ADVERTISEMENT

ಕಾರ್ಯಕರ್ತರು ಎಡವದಿರಲಿ, ಪಕ್ಷ ಸೋಲದಿರಲಿ

ಬಿಜೆಪಿ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 4:37 IST
Last Updated 11 ಮಾರ್ಚ್ 2017, 4:37 IST
ದಾವಣಗೆರೆ: ರಾಜ್ಯದಲ್ಲಿ ಆರು ತಿಂಗಳಲ್ಲಿ ಚುನಾವಣೆ ಬರಲಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಉತ್ತಮ ಕಾರ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಕಾರ್ಯಕರ್ತರು ಎಡವಬಾರದು. ಪಕ್ಷವನ್ನು ಗೆಲ್ಲಿಸಲು ಪ್ರಯತ್ನಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಕರೆ ನೀಡಿದರು.
 
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.
 
ವಾಜಪೇಯಿ ಆಳ್ವಿಕೆಯಲ್ಲಿ ಉತ್ತಮ ಕೆಲಸಗಳು ನಡೆದರೂ ಬಿಜೆಪಿ ಸೋಲನ್ನು ಅನುಭವಿಸಬೇಕಾಯಿತು. ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ವಿಫಲವಾಗಿದ್ದೇ ಸೋಲಿಗೆ ಕಾರಣ ಎಂದು ಎಲ್‌.ಕೆ.ಅಡ್ವಾಣಿ ವಿಶ್ಲೇಷಿಸಿದ್ದರು. ಈಗ ಕೇಂದ್ರದಲ್ಲಿ ಮೋದಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಈ ಸಾಧನೆಗಳನ್ನು ಜನತೆಗೆ ಮುಟ್ಟಿಸುವಲ್ಲಿ ಕಾರ್ಯಕರ್ತರು ಹಿಂದೆ ಬೀಳಬಾರದು ಎಂದು ತಿಳಿಸಿದರು.
 
ನೋಟ್‌ ನಿಷೇಧದಿಂದ ಜನರಿಗೆ ತೊಂದರೆಯಾಗಿದೆ. ಹಗರಣವೇ ನಡೆದಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದವು. ಆದರೆ, ಜನರಿಗೆ ತೊಂದರೆಯಾಗಿಲ್ಲ. ಇದಕ್ಕೆ ಪಂಚರಾಜ್ಯಗಳಲ್ಲಿ ಬಿಜೆಪಿ ಮುಂದಿದೆ ಎಂಬ ಚುನಾವಣೋತ್ತರ ಸಮೀಕ್ಷೆಯ ವರದಿಯೇ ಸಾಕ್ಷಿ ಎಂದರು.
 
ಪಂಚರಾಜ್ಯಗಳ ಚುನಾವಣೆ ಫಲಿ ತಾಂಶದ ನಂತರ ಮೋದಿ, ಅಮಿತ್‌ ಷಾ ಕರ್ನಾಟಕದಲ್ಲಿ ಪ್ರಭಾವ ಬೀರಲಿದ್ದಾರೆ ಎಂದು ಎಚ್‌.ಡಿ.ದೇವೇಗೌಡ ಹೇಳಿ ದ್ದಾರೆ. ಅವರ ಭಾವನೆಯಂತೆ ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. ಅದನ್ನು ಇನ್ನಷ್ಟು ಬಲಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.
 
ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್ ಮಾತನಾಡಿ, ‘ಆರು ತಿಂಗಳಿನಲ್ಲಿ ಚುನಾವಣೆ ಬರಲಿದೆ ಎಂದು ನಮ್ಮ ನಾಯಕರು ಹೇಳಿದ್ದಾರೆ. ಹೀಗಾಗಿ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಯುವಕರ ಸಂಘಟನೆ ಮಾಡಬೇಕು. ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸಬೇಕು’ ಎಂದರು.
 
ಪ್ರತಿ ಬೂತ್‌ ಮಟ್ಟದಲ್ಲಿ ಇಬ್ಬರು ಕಾರ್ಯಕರ್ತರನ್ನು ಗುರುತಿಸಿ, ಅವರನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಸಂಘಟನೆಗಾಗಿ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕುಸ್ತಿ ಪಂದ್ಯಾವಳಿಗಳನ್ನು ಬೂತ್‌ ಮಟ್ಟದಲ್ಲಿ ಆಯೋಜಿಸಬೇಕು ಎಂದು ಅವರು ಹೇಳಿದರು.
 
ಬರದಿಂದ ನೀರು, ಮೇವಿಗೆ ಸಮಸ್ಯೆಯಾಗಿದೆ. ಯುವ ಮೋರ್ಚಾ ಕಾರ್ಯಕರ್ತರು ಮೇವು ಸಂಗ್ರಹಿಸಿ, ಗೋಶಾಲೆಗಳಿಗೆ ನೀಡಬೇಕು. ದಾನಿಗಳಿಂದ ನೀರು ಪಡೆದು ಸಮಸ್ಯೆ ಇರುವ ಕಡೆ ಸರಬರಾಜು ಮಾಡಬೇಕು. ಇದಕ್ಕೆ ನಾಯಕರ ಮಾರ್ಗದರ್ಶನ, ನೆರವು ಪಡೆಯಬಹುದು ಎಂದರು.
 
ಜಿಲ್ಲೆಯ ಎಂಟು ಕ್ಷೇತ್ರಗಳಲ್ಲೂ ಸಂಘಟನೆಯನ್ನು ಬಲಗೊಳಿಸಿ ಜಿ.ಎಂ. ಸಿದ್ದೇಶ್ವರ ಅವರ ಕೈ ಬಲಪಡಿಸಬೇಕು. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
 
ಚುನಾವಣೆಯಲ್ಲಿ ಗೆದ್ದ ಯುವ ಮೋರ್ಚಾ ಕಾರ್ಯಕರ್ತರಾದ ಹೊನ್ನಾಳಿ ತಾಲ್ಲೂಕು ಪಂಚಾಯ್ತಿ ಸದಸ್ಯ ಶಿವಾನಂದ, ಮಾಯಕೊಂಡ ಗ್ರಾಮ ಪಂಚಾಯ್ತಿ ಸದಸ್ಯರಾದ ನರೇಶ್‌ ಮತ್ತು ಹಾಲೇಶ್‌ ಅವರನ್ನು ಸನ್ಮಾನಿಸಲಾಯಿತು.
 
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್‌ ನಾಯ್ಕ, ಎಚ್‌.ಎನ್‌.ಶಿವಕುಮಾರ್, ಉಪಾಧ್ಯಕ್ಷ ಚಂದ್ರಣ್ಣ, ಅರುಣ್‌ಕುಮಾರ್‌ ಮಾನೆ, ಅಕ್ಕಿ ಪ್ರಭು, ಶಿವಪ್ರಕಾಶ್‌, ಮಾದೇಶ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.