ADVERTISEMENT

ಕನಿಷ್ಠ ಕೂಲಿಗಾಗಿ ಪ್ರತಿಭಟನೆ

ಕಾರ್ಮಿಕರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿಗದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 4:50 IST
Last Updated 11 ಮಾರ್ಚ್ 2017, 4:50 IST
ಕನಿಷ್ಠ ಕೂಲಿಗಾಗಿ ಪ್ರತಿಭಟನೆ
ಕನಿಷ್ಠ ಕೂಲಿಗಾಗಿ ಪ್ರತಿಭಟನೆ   
ದಾವಣಗೆರೆ: ಸರ್ಕಾರವೇ ನಿಗದಿ ಮಾಡಿರುವ ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿ ಆಶಾ, ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಸಿಪಿಐ ಮತ್ತು ಎಐಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
 
ಬಿಸಿಯೂಟ ತಯಾರಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕೃಷಿ ಕಾರ್ಮಿಕರು, ಕಟ್ಟಡ ಕೆಲಸಗಾರರು ಸೇರಿದಂತೆ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಗದಿ ಮಾಡಿರುವ ಕನಿಷ್ಠ ಕೂಲಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
 
ಕಾರ್ಮಿಕರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಕೃಷಿ ಆದಾಯವನ್ನೇ ಅವಲಂಬಿಸಿರುವ 60 ವರ್ಷ ಮೀರಿದ ರೈತ ಕಾರ್ಮಿಕರಿಗೆ ತಿಂಗಳಿಗೆ ₹ 5 ಸಾವಿರ ಪಿಂಚಣಿ ನೀಡಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
 
ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡುವ ಮಹಿಷಿ ವರದಿಗೆ ಪರಿಷ್ಕೃತ ಶಿಫಾರಸು ಮಾಡಿರುವ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ಸಮಿತಿ ವರದಿ ಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.
 
ರಾಜ್ಯದ 176 ತಾಲ್ಲೂಕುಗಳ ಪೈಕಿ 160 ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಮುಂಗಾರು ಮಳೆ ವಿಫಲವಾಗಿದ್ದರಿಂದ ₹ 17,500 ಕೋಟಿ ಹಾಗೂ ಹಿಂಗಾರು ಕೈಕೊಟ್ಟಿದ್ದರಿಂದ ₹ 7,160 ಕೋಟಿ ಸೇರಿ ಅಂದಾಜು ₹25 ಸಾವಿರ ಕೋಟಿಯಷ್ಟು ರೈತರಿಗೆ ನಷ್ಟವಾಗಿದೆ. 45 ಲಕ್ಷ ಟನ್‌ನಷ್ಟು ಆಹಾರ ಧಾನ್ಯ ಉತ್ಪಾದನೆ ಕುಸಿದಿದೆ.
 
 ರೈತರ ಎಲ್ಲ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಬೆಳೆನಷ್ಟ ಪರಿಹಾರವಾಗಿ ಪ್ರತಿ ಎಕರೆಗೆ ₹ 25 ಸಾವಿರ ನೀಡಬೇಕು ಎಂದು ಆಗ್ರಹಿಸಿದರು.
 
ಬರಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಕುಡಿಯುವ ನೀರು ಮತ್ತು ಜಾನುವಾರಿಗೆ ಮೇವಿನ ವ್ಯವಸ್ಥೆ ಮಾಡ ಬೇಕು. ಬರಪರಿಹಾರ ಕಾಮಗಾರಿಗಳ ಯೋಜನೆ ರೂಪಿಸಲು ಹೋಬಳಿ ಮಟ್ಟದಲ್ಲಿ ಉಸ್ತುವಾರಿ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
 
ಜಯದೇವ ವೃತ್ತದಿಂದ ಉಪ ವಿಭಾ ಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಪವಿಭಾ ಗಾಧಿಕಾರಿಗೆ ಮನವಿ ಸಲ್ಲಿಸಿದರು.
 
ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಕೆ.ರಾಮಚಂದ್ರಪ್ಪ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಆನಂದರಾಜ್, ಆವರಗೆರೆ ರಂಗನಾಥ, ಬೆಳಲಗೆರೆ ರುದ್ರಮ್ಮ, ಎಂ.ಬಿ.ಶಾರದಮ್ಮ, ಟಿ.ಎಸ್.ನಾಗರಾಜ, ಐರಣಿ ಚಂದ್ರು, ವಿ.ಲಕ್ಷ್ಮಣ, ಎನ್‌.ಟಿ. ಬಸವರಾಜ, ಎಚ್.ಆರ್.ಉಮಾಪತಿ, ಡಿ.ಎಂ.ರೇಣುಕಾ, ಗುಡಿಹಳ್ಳಿ ಹಾಲೇಶ, ಪರಶುರಾಮ  ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 
 
* ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡುವ ಮಹಿಷಿ ವರದಿಗೆ ಪರಿಷ್ಕೃತ ಶಿಫಾರಸು ಮಾಡಿರುವ ಎಸ್‌.ಜಿ.ಸಿದ್ದರಾಮಯ್ಯ ಸಮಿತಿ ವರದಿಯನ್ನು ಅನುಷ್ಠಾನಕ್ಕೆ ತರಬೇಕು
ಪ್ರತಿಭಟನಾಕಾರರು
 
ಕನಿಷ್ಠ ಠೇವಣಿ ನಿಗದಿಗೆ ವಿರೋಧ
ದಾವಣಗೆರೆ: ನಗರ ಪ್ರದೇಶ ವ್ಯಾಪ್ತಿಯಲ್ಲಿ ಕನಿಷ್ಠ ₹ 3 ಸಾವಿರ ಮತ್ತು ಮಹಾನಗರ ವ್ಯಾಪ್ತಿಯ ಬ್ಯಾಂಕ್‌ ಖಾತೆಗಳಲ್ಲಿ ಕನಿಷ್ಠ ₹ 5 ಸಾವಿರ ಠೇವಣಿ ಇಡುವುದನ್ನು ಕಡ್ಡಾಯಗೊಳಿಸಿರುವ ಕ್ರಮ ವಿರೋಧಿಸಿ ಸೆಂಟರ್‌ ಫಾರ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿಐಟಿಯು), ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಕಾರ್ಯಕರ್ತರು ಶುಕ್ರವಾರ ಅಕ್ಕಮಹಾದೇವಿ ರಸ್ತೆಯ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ಶಾಖೆ ಎದುರು ಪ್ರತಿಭಟನೆ ನಡೆಸಿದರು.

ಬ್ಯಾಂಕ್‌ ವಹಿವಾಟಿನ ಮೇಲೆ ಮಿತಿ ಹೇರಿರುವುದು, ಮಿತಿ ದಾಟಿದಲ್ಲಿ ದುಬಾರಿ ದಂಡ ವಿಧಿಸುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ರೈತರು, ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಇಂತಹ ಕೆಟ್ಟ ನೀತಿಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಉದ್ಯಮಿಗಳಿಂದ ₹ 6.5 ಲಕ್ಷ ಕೋಟಿ ಸಾಲವನ್ನು ವಸೂಲಿ ಮಾಡದ ಬ್ಯಾಂಕ್‌ಗಳು, ಜನಸಾಮಾನ್ಯರಿಗೆ ಹೊರೆಯಾದ ನೀತಿಗಳನ್ನು ಜಾರಿಗೆ ತರುತ್ತಿವೆ. ಕೂಡಲೇ ಇಂತಹ ಅವೈಜ್ಞಾನಿಕ ನಿಯಮಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸಿಐಟಿಯು ಗೌರವ ಅಧ್ಯಕ್ಷ ಕೆ.ಎಲ್‌.ಭಟ್‌, ಅಧ್ಯಕ್ಷ ಕೆ.ಶ್ರೀನಿವಾಸ ಮೂರ್ತಿ, ಬಿಎಸ್‌ಎನ್‌ಎಲ್‌ ಕಾರ್ಮಿಕ ಸಂಘದ ಮುಖಂಡ ಈರಣ್ಣ, ಔಷಧ ಪ್ರತಿನಿಧಿಗಳ ಸಂಘಟನೆ ಮುಖ್ಯಸ್ಥ ಆನಂದರಾವ್, ಬ್ಯಾಂಕ್‌ ಯೂನಿಯನ್‌ ಮುಖಂಡ ಕುಲಕರ್ಣಿ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಮುಖ್ಯಸ್ಥೆ ರೇಣುಕಮ್ಮ, ಕಟ್ಟಡ ಕಾರ್ಮಿಕರ ಸಂಘಟನೆ ಅಧ್ಯಕ್ಷ ತಿಮ್ಮಣ್ಣ, ಲೋಕೇಶ್‌, ರೈತ ಮುಖಂಡ ಇ.ಶ್ರೀನಿವಾಸ್‌ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.