ADVERTISEMENT

‘ಕೆರೆ ತುಂಬಿಸುವ ಯೋಜನೆಗೆ ಶೀಘ್ರ ಶಂಕುಸ್ಥಾಪನೆ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:53 IST
Last Updated 24 ಮಾರ್ಚ್ 2017, 5:53 IST

ಹರಪನಹಳ್ಳಿ: ‘ತುಂಗಭದ್ರಾ ನದಿ ಯಿಂದ ಪ್ರತಿ ವರ್ಷ ಒಂದು ಟಿಎಂಸಿ ಅಡಿ ನೀರು ಪಡೆಯುವ ಮೂಲಕ ತಾಲ್ಲೂಕಿನ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಶಾಸಕ ಎಂ.ಪಿ.ರವೀಂದ್ರ ಹೇಳಿದರು.

‘ಒಂದು ಟಿಎಂಸಿ ಅಡಿಗಿಂತ ಹೆಚ್ಚು ನೀರು ಬಳಸಿಕೊಂಡರೆ ಕೃಷ್ಣಾ ನದಿ ನೀರು ಪ್ರಾಧಿಕಾರ ನಿಯಮದ ಉಲ್ಲಂಘನೆಯಾಗುತ್ತದೆ. ಮಳೆಗಾಲದ ಮೂರು ತಿಂಗಳು ಮಾತ್ರ ನದಿ ನೀರನ್ನು ಬಳಸಿಕೊಳ್ಳಲಾಗುವುದು. ನಂತರ ಬೃಹತ್‌ ಕೊಳವೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಸಮಾರಂಭಕ್ಕೆ ಮುಖ್ಯಮಂತ್ರಿಯನ್ನು ಆಹ್ವಾನಿಸಲಾಗುವುದು’ ಎಂದು ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಯೋಜನೆಯಲ್ಲಿನ 60 ಕೆರೆಗಳ ಬದಲು 50 ಕೆರೆಗಳಿಗೆ ನೀರು ಹರಿಸಲಾಗುವುದು. ಉಳಿದ 10 ಕೆರೆಗಳಿಗೆ  ಪ್ರತ್ಯೇಕ್‌ ಜಾಕ್‌ವೆಲ್‌ ನಿರ್ಮಿಸಿ ನೀರು ಹರಿಸಲಾಗುವುದು’ ಎಂದು ರವೀಂದ್ರ ಹೇಳಿದರು.

ಗರ್ಭಗುಡಿ ಯೋಜನೆ: ‘ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಗರ್ಭ ಗುಡಿ ಕಮ್‌ ಬ್ಯಾರೇಜ್‌ ನಿರ್ಮಾಣಕ್ಕೆ ₹ 55 ಕೋಟಿಯ ಮರು ಅಂದಾಜು ಪಟ್ಟಿ ತಯಾರಿಸಿ ಮುಖ್ಯಮಂತ್ರಿ ಸೂಚನೆಯಂತೆ ಸಚಿವ ಸಂಪುಟ ಸಭೆಗೆ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಸದ್ಯ ದಲ್ಲೇ ನಡೆಯುವ ಸಚಿವ ಸಂಪುಟದಲ್ಲಿ ಅನುಮೋದನೆ ಸಿಗಲಿದ್ದು, ಬಳಿಕ ಕಾಮ ಗಾರಿ ಆರಂಭಿಸಲು ಟೆಂಡರ್‌ ಕರೆಯಲಾ ಗುವುದು’ ಎಂದು ಹೇಳಿದರು.

ಹಲವಾಗಲು ಗ್ರಾಮಕ್ಕೆ ₹ 1 ಕೋಟಿ ವೆಚ್ಚದಲ್ಲಿ ಬಸ್‌ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಮಂಜೂರಾತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಅಭಿನಂದಿಸಿದ ಶಾಸಕರು, ‘ಬಾಗಳಿ ಮತ್ತು ನೀಲಗುಂದ ಗ್ರಾಮ ಗಳಲ್ಲಿ ಅತಿಥಿಗೃಹಗಳನ್ನು ನಿರ್ಮಿಸಲಾಗು ವುದು. ಚಿಗಟೇರಿ ಗ್ರಾಮಕ್ಕೆ ನೂತನ ಪೊಲೀಸ್‌ ಠಾಣೆ ಮಂಜೂರಾಗಿದೆ’ ಎಂದರು.

‘ವಿರೋಧ ಪಕ್ಷಗಳು ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ಮಾತ್ರಕ್ಕೆ ಅದು ಜಾರಿಯಾಗುವುದಿಲ್ಲ. ನಮ್ಮ ಸರ್ಕಾರದ ಯೋಜನೆ ಎಂದು ಹೇಳಿಕೊಳ್ಳುವ ನೈತಿಕತೆ ಅವರಿಗಿಲ್ಲ’ ಎಂದು ಮಾಜಿ ಸಚಿವ ಕರುಣಾಕರ ರೆಡ್ಡಿ ಹೆಸರು ಪ್ರಸ್ತಾಪಿಸದೇ ಟೀಕಿಸಿದರು.

ಮುಖಂಡರಾದ ಸಾಸ್ವೇಹಳ್ಳಿ ಚನ್ನಬಸವನ ಗೌಡ, ಟಿ.ಎಚ್‌.ಎಂ. ವಿರೂಪಾಕ್ಷಯ್ಯ, ಬಿ.ಎಚ್‌. ಪರುಶು ರಾಮಪ್ಪ, ಕೋಡಿಹಳ್ಳಿ ಭೀಮಪ್ಪ, ಎಂ.ವಿ.ಅಂಜಿನಪ್ಪ, ಮಂಜ್ಯಾನಾಯ್ಕ, ಜಾವೀದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.