವಿವೇಕಾನಂದಸ್ವಾಮಿ, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ದೇವರಮನೆ ಉಪಸ್ಥಿತರಿದ್ದರು.ಜೆ.ಎಚ್.ಪಟೇಲ್ ಕಾಲೇಜು ಕಾರ್ಯದರ್ಶಿ ದೊಗ್ಗಳ್ಳಿಗೌಡ್ರು ಪುಟ್ಟರಾಜು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.