ADVERTISEMENT

ಕಚ್ಚಾ ರಸ್ತೆಯನ್ನೇ ಸ್ಮಾರ್ಟ್‌ ಮಾಡಿ

ಪಾಲಿಕೆ ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 5:05 IST
Last Updated 16 ಫೆಬ್ರುವರಿ 2017, 5:05 IST
ದಾವಣಗೆರೆ: ‘ಸಿಮೆಂಟ್‌ ರಸ್ತೆ ಒಡೆದು ಸ್ಮಾರ್ಟ್ ರಸ್ತೆ ಮಾಡುವ ಬದಲು ಕಚ್ಚಾ ರಸ್ತೆಯನ್ನೇ ಸ್ಮಾರ್ಟ್‌ ಮಾಡಿ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಪಾಲಿಕೆ ಅಧಿಕಾರಿಗಳು ಹಾಗೂ ಐಡೆಕ್ ಸಂಸ್ಥೆ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
 
ಸಂಸದರ ಕಚೇರಿಯಲ್ಲಿ ಬುಧವಾರ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಕುರಿತು ಅವರು ಚರ್ಚೆ ನಡೆಸಿದರು.
 
ಹಳೆಯ ದಾವಣಗೆರೆಯ ಹಲವು ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ರಸ್ತೆಗಳು ಇನ್ನೂ ಸುವ್ಯವಸ್ಥೆಯಲ್ಲಿವೆ. ಅವುಗಳನ್ನೇ ಕಿತ್ತು ಸ್ಮಾರ್ಟ್ ರಸ್ತೆ ಮಾಡುವ ಬದಲು ನಗರದ ಇನ್ನೂ ಕೆಲವು ಕಡೆ ಕಚ್ಚಾ ರಸ್ತೆಗಳಿವೆ. ಅವುಗಳನ್ನೇ ಸ್ಮಾರ್ಟ್‌ ರಸ್ತೆ ಮಾಡಿ ಎಂದು ಅವರು ಸಲಹೆ ನೀಡಿದರು.
 
ಈ ಮೊದಲು ಪಾಲಿಕೆ ಉಪ   ಆಯುಕ್ತ ರವೀಂದ್ರ ಮಾತನಾಡಿ, ನಗರದ ಮಂಡಿಪೇಟೆ, ಎಂ.ಜಿ.ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ, ವಿಜಯಲಕ್ಷ್ಮೀ ರಸ್ತೆ, ಕೆ.ಆರ್.ರಸ್ತೆ, ಹರ್ಡೇಕರ್ ಮಂಜಪ್ಪ ರಸ್ತೆ, ಮಹಾವೀರ ರಸ್ತೆ, ಕೆ.ಆರ್.ಮಾರುಕಟ್ಟೆ ರಸ್ತೆ, ನರಸರಾಜ ರಸ್ತೆ ಸೇರಿದಂತೆ  ಪ್ರಮುಖ 10 ರಸ್ತೆಗಳಲ್ಲಿ ಒಳಚರಂಡಿ, ಕುಡಿಯುವ ನೀರು ಸರಬರಾಜು, ಅಂಡರ್‌ಗ್ರೌಂಡ್ ಕೇಬಲ್ ಒಳಗೊಂಡ ಸ್ಮಾರ್ಟ್‌ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಐಡೆಕ್ ಸಂಸ್ಥೆ ತಯಾರಿಸಿರುವ ನಕ್ಷೆಯನ್ನು ಸಂಸದರಿಗೆ ತೋರಿಸಿದರು.
 
ಐಡೆಕ್ ಸಂಸ್ಥೆ ಪ್ರತಿನಿಧಿಗಳು ಮಾತ ನಾಡಿ, ‘ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಸೋಲಾರ್ ವಿದ್ಯುತ್‌ ಉತ್ಪಾದ ನೆಗೆ ಯೋಜನೆ ರೂಪಿಸಲಾಗಿದೆ. ಈಗಾಗಲೇ 50 ಸರ್ಕಾರಿ ಕಟ್ಟಡಗಳ ಸಮೀಕ್ಷೆ ನಡೆಸಿದ್ದು, ಇವುಗಳಿಂದ ಪ್ರತಿ ದಿನ 0.5 ಮೆಗಾವಾಟ್‌ ಉತ್ಪಾದಿಸಲು ಸಾಧ್ಯವಾಗಲಿದೆ’ ಎಂದು  ತಿಳಿಸಿದರು.
 
ಪಿ.ಬಿ.ರಸ್ತೆಯ ಹಳೆಯ ಬಸ್‌ನಿಲ್ದಾಣ ಹಾಗೂ ಕೆ.ಆರ್‌.ಮಾರುಕಟ್ಟೆಯನ್ನು ತೆರವುಗೊಳಿಸಿ ಹೈಟೆಕ್‌ ಬಸ್‌ನಿಲ್ದಾಣ ಹಾಗೂ ಮಾರುಕಟ್ಟೆಯನ್ನು ನಿರ್ಮಿಸಲಾಗುವುದು. ಮಂಡಕ್ಕಿ ಭಟ್ಟಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲು, ಹಳೆಯ ಹೆರಿಗೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಯೋಜನೆ ರೂಪಿ ಸಲಾಗಿದೆ ಎಂದು ಮಾಹಿತಿ ನೀಡಿದರು.
 
ಈ ಯೋಜನೆ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ ಸಂಸದರು, ‘ನನ್ನನ್ನು ಯಾವುದೇ ಸಭೆಗೆ ತಾವು ಕರೆದಿಲ್ಲ. ಸ್ಮಾರ್ಟ್‌ ಕುರಿತಂತೆ ಎಲ್ಲಾ ತೀರ್ಮಾನಗಳನ್ನು ಸಚಿವರು, ಶಾಸಕರು ಇಬ್ಬರೇ ಕೈಗೊಳ್ಳುವುದಾದರೆ ನಮ್ಮ ಅಗತ್ಯ ಏನಿದೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಉಪ ಆಯುಕ್ತರು ಹಾಗೂ ಐಡೆಕ್ ಸಂಸ್ಥೆ ಪ್ರತಿನಿಧಿಗಳು ನಿರುತ್ತರರಾದರು.
 
‘ನಗರದಲ್ಲಿ ಹಂದಿ ನಿರ್ಮೂಲನೆಗೆ ಈ ಮೊದಲೇ ಆದೇಶಿಸಿದ್ದೆ, ಆಜಾದ್‌ ನಗರದಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಸೂಚಿಸಿದ್ದೆ. ಆದರೆ, ಯಾವ ಕೆಲಸಗಳೂ ನಡೆಯುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಐಡೆಕ್‌ ಸಂಸ್ಥೆಯ ಪ್ರತಿನಿಧಿಗಳಾದ ಜಯನ್, ಮೃತ್ಯುಂಜಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.