ADVERTISEMENT

ಗಾಢ ನಿದ್ದೆಗೆ ಜಾರಿದ ಪುರಸಭೆ ಆರೋಗ್ಯ ನಿರೀಕ್ಷಕರು!

ಹರಪನಹಳ್ಳಿ; ಹೋಟೆಲ್‌ಗಳಲ್ಲಿ ಕಣ್ಮರೆಯಾದ ಶುಚಿತ್ವ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 6:10 IST
Last Updated 25 ಅಕ್ಟೋಬರ್ 2014, 6:10 IST

ಹರಪನಹಳ್ಳಿ: ಹೋಟೆಲ್‌ ಊಟ ಹಾಗೂ ಉಪಹಾರದ ಮೇಲೆ ನೀವು ಅವಲಂಬಿತವಾಗಿದ್ದೀರಾ?. ಹಾಗಿದ್ದರೇ ಒಂದು ಕ್ಷಣ ಈ ವರದಿ ಓದಿ ಊಟ– ಉಪಹಾರ ಸೇವಿಸಿ; ಇಲ್ಲವಾದಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬೇಕಾದೀತು ಜೋಕೆ!.

–ಇದೇನು, ಹೋಟೆಲ್‌ ಊಟ– ಉಪಹಾರಕ್ಕೂ ಹಾಗೂ ಸಾಂಕ್ರಾಮಿಕ ಕಾಯಿಲೆಗಳಿಗೂ ಅದೆಂಥ ಸಾಮ್ಯತೆ ಎಂದು ಲೆಕ್ಕಾಚಾರ ಹಾಕುತ್ತಿದ್ದೀರಾ?. ಹೌದು, ಪಟ್ಟಣದ ಬಹುತೇಕ ಹೋಟೆಲ್‌, ಡಾಬಾಗಳಲ್ಲಿ ಶುಚಿತ್ವ ಕಣ್ಮರೆಯಾಗಿದೆ. ಕುಡಿಯುವ ನೀರು ಕೊಳದಿಂದ ಹಿಡಿದು, ಅಡುಗೆ ಮನೆಯವರೆಗೂ ಎಲ್ಲದರಲ್ಲಿಯೂ ಸ್ವಚ್ಛತೆ ಎಂಬುದನ್ನು ದುರ್ಬೀನ್‌ ಹಾಕಿ ಹುಡುಕಬೇಕಾಗಿದೆ. ಶುಚಿತ್ವ ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ ಬಹುತೇಕ ಹೋಟೆಲ್‌ಗಳ ಅಡುಗೆ ಮನೆ, ಭೋಜನಾಲಯದಲ್ಲಿ ನೊಣ, ಜಿರಳೆ ಹಾಗೂ ಹಲ್ಲಿಯಂತ ಹುಳು ಸಾಮ್ರಾಜ್ಯವನ್ನು ಸ್ಥಾಪಿಸಿವೆ. ಒಮ್ಮೊಮ್ಮೆ ಇವು ಆಹಾರ ಪದಾರ್ಥಗಳ ಪಾತ್ರೆಯಲ್ಲಿಯೂ ಬಿದ್ದು ಗ್ರಾಹಕರ ಕಣ್ತಪ್ಪಿನಿಂದ ಹೊಟ್ಟೆ ಸೇರಿಕೊಂಡಿರುವ ಉದಾಹರಣೆಗಳು ಇವೆ. ಪರಿಣಾಮ, ಹೋಟೆಲ್‌ಗಳಲ್ಲಿ ಊಟೋಪಹಾರ ಮಾಡುವ ಗ್ರಾಹಕರು ಹಣ ಕೊಟ್ಟು ಕಾಯಿಲೆಗಳನ್ನು ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದುರಂತದ ಸಂಗತಿ ಎಂದರೆ ಹೋಟೆಲ್‌ ಹಾಗೂ ಡಾಬಾಗಳ ಮೇಲೆ ಕಣ್ಗಾವಲು ಹಾಕಬೇಕಾದ ಪುರಸಭೆಯ ಇಬ್ಬರು ಆರೋಗ್ಯ ನಿರೀಕ್ಷಕರು ಹೋಟೆಲ್ ಮಾಲಿಕರು ಬಡಿಸಿದ ಭೂರೀ ಭೋಜನ ಸವಿದು ಗಾಢ ನಿದ್ದೆಗೆ ಜಾರಿದ್ದಾರೆ ಎಂಬುದು ಗ್ರಾಹಕರ ಆರೋಪ.

ಹಲವು ಹೋಟೆಲ್‌ ಹಾಗೂ ಡಾಬಾಗಳು ಆಹಾರ ಸುರಕ್ಷತಾ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಮೂಲಕ ಅನಾರೋಗ್ಯಕಾರಿ ಆಹಾರ ತಯಾರಿಸುತ್ತಿರುವ ಬಗ್ಗೆ ಅನೇಕ ದೂರುಗಳು ಕೇಳಿ ಬರುತ್ತಿವೆ. ಹೋಟೆಲ್‌ಗಳಿಗೆ ಪರವಾನಗಿ ಕೊಟ್ಟು ಕೈತೊಳೆದುಕೊಂಡಿರುವ ಪುರಸಭೆ ಮೇಲ್ವಿಚಾರಣೆ, ಸ್ವಚ್ಛತೆ ಪರಿಶೀಲಿಸುತ್ತಿಲ್ಲ. ಹೀಗಾಗಿ, ಹೋಟೆಲ್‌ಗಳು ಗ್ರಾಹಕರ ಪಾಲಿಗೆ ರೋಗೋತ್ಪಾದನಾ ತಾಣಗಳಾಗಿವೆ.

ಹೋಟೆಲ್‌ ಅಭಿರುಚಿ, ಹೋಟೆಲ್‌ ರಾಮದರ್ಶನ ಸೇರಿದಂತೆ ಬಹುತೇಕ ಪ್ರತಿಷ್ಠಿತ ಹೋಟೆಲ್‌ಗಳಲ್ಲಿಯೂ ಕೂಡ ಸ್ವಚ್ಛತೆ ಕಣ್ಮರೆಯಾಗಿದೆ. ಹೊರಗಿನಿಂದ ನೋಡಿದರೆ ಥೇಟ್‌ ಪಂಚತಾರಾ ಹೋಟೆಲ್‌ಗಳಂತೆ ಕಂಗೊಳಿಸುತ್ತಿರುವ ಈ ಹೋಟೆಲ್‌, ಒಳಗೆ ಹುಳುಕು ತುಂಬಿಕೊಳ್ಳುವ ಮೂಲಕ ಗ್ರಾಹಕರ ಆರೋಗ್ಯವನ್ನು ಹಾಳುಗೆಡವಲು ಮುಂದಾಗಿವೆ. ರಾಮದರ್ಶನ ಹೋಟೆಲ್‌ ಮೇಲ್ಛಾವಣೆಯ ಮೇಲೆ ನಿರ್ಮಿಸಿರುವ ಕುಡಿಯುವ ನೀರಿನ ತೊಟ್ಟೆ ಯಾವಾಗ ತೊಳೆಯಲಾಗಿದೆಯೋ ದೇವರೇ ಬಲ್ಲ. ಪ್ರಾಯಶಃ ತೊಟ್ಟೆ ತೊಳೆದು ಎಷ್ಟು ವರ್ಷ ಆಗಿದೆ ಎಂಬುದೇ ಸ್ವತಃ ಹೋಟೆಲ್‌ ಮಾಲೀಕರಿಗೂ ನೆನಪಿಲ್ಲ ಅನಿಸುತ್ತೆ. ಅಡುಗೆ ಮನೆಯಲ್ಲಿಯೂ ಸಹ, ಕೊಳಕು ತುಂಬಿಕೊಂಡು ದುರ್ವಾಸನೆ ಸೂಸುತ್ತದೆ. ಹೋಟೆಲ್‌ಗೆ ಆಗಮಿಸುವ ಗ್ರಾಹಕರಿಗೆ ಈ ಹೋಟೆಲ್‌ ಹೊಟ್ಟೆಯ ಹಸಿವು ಹಾಗೂ ನೀರಿನ ದಾಹ ತಣಿಸುವ ಬದಲು ಕಾಯಿಲೆ ಅಂಟಿಸುವ ತಾಣಗಳಾಗಿ ರೂಪಾಂತರ ಹೊಂದಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಹಕರಾದ ನೀಲಗುಂದ ಮಂಜುನಾಥ ಹಾಗೂ ಕನಕ ಬಸಾಪುರ ಮಂಜುನಾಥ.

ಪಟ್ಟಣದ ಮತ್ತೊಂದು ಪ್ರತಿಷ್ಠಿತ ಹೋಟೆಲ್‌ ಅಭಿರುಚಿಯೂ ಗ್ರಾಹಕರ ಪಾಲಿಗೆ ಅನಾಭಿರುಚಿಯಾಗಿ ಪರಿಣಮಿಸಿದೆ. ಹೆಸರು ಕೇಳಿದ್ರೆ ಎಷ್ಟೊಂದು ಸೊಗಸಾಗಿದೆ ಎಂದು ಹೋಟೆಲ್‌ನಲ್ಲಿ ಉಪಹಾರ ಸವಿಯಲು ಹೋದರೆ, ಉಪಹಾರದಲ್ಲಿ ಜಿರಳೆ ಗೋಚರಿಸಿತು. ಈ ಕುರಿತು, ಮಾಲಿಕರಿಗೆ ದೂರಿದರೆ, ‘ಅಡ್ಜೆಸ್ಟ್‌ ಮಾಡ್ಕೊಳ್ಳಿ ಸಾರ್‌, ಹೊಟ್ಟೆ ಮೇಲೆ ಹೊಡಿಬೇಡ್ರಿ’ ಎಂದು ಗೋಗರಿಯುತ್ತಾರೆ ಹೊರತು, ಶುಚಿತ್ವ ಕಾಪಾಡಿಕೊಳ್ಳುವಲ್ಲಿ ನಿಸ್ಸೀಮ ನಿರ್ಲಕ್ಷತೆ ತೋರುತ್ತಿದ್ದಾರೆ. ಶುಚಿಗೆ ಸಂಬಂಧಿಸಿದಂತೆ ಮಾಲಿಕರಿಗೆ ಸಾಕಷ್ಟು ಬಾರಿ ಹೇಳಿದರೂ ನಿಗಾವಹಿಸುತ್ತಿಲ್ಲ. ಹೋಟೆಲ್‌ ಗೋಡೆಗೆ ಹೊಂದಿಕೊಂಡಂತೆ ಕೊಳಚೆ ನೀರು ಸದಾ ಹರಿಯುತ್ತಿರುತ್ತದೆ. ಅದರಲ್ಲಿ ಹಂದಿಗಳು ಅಧಿಪತ್ಯ ಸ್ಥಾಪಿಸಿವೆ. ಹೀಗಾಗಿ, ಹೋಟೆಲ್‌ ಎಂಬುದು ಥೇಟ್‌ ರೋಗೋತ್ಪಾದನಾ ಕೇಂದ್ರವಾಗಿದೆ ಎನ್ನುತ್ತಾರೆ ವಕೀಲ ಎನ್‌. ನಂದೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.