ADVERTISEMENT

ಕಾಂಗ್ರೆಸ್‌ ದಲಿತರ ಉದ್ಧಾರ ಮಾಡಿಲ್ಲ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:18 IST
Last Updated 20 ಏಪ್ರಿಲ್ 2017, 5:18 IST

ಹರಿಹರ: ‘ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು 70 ವರ್ಷಗಳ ಕಾಲ ಮತ ಬ್ಯಾಂಕ್‌ ರೀತಿ ತಮ್ಮ ಸ್ವಾರ್ಥಕ್ಕಾಗಿ ಬಳಸಿದ ಕಾಂಗ್ರೆಸ್‌, ಅವರ ಉದ್ಧಾರ ಕ್ಕಾಗಿ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಆರೋಪಿಸಿದರು. ನಗರದ ಪರಿಶಿಷ್ಟರ ಕಾಲೊನಿಯಲ್ಲಿ ಬಿಜೆಪಿ ನಗರ ಘಟಕದಿಂದ ಬುಧವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜಯಂತ್ಯುತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶೋಷಿತ ವರ್ಗಗಳ ಅಭಿವೃದ್ಧಿ ಯನ್ನು ತಮ್ಮ ಜೀವನದ ಗುರಿಯಾಗಿಸಿ ಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಲೊಕಸಭೆ ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿದ್ದು ಹಾಗೂ ಅವರ ಅಂತಿಮ ಸಂಸ್ಕಾರಕ್ಕೆ ದೆಹಲಿಯಲ್ಲಿ ಅವಕಾಶ ನೀಡದಿರುವುದು ಕಾಂಗ್ರೆಸ್ ಪಕ್ಷದ ದಲಿತವಿರೋಧಿ ನೀತಿಗೆ ಸಾಕ್ಷಿಯಾಗಿದೆ’ ಎಂದರು.
‘ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಸಂಸತ್ ಪ್ರವೇಶಿಸಿದ ಮೊದಲ ದಿನದ ಭಾಷಣದಲ್ಲಿ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ಭರವಸೆ ನೀಡಿದರು. ಶೋಷಿತ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮುದ್ರಾ, ಅಟಲ್ ಬಿಹಾರಿ ಪಿಂಚಣಿ, ಜನಧನ, ಪ್ರಧಾನಮಂತ್ರಿ ಬಿಮಾ ಹಾಗೂ ಉಜಾಲಾ ಯೋಜನೆಗಳನ್ನು ಜಾರಿಗೊಳಿಸಿದರು’ ಎಂದು ಹೇಳಿದರು.

‘ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದರು. ಪ್ರಸ್ತುತ ಕೇಂದ್ರ ಸರ್ಕಾರ ಅಂಬೇಡ್ಕರ್‌ ಅವರ ಜನ್ಮ ಸ್ಥಳ ಮಾವೋ ಗ್ರಾಮದ ಮನೆ, ಅಂತಿಮ ಸಂಸ್ಕಾರ ನಡೆದ ದಾದರ್ ಪ್ರದೇಶದಲ್ಲಿ ಹಾಗೂ ವಿದ್ಯಾಭ್ಯಾಸ ನಡೆಸಿದ ಲಂಡನ್‌ನ ಮನೆಯನ್ನು ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯ ವನ್ನಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ₹ 440ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅಂಬೇಡ್ಕರ್ ಅವರ 125ನೇ ಜಯಂತಿಯ ಸ್ಮರಾಣಾರ್ಥವಾಗಿ ಅವರ ಭಾವಚಿತ್ರವಿರುವ ನಾಣ್ಯ ಹಾಗೂ ಅಂಚೆಚೀಟಿ ಬಿಡುಗಡೆ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ’ ಎಂದರು.

ADVERTISEMENT

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ‘ಎಲ್ಲಾ ಸಮಾಜದ ಅಭಿವೃದ್ಧಿಯಿಂದ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬುದು ಅಂಬೇಡ್ಕರ್‌ ಅವರ ಸಿದ್ಧಾಂತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಸಂವಿಧಾನದಲ್ಲಿ ತುಳಿತಕ್ಕೊಳ ಗಾದ ಸಮಾಜಗಳಿಗೆ ಮೀಸಲಾತಿ ಸೌಲಭ್ಯ ಒದಗಿಸಿದ್ದರು. ಆದರೆ, ಅನಕ್ಷರತೆಯಿಂದಾಗಿ ಶೋಷಿತ ಸಮಾಜ ಗಳು ಮೀಸಲಾತಿಯ ಸಂಪೂರ್ಣ ಲಾಭ ಪಡೆಯುವಲ್ಲಿ ವಿಫಲವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜು ರೋಖಡೆ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಟಿ. ಮುಕುಂದ, ಮಾಲತೇಶ ಭಂಡಾರೆ, ಐರಣಿ ನಾಗರಾಜ್, ಎನ್.ಎಚ್. ಸತ್ಯನಾರಾಯಣ, ರಜನಿ, ಚಂದ್ರಶೇಖರ್ ಪೂಜಾರ್, ಗರಡಿಮನಿ ಬಸಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.