ADVERTISEMENT

ಕ್ರೀಡಾಂಗಣ; ಅನೈತಿಕ ಚಟುವಟಿಕೆ ತಾಣ

ಮದ್ಯದ ಬಾಟಲಿ, ಕೆಸರು, ದೂಳಿನ ನಡುವೆ ಕ್ರೀಡಾ ಭವಿಷ್ಯದ ಹುಡುಕಾಟ...

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 6:08 IST
Last Updated 22 ಸೆಪ್ಟೆಂಬರ್ 2014, 6:08 IST
ಸಮಸ್ಯೆಗಳನ್ನೇ ಹೊದ್ದು ಮಲಗಿರುವ ದಾವಣಗೆರೆ ಜಿಲ್ಲಾ ಕ್ರೀಡಾಂಗಣ.
ಸಮಸ್ಯೆಗಳನ್ನೇ ಹೊದ್ದು ಮಲಗಿರುವ ದಾವಣಗೆರೆ ಜಿಲ್ಲಾ ಕ್ರೀಡಾಂಗಣ.   

ದಾವಣಗೆರೆ: ‘ನನ್ನ ಹೆಸರು ಜಿಲ್ಲಾ ಕ್ರೀಡಾಂಗಣ. ನಿತ್ಯ ನನ್ನನ್ನೇ ನಂಬಿ ದೈಹಿಕ ಕಸರತ್ತು, ಆಟ–ಓಟಕ್ಕೆಂದು ನೂರಾರು ಕ್ರೀಡಾಪಟುಗಳು ಬೆಳ್ಳಂಬೆಳಿಗ್ಗೆಯೇ ಬರುತ್ತಾರೆ. ಸಂಜೆಯೂ ವಾಯುವಿಹಾರಕ್ಕೆ ಬರುವವರಿಗೆ ಕೊರತೆಯಿಲ್ಲ. ಆದರೆ, ಬಂದವರು ಕೆಟ್ಟ ಸ್ಥಿತಿನೋಡಿ ನನ್ನನ್ನೇ ದೂಷಿಸಿ ಮನೆಗೆ ತೆರಳುತ್ತಿದ್ದಾರೆ; ಮಳೆ ಬಂದರೆ ನಾನು ಒದ್ದೆಗೊಳ್ಳುತ್ತೇನೆ. ಮಳೆಯ ನೀರು ಸರಾಗವಾಗಿ ಹರಿಯುವುದಿಲ್ಲ. ರಾತ್ರಿವೇಳೆ ಕುಡುಕರ ಕಾಟ, ರನ್ನಿಂಗ್‌ ಟ್ರ್ಯಾಕ್‌ನಲ್ಲಿ ಕೆಸರು, ಚರಂಡಿಯಲ್ಲಿ ತ್ಯಾಜ್ಯದ ಹಾವಳಿ...’

ಹೀಗೆ ನೊಂದುಕೊಳ್ಳುತ್ತಾ ಕಾಯಕಲ್ಪಕ್ಕೆ ಕಾದಿದೆ ನಗರದ ಜಿಲ್ಲಾ ಕ್ರೀಡಾಂಗಣ. ಇದು ಹೆಸರಿಗೆ ಮಾತ್ರ ಜಿಲ್ಲಾ ಕ್ರೀಡಾಂಗಣ; ಒಳಹೊಕ್ಕರೆ ಅಡಿಗಡಿಗೂ ಸಮಸ್ಯೆಗಳು ಅನಾವರಣಗೊಳ್ಳುತ್ತವೆ. ಬಾಪೂಜಿ ಆಸ್ಪತ್ರೆ ರಸ್ತೆ ಕಡೆಯಿಂದ ಕ್ರೀಡಾಂಗಣಕ್ಕೆ ಪ್ರವೇಶವಿದೆ.

ಮೊದಲು ನಿಮಗೆ ಬಳಸಿ ಬಿಸಾಡಿದ ‘ಕಾಂಡೋಮ್‌’ಗಳ ದರ್ಶನವಾಗುತ್ತದೆ. ಎಲ್ಲೆಡೆಯೂ ಇವುಗಳದ್ದೇ ಹಾವಳಿ. ಕ್ರೀಡಾಂಗಣದ ಒಂದುಭಾಗದಲ್ಲಿ ಮುಳ್ಳಿನಪೊದೆ ಬೆಳೆದು ನಿಂತಿದೆ. ಜೊತೆಗೆ, ಹದಡಿ ರಸ್ತೆಯಲ್ಲಿರುವ ವೈನ್‌ ಸ್ಟೋರ್‌ಗಳ ಹುಡುಗರು ರಾತ್ರಿ ವೇಳೆ ಮದ್ಯವನ್ನು ಕ್ರೀಡಾಂಗಣಕ್ಕೆ ಪೂರೈಕೆ ಮಾಡುತ್ತಾರೆ. ಇದರಿಂದ ಪ್ರೇಕ್ಷಕರ ಗ್ಯಾಲರಿಯ ಸುತ್ತಮುತ್ತ ಖಾಲಿ ಮದ್ಯದ ಬಾಟಲಿಗಳೇ ಬಿದ್ದಿವೆ.

ಗಾಜುಗಳು ಪುಡಿಪುಡಿ...!: ಕ್ರೀಡಾಂಗಣದಲ್ಲಿರುವ ನಗರಸಭೆಯ ವ್ಯಾಯಾಮ ಶಾಲೆಯ ಮೊದಲ ಅಂತಸ್ತಿನಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಿದೆ. ಕಚೇರಿಯ ಕಿಟಕಿ ಗಾಜುಗಳು ಮಾತ್ರ ಕಿಡಿಗೇಡಿಗಳ ಹಾವಳಿಯಿಂದ ಪುಡಿಯಾಗಿವೆ. ಕಟ್ಟಡವೂ ದುರ್ಬಲವಾಗುತ್ತಿದೆ. ಕಚೇರಿಯ ಮುಂಭಾಗದಲ್ಲಿಯೂ ತ್ಯಾಜ್ಯದ ಸಂಗ್ರಹವಿದೆ. ತಿಂದು ಬಿಸಾಡಿದ ಕಡ್ಲೆಕಾಯಿ ಸಿಪ್ಪೆ, ಬೀಡಿ– ಸಿಗರೇಟಿನ ತುಂಡು, ಖಾಲಿಯಾದ ಗುಟ್ಕಾ ಪಟ್ಟಣಗಳು, ಮೂಳೆ... ಹೀಗೆ ಹತ್ತಾರು ಸಮಸ್ಯೆಗಳು ಅವರ ಕಚೇರಿಯ ಎದುರೇ ಕಾಣಿಸುತ್ತವೆ. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ. ಇಂತಹ ಕ್ರೀಡಾಂಗಣದಲ್ಲಿ ನೂರಾರು ಕ್ರೀಡಾಪಟುಗಳು ನಿತ್ಯವೂ ತಮ್ಮ ಕ್ರೀಡಾ ಭವಿಷ್ಯ ಅರಸುತ್ತಿದ್ದಾರೆ!

ಗಬ್ಬು ನಾರುವ ಚರಂಡಿ..!: ಕ್ರೀಡಾಂಗಣದ ಒಳ ಆವರಣದಲ್ಲಿ ಚರಂಡಿ ನಿರ್ಮಿಸಲಾಗಿದೆ. ಇದು ಹೆಸರಿಗಷ್ಟೇ ಚರಂಡಿ. ಚರಂಡಿ ಹೂಳು, ಪ್ಲಾಸ್ಟಿಕ್‌ನಿಂದ ತುಂಬಿ ಹೋಗಿದೆ. ಮಳೆ ಬಂದ ನೀರು ಚರಂಡಿಯಲ್ಲಿ ನಿಂತು ದುರ್ವಾಸನೆ ಬೀರುತ್ತಿದೆ. ನಗರದಲ್ಲಿ ಕಳೆದ ಮೂರು ತಿಂಗಳಿಂದ ಸುರಿದ ಭಾರಿ ಮಳೆಗೆ ಓಟದ ಟ್ರ್ಯಾಕ್‌ ಸಂಪೂರ್ಣ ಹದಗೆಟ್ಟು ಹೋಗಿದೆ. ಟ್ರ್ಯಾಕ್‌ ಕೆಸರುಮಯವಾಗಿದೆ. ಓಡಿದರೆ ಬಿದ್ದು ಕೈ–ಕಾಲು ಮುರಿದು ಕೊಳ್ಳುವುದು ಖಚಿತ.

ಬೆಳಿಗ್ಗೆ ವಾಯುವಿಹಾರಕ್ಕೆ ಬರುವ ನೂರಾರು ಮಂದಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೇ ನಡೆದಾಡುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ಸಚಿವ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎ.ಎಚ್‌. ಶಿವಯೋಗಿಸ್ವಾಮಿ ಹಾಗೂ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗಿದೆ. ಆದರೆ, ಅವುಗಳ ನಿರ್ವಹಣೆ ಮಾತ್ರ ಮಾಡುತ್ತಿಲ್ಲ ಎಂಬುದು ಕ್ರೀಡಾಪಟುಗಳ ಆರೋಪ.

ಟ್ಯಾಂಕ್‌ನಲ್ಲಿ ನೀರೇ ಇಲ್ಲ: ಕ್ರೀಡಾಂಗಣದ ಒಂದುಭಾಗದಲ್ಲಿ ನೀರಿನ ಮಿನಿ ಟ್ಯಾಂಕ್‌ ನಿರ್ಮಿಸಲಾಗಿದೆ. ಅದರಲ್ಲಿ ನೀರೇ ಇಲ್ಲ. ಹೀಗಾಗಿ, ದಾಹ ತಣ್ಣಿಸಿಕೊಳ್ಳಲು ಪರದಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಮೈದಾನದ ಒಂದು ಭಾಗದಲ್ಲಿ ಎರಡು ವಿದ್ಯುತ್‌ ಕಂಬಗಳನ್ನು ನೆಟ್ಟು ಹಾಗೆಯೇ ಬಿಡಲಾಗಿದೆ. ಆಟವಾಡುವ ಹುಡುಗರು ಅದಕ್ಕೆ ಬಡಿದುಕೊಂಡರೆ ಅಪಾಯ ನಿಶ್ಚಿತ. ಮೈದಾನದ ಸ್ವಲ್ಪಭಾಗ ಮಾತ್ರ ಹಸಿರಹೊದಿಕೆ ಕಾಣಿಸುತ್ತದೆ. ಉಳಿದಂತೆ ಕ್ರೀಡಾಂಗಣ ದೂಳಿನಿಂದಲೇ ಕೂಡಿರುತ್ತದೆ. ರಾತ್ರಿ ಮಾತ್ರ ಒಬ್ಬ ಕಾವಲುಗಾರನನ್ನು ನೇಮಿಸಲಾಗಿದೆ. ಅವರೂ ಸಹ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಕಿಡಿಗೇಡಿಗಳನ್ನು ಕಾವಲುಗಾರ ಹೆದರಿಸುವ ಬದಲು; ಕಿಡಿಗೇಡಿಗಳೇ ಇವರನ್ನು ಬೆದರಿಸುವ ಪರಿಸ್ಥಿತಿಯಿದೆ ಎಂದು ಕ್ರೀಡಾಪಟುಗಳು ಅಲವತ್ತು ಕೊಳ್ಳುತ್ತಾರೆ.

ಒಂದುಕಾಲದಲ್ಲಿ ರಾಷ್ಟ್ರಕ್ಕೆ ಹೆಮ್ಮೆಯ ಕ್ರೀಡಾಪಟುಗಳನ್ನು ನೀಡಿದ್ದ ಕ್ರೀಡಾಂಗಣ ಇಂದು ಸೊರಗಿ ನಿಂತಿದೆ. ಕ್ರಿಕೆಟಿಗ ವಿನಯ್‌ ಕುಮಾರ್‌ ಸಹ ಇದೇ ಕ್ರೀಡಾಂಗಣದಲ್ಲಿ ತಾಲೀಮು ನಡೆಸಿ, ರಾಷ್ಟ್ರದ ಕ್ರಿಕೆಟ್‌ ತಂಡದಲ್ಲಿ ಸಾಧನೆ ತೋರುತ್ತಿದ್ದಾರೆ. ಆದರೆ, ಇದೀಗ ಇಲ್ಲಿ ಸೌಲಭ್ಯಗಳೇ ಇಲ್ಲವಾಗಿವೆ.

‘ಸಂಜೆ ವೇಳೆ ಮದ್ಯ ಸೇವಿಸಿ ತೊಂದರೆ ಕೊಡುವವರು ಹೆಚ್ಚಾಗಿದ್ದಾರೆ. ತಂತಿಬೇಲಿ ಮುರಿದಿರುವ ದುಷ್ಕರ್ಮಿಗಳು ರಾತ್ರಿವೇಳೆ ಕ್ರೀಡಾಂಗಣದಲ್ಲಿಯೇ ಮದ್ಯಪಾನ ಮಾಡುತ್ತಾರೆ. ಸಂಜೆ ವೇಳೆ ಮಕ್ಕಳು–ಮಹಿಳೆಯರು ಇಲ್ಲಿಗೆ  ಬರುವುದೇ  ಕಷ್ಟ. ಅನೈತಿಕ ಚಟುವಟಿಕೆಯ ತಾಣವಾಗಿದೆ. ಇಂಥ ಕ್ರೀಡಾಂಗಣದಲ್ಲಿ ಮಕ್ಕಳು ತರಬೇತಿ ಪಡೆಯಲು ಹೇಗೆ ಸಾಧ್ಯ. ರಾಷ್ಟ್ರೀಯ ಹಬ್ಬಗಳಂದು ಮಾತ್ರ ಕ್ರೀಡಾಂಗಣಕ್ಕೆ ಸ್ವಲ್ಪಕಳೆ ಬರುತ್ತದೆ.

ಇಲ್ಲಿನ ಸಮಸ್ಯೆ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬರೀ ಪ್ರಸ್ತಾವ ಕಳುಹಿಸಿದ್ದೇವೆ ಎಂದು ಸಬೂಬು ಹೇಳುತ್ತಾರೆ’ ಎಂದು ಆರೋಪಿಸುತ್ತಾರೆ ದಾವಣಗೆರೆ ಕ್ರಿಕೆಟ್‌ ಅಕಾಡೆಮಿ ತರಬೇತುದಾರರೊಬ್ಬರು.

ಸಿಂಥೆಟಿಕ್‌ ಟ್ರ್ಯಾಕ್‌ ಮರೀಚಿಕೆ!
ರಾಜ್ಯದ ಎಲ್ಲ ಜಿಲ್ಲಾ ಕ್ರೀಡಾಂಗಣಗಳಲ್ಲೂ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಬೇಕು ಎಂಬ ರಾಜ್ಯ ಸರ್ಕಾರದ ಉದ್ದೇಶ ಇಲ್ಲಿ ಸಾಕಾರಗೊಂಡಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಹಿಂದೆ ಮಂಜೂರಾಗಿದ್ದ ಸಿಂಥೆಟಿಕ್‌ ಟ್ರ್ಯಾಕ್‌ ಸಹ ಅನ್ಯ ಜಿಲ್ಲೆಯ ಪಾಲಾಯಿತು. ಆದ್ದರಿಂದ, ಮಣ್ಣಿನ ಟ್ರ್ಯಾಕ್‌ನಲ್ಲಿ ಓಡಬೇಕಾದ ಅನಿವಾರ್ಯತೆ ಇಲ್ಲಿನ ಕ್ರೀಡಾಪಟುಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT