ADVERTISEMENT

‘ಕಾಂಗ್ರೆಸ್, ಬಿಜೆಪಿ ರೈತರ ಸಾಲ ಮನ್ನಾ ಮಾಡಲಿ’

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:00 IST
Last Updated 16 ಮೇ 2017, 5:00 IST

ಹೊನ್ನಾಳಿ: ರಾಜ್ಯದ ಕಾಂಗ್ರೆಸ್ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ತಾಲ್ಲೂಕು ಅಖಂಡ ಕರ್ನಾಟಕ ರೈತಸಂಘದ ಅಧ್ಯಕ್ಷ ನಾಗರಾಜಪ್ಪ ದೊಡ್ಡೆರೆಹಳ್ಳಿ ಆಗ್ರಹಿಸಿದರು.

ಸೋಮವಾರ ರೈತ ಹುತಾತ್ಮ ದಿನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ಎಚ್.ಎಸ್.ರುದ್ರಪ್ಪನವರ ಮಂಟಪದ ಗುದ್ದಲಿ ಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಲಮನ್ನಾ ಮಾಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಎರಡೂ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರಧಾನ ಕಾರ್ಯದರ್ಶಿ ಆರುಂಡಿ ನಾಗರಾಜ್ ಮಾತನಾಡಿ, ‘ಕಸಬಾ ಹಾಗೂ ಬೆಳಗುತ್ತಿ ಹೋಬಳಿ ವ್ಯಾಪ್ತಿಯ ಸುಮಾರು 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ.

ADVERTISEMENT

ಗಾಜನೂರು ಡ್ಯಾಂ ನಿಂದ ಬೆಳಗುತ್ತಿ ಗ್ರಾಮದ ಕೆರೆಯವರೆಗೂ ಪೈಪ್‌ಲೈನ್ ಅಳವಡಿಸಿ ನೀರು ತುಂಬಿಸುವ ಕುರಿತು ಮುಖ್ಯಮಂತ್ರಿ ಜತೆ ಮಾತನಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ,  ‘ರಾಜ್ಯದ ಸಹಕಾರಿ ಕ್ಷೇತ್ರದ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುತ್ತೇವೆ.  ಅದೇ ರೀತಿ ಕೇಂದ್ರದ ಮೇಲೆ ಬಿಜೆಪಿಯವರು ಒತ್ತಡ ಹಾಕಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿಸಬೇಕು ಎಂದು ರೈತಸಂಘವನ್ನು ಒತ್ತಾಯಿಸಿದರು.

ತಾಲ್ಲೂಕಿನ ಬಹುತೇಕ ಕೆರೆಗಳ ಹೂಳು ತೆಗೆಸುವ ಪ್ರಯತ್ನ ಸಾಗಿದೆ. ಸ್ವತಃ ರೈತರೇ ಹೂಳು ತೆಗೆಯಲು ಮುಂದಾಗಿ ದ್ದಾರೆ. ಕೆರೆ ಒತ್ತುವರಿ ಕೈಬಿಡುವಂತೆ ರೈತರಿಗೆ ಮನವಿ ಮಾಡಲಾಗುತ್ತಿದೆ ಎಂದರು.

ಸಮಾರಂಭದ ಸಾನ್ನಿಧ್ಯವನ್ನು ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ರಾಜ್ಯ ಸಂಘದ ಕೋಶಾಧ್ಯಕ್ಷ ಶ್ಯಾಮಸುಂದರ ಕೀರ್ತಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಹನುಮಂತಪ್ಪ, ತಾಲ್ಲೂಕು ಉಪಾಧ್ಯಕ್ಷ ಕೆ.ಸಿ.ಬಸಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್, ಮುಖಂಡರಾದ ಧನರಾಜಪ್ಪ, ಬೆಳಗುತ್ತಿ ಉಮೇಶ್, ಸುಂಕದಕಟ್ಟೆ ಕರಿಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.