ADVERTISEMENT

ಕುಮಾರಸ್ವಾಮಿ ವಿರುದ್ಧ ಭಕ್ತ ಮಂಡಳಿ ಆಕ್ರೋಶ

ಸಾಣೆಹಳ್ಳಿ ಸ್ವಾಮೀಜಿ ಬಗ್ಗೆ ಹಗುರ ಮಾತು: ಬಹಿರಂಗ ಕ್ಷಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2018, 2:42 IST
Last Updated 25 ಮೇ 2018, 2:42 IST
ಸಾಣೆಹಳ್ಳಿ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಠಾಧೀಶರ ಭಕ್ತ ಮಂಡಳಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು
ಸಾಣೆಹಳ್ಳಿ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಠಾಧೀಶರ ಭಕ್ತ ಮಂಡಳಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು   

ದಾವಣಗೆರೆ: ‘ನೇರವಾಗಿ ರಾಜಕೀಯ ಕ್ಷೇತ್ರಕ್ಕೆ ಬಂದು ಬಿಡಿ’ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಠಾಧೀಶ್ವರರ ಭಕ್ತ ಮಂಡಳಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸಾಣೆಹಳ್ಳಿ ಸ್ವಾಮೀಜಿ ಪ್ರಬುದ್ಧರು, ಸಮಾನತೆಯ ನಿಲುವುಗಳನ್ನು ಹೊಂದಿರುವವರು. ಬಹುಮತವಿಲ್ಲದ ಸರ್ಕಾರ ರಚನೆಯಾಗುವುದಕ್ಕೆ ಜನರೇ ಕಾರಣ. ಒಳ್ಳೆಯ ಸರ್ಕಾರ ಆಯ್ಕೆ ಮಾಡುವುದು ಜನರ ಜವಾಬ್ದಾರಿ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮಠಾಧೀಶರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದರಿಂದ ಶಿಷ್ಯ ವೃಂದಕ್ಕೆ ಆಘಾತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಮೀಜಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡವರಲ್ಲ. ಗುರುಸ್ಥಾನದಲ್ಲಿ ಇದ್ದು, ಯಾವಾಗಲೂ ನಾಡಿನ ರೈತರ, ಬಡವರ, ಅಶಕ್ತರ ಏಳಿಗೆಗೆ ಶ್ರಮಿಸುತ್ತಾ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂಥ ಪರಂಪರೆ ಇರುವ ಸ್ವಾಮೀಜಿ
ಬಗ್ಗೆ ಅಸಂಬದ್ಧವಾಗಿ ಮಾತನಾಡುವುದು ಸಲ್ಲದು. ಸ್ವಾಮೀಜಿ ಕುರಿತ ಕುಮಾರಸ್ವಾಮಿ ಹೇಳಿಕೆ ಬಾಲಿಶವಾದ
ದ್ದು. ಅವರ ಪಕ್ಷದ ಶಾಸಕರೇ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಮುಖ್ಯಮಂತ್ರಿ ಕುಮಾರಸ್ವಾಮಿ ಶ್ರೀಗಳ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ಕೂಡಲೇ ಅವರು ಕ್ಷಮೆ ಕೇಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಕುಮಾರಸ್ವಾಮಿ
ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಕ್ತ ಮಂಡಳಿ ಕಾರ್ಯಕರ್ತರಾದ ಉದ್ದಿನಹಳ್ಳಿ ಸಿದ್ದೇಶ್, ಹೆಮ್ಮನಬೇತೂರು ಶಶಿಧರ್‌, ಕುರುಡಿ ಬಣಕಾರ್, ಕಾಶೀಪುರ ಸುರೇಶ್, ನಾಗನಗೌಡ, ಕೊಂಡಜ್ಜಿ ನರೇಂದ್ರ, ರವಿಕುಮಾರ್‌ ನುಗ್ಗೆಹಳ್ಳಿ, ಸುನೀಲ್‌ ದಾಸಪ್ಳ, ನಿಂಗರಾಜ್ ಅಗಸನಕಟ್ಟೆ, ಆನೆಕೊಂಡ ಲಿಂಗರಾಜ್, ಕುಮಾರ್‌ ಮೆಳ್ಳೆಕಟ್ಟೆ, ಕಾಶಿಪುರ ಸಿದ್ದೇಶ್ ಅವರೂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.