ADVERTISEMENT

ಕೊಟ್ಟಿಗೆ ಗೊಬ್ಬರದಿಂದ ಫಲವತ್ತತೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 5:26 IST
Last Updated 21 ಮೇ 2017, 5:26 IST

ತ್ಯಾವಣಿಗೆ: ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಳ, ನೀರಿನ ಸದ್ಬಳಕೆ ಕುರಿತು  ಹೋಬಳಿಯ ಎಲ್ಲ ಹಳ್ಳಿಗಳಲ್ಲಿ ತಾಂತ್ರಿಕ ಮಾಹಿತಿ ನೀಡುವುದು. ವಸ್ತು ಪ್ರದರ್ಶನ ಆಯೋಜನೆ, ರೈತರೊಂದಿಗೆ ಸಂವಾದ ನಡೆಸುವುದು ರೈತ ಅಭಿಯಾನದ ಉದ್ದೇಶ ಎಂದು ತಾಲ್ಲೂಕು ಉಪ ಕೃಷಿ ನಿರ್ದೇಶಕಿ ಹಂಸವೇಣಿ ಹೇಳಿದರು.

ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ರೈತ ಕೃಷಿಯ ಜತೆಗೆ ಹೈನುಗಾರಿಕೆಯನ್ನೂ ಅವಲಂಬಿಸಿದ್ದಾರೆ. ಉತ್ಪಾದಕತೆ ಹೆಚ್ಚಿಸುವ ಆತುರದಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಭೂಮಿಯ ಆರೋಗ್ಯ ಕಾಪಾಡುವುದರ ಜತೆಗೆ ಇಳುವರಿ ಹೆಚ್ಚಿಸಬೇಕು. ಹಸಿರೆಲೆ, ಕೊಟ್ಟಿಗೆ ಗೊಬ್ಬರದ ಬಳಕೆಯಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದರು.

ಕಾರ್ಮಿಕರ ಕೊರತೆ ಹೆಚ್ಚಾಗಿದ್ದು, ಯಾಂತ್ರೀಕರಣ ಪದ್ಧತಿ ಅಳವಡಿಕೆಯಿಂದ ಸಮಸ್ಯೆ ಬಗೆಹರಿಯುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಾಡಿಗೆ ಆಧಾರಿತ ಸೇವಾ ಕೇಂದ್ರವನ್ನು ತ್ಯಾವಣಿಗೆಯಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ವಿ.ಪಟೇಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಗ್ರಾಮಗಳಲ್ಲಿ ನೀರಿನ ಶೇಖರಣಾ ಘಟಕಗಳನ್ನು ಸ್ಥಾಪಿಸಿ, ಕೃಷಿಗೆ ಮತ್ತು ಕುಡಿಯಲು ಬೇಕಾಗುವ ನೀರನ್ನು ಸಂಗ್ರಹಿಸಿಕೊಳ್ಳಬೇಕು. ಅತಿಯಾದ ಇಳುವರಿ ತೆಗೆಯುವ ದುರಾಸೆಗೆ ಬಿದ್ದು ಭೂಮಿಯ ಆರೋಗ್ಯ ಹಾಳು ಮಾಡುತ್ತಿದ್ದೇವೆ. ಜತೆಗೆ ನಮ್ಮ ಆರೋಗ್ಯವನ್ನೂ ಕಳೆದುಕೊಳ್ಳುತ್ತಿದ್ದೇವೆ. ಕೃಷಿ ಉತ್ಪನ್ನಗಳ ಬೆಲೆ ನಿರಂತರ ಏರಿಕೆ ಆಗಬೇಕು’ ಎಂದು ಸಲಹೆ ನೀಡಿದರು.

ದಾವಣಗೆರೆ ತರಳಬಾಳು ಕೃಷಿ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಮಾತನಾಡಿ, ರೈತರು ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಗಮನಹರಿಸಿ, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಸಾವಯವ ಗೊಬ್ಬರ ಉಪಯೋಗ ಮಾಡಬೇಕು ಎಂದು ಹೇಳಿದರು.

ನಲ್ಕುದುರೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ವಿಜಯ ಕುಮಾರ್. ತರಳಬಾಳು ಕೃಷಿ ಕೇಂದ್ರದ ಬಸವನಗೌಡ್ರು, ಪ್ರಸನ್ನ ಕುಮಾರ್, ಪತ್ರಕರ್ತ ರಾಘು ದೊಡ್ಮನೆ, ಸಹಾಯಕ ಕೃಷಿ ನಿರ್ದೇಶಕ ರಮೇಶನಾಯ್ಕ, ಪಿಡಿಒ ಶ್ರೀನಿವಾಸ, ಸಹಾಯಕ ಕೃಷಿ ಅಧಿಕಾರಿ ಎಲ್.ಮಂಜುನಾಥ್, ಅಬ್ದುಲ್ ಗಫಾರ್, ಗಿರೀಶ್, ಚಂದ್ರಾನಾಯ್ಕ ಇತರರು ಭಾಗವಹಿಸಿದ್ದರುಕೃಷಿ ಅಧಿಕಾರಿ ಬಿ.ಶ್ರೀನಿವಾಸುಲು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.