ADVERTISEMENT

ಕುಡಿಯುವ ನೀರು ಪೂರೈಕೆಗೆ ₹ 19 ಕೋಟಿ

ಹೊಸದುರ್ಗ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಗೋವಿಂದಪ್ಪ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 4:53 IST
Last Updated 18 ಫೆಬ್ರುವರಿ 2017, 4:53 IST
ಹೊಸದುರ್ಗ: ‘ಕುಡಿಯುವ ನೀರು ಪೂರೈಕೆಗೆ ₹ 19 ಕೋಟಿ ಅನುದಾನ ವಿದ್ದು, ತಾಲ್ಲೂಕಿನ ಯಾವುದೇ ಹಳ್ಳಿಯಲ್ಲಿ ಸಮಸ್ಯೆ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
 
ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕುಡಿಯುವ ನೀರು ಹಾಗೂ ಮೇವು ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
‘ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಂದಾಯ ಹಾಗೂ ಗ್ರಾಮ ಲೆಕ್ಕಿಗರು ಹಳ್ಳಿ ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಲು ಬದ್ಧತೆಯಿಂದ ಕೆಲಸ ಮಾಡಬೇಕು. ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡದೇ, ಬೆಳಿಗ್ಗೆ 10ರಿಂದ ಸಂಜೆ 5ರವರೆಗೂ ತಮ್ಮ ವ್ಯಾಪ್ತಿಯ ಗ್ರಾಮಗಳ ಜನರ ಸಮಸ್ಯೆ ಆಲಿಸಬೇಕು. ಕಾನೂನು ಕಟ್ಟಳೆ ಬದಿಗಿಟ್ಟು, ಮಾನವೀಯತೆ ಯಿಂದ ಜನರಿಗೆ ಸಕಾಲಕ್ಕೆ ಸೌಲಭ್ಯ ಒದಗಿಸಬೇಕು’ ಎಂದು ಸೂಚಿಸಿದರು.
 
‘ಬರಗಾಲದಿಂದ ಕೆರೆ–ಕಟ್ಟೆಗಳಲ್ಲಿ ನೀರಿಲ್ಲ. ಅಂತರ್ಜಲವೂ ಬರಿದಾಗುತ್ತಿದೆ. ಅಡವಿಯಲ್ಲಿ ಜಾನುವಾರಿಗೆ ನೀರು ಸಿಗುತ್ತಿಲ್ಲ. ನೀರಿನ ಸಮಸ್ಯೆ ಪರಿಹರಿಸುವಂತೆ ಜನರು ಪ್ರತಿಭಟನೆ ನಡೆಸುವ ಮೊದಲು ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ನೀರಿನ ಸಮಸ್ಯೆ ಇರುವ ಗ್ರಾಮದಲ್ಲಿ ಭೂಗರ್ಭ ವಿಜ್ಞಾನಿಗಳಿಂದ ನೀರಿನ ಮೂಲ ಪತ್ತೆಹಚ್ಚಿ ಕೊಳವೆಬಾವಿ ಕೊರೆಸಬೇಕು’ ಎಂದು ಅವರು ಸಲಹೆ ನೀಡಿದರು.
 
‘ಕಾಮಗಾರಿಗಳು ಮಾರ್ಚ್‌ ಒಳಗೆ ಪೂರ್ಣಗೊಳ್ಳಬೇಕು. ಅನುದಾನ ಸದ್ಬಳಕೆ ಆಗಬೇಕು. ಜನ ಹಾಗೂ ಜಾನುವಾರು ಹಿತ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಅಶಿಸ್ತು ತೋರುವ ಪಿಡಿಒ, ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ತಹಶೀಲ್ದಾರ್‌ ಹಾಗೂ 
ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕರು ಸೂಚಿಸಿದರು. 
 
‘ಬತ್ತಿರುವ ಕೊಳವೆಬಾವಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಹಳೆಯ ಕೊಳವೆಬಾವಿ ಸಾಮಗ್ರಿಯನ್ನು ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗೆ ಬಳಕೆ ಮಾಡಿಕೊಳ್ಳಬೇಕು. ಕುಡಿಯುವ ನೀರು ಪೂರೈಕೆಗೆ ಬೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್‌ ಪೂರೈಸಬೇಕು. ಮೇವಿನ ಸಮಸ್ಯೆ ನಿವಾರಿಸಲು ಈ ತಿಂಗಳ ಅಂತ್ಯದೊಳಗೆ ಅಗತ್ಯವಿರುವ ಸ್ಥಳಗಳಲ್ಲಿ ಮೇವಿನ ಬ್ಯಾಂಕ್‌ ತೆರೆಯಬೇಕು. ಜಾನುವಾರು ಸಂಖ್ಯೆಗೆ ಅನುಗುಣವಾಗಿ ಮೇವು ವಿತರಿಸಲಾಗುವುದು. ರೈತರು ಆತಂಕ ಪಡಬಾರದು’ ಎಂದು ಗೋವಿಂದಪ್ಪ ಹೇಳಿದರು.
 
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಲಾ ಗಿರೀಶ್‌, ತಹಶೀಲ್ದಾರ್‌ ಮಲ್ಲಿಕಾರ್ಜುನ್‌, ಕಾರ್ಯ ನಿರ್ವಹಣಾಧಿಕಾರಿ ಮಹಾಂತೇಶ್‌, ಶಿರಸ್ತೇದಾರ್ ಲಕ್ಷ್ಮಣಪ್ಪ, ಕಂದಾಯ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒ ಹಾಗೂ ಗ್ರಾಮ ಲೆಕ್ಕಿಗರು ಹಾಜರಿದ್ದರು.
 
* ಬೆಸ್ಕಾಂ ಅಧಿಕಾರಿ ತಿರುಪತಿ ನಾಯ್ಕ ಸಾರ್ವಜನಿಕರೊಂದಿಗೆ ಉದ್ಧಟತನದಿಂದ ವರ್ತಿಸದೇ, ವಿದ್ಯುತ್‌ ಸಮಸ್ಯೆ ನಿವಾರಿಸಬೇಕು
– ಬಿ.ಜಿ.ಗೋವಿಂದಪ್ಪ, ಶಾಸಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.