ADVERTISEMENT

ಗಾಳಿಗೆ ಹಾರಿತು ದಾವಣಗೆರೆಯ ದೂಳು

ಮುಂಗಾರು ಪೂರ್ವ ಮಳೆಗೆ ತಂಪಾಯಿತು ಜಿಲ್ಲೆ l ಗುಡುಗು ಸಿಡಿಲಿನ ಆರ್ಭಟಕ್ಕೆ ಹಲವೆಡೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಮೇ 2017, 4:09 IST
Last Updated 12 ಮೇ 2017, 4:09 IST
ಗಾಳಿಗೆ ಹಾರಿತು ದಾವಣಗೆರೆಯ ದೂಳು
ಗಾಳಿಗೆ ಹಾರಿತು ದಾವಣಗೆರೆಯ ದೂಳು   
ದಾವಣಗೆರೆ: ನಗರದಲ್ಲಿ ಗುರುವಾರ ಕೆಲ ಸಮಯ ಗಾಳಿ ಸಹಿತ ಮಳೆಯಾಗಿದೆ. ಮಧ್ಯಾಹ್ನ 4 ಗಂಟೆಗೆ ಸುಮಾರಿಗೆ ಬೀಸಿದ ಗಾಳಿಗೆ ಕೆ.ಬಿ.ಬಡಾವಣೆಯ ಪ್ರೆಸ್‌ಕ್ಲಬ್‌ ಬಳಿ ಮರವೊಂದು ಉರುಳಿದೆ.
 
ಗಾಳಿಯ ರಭಸ ಜೋರಾಗಿದ್ದರಿಂದ ದೂಳು ಮೇಲೆದ್ದು ಸಾರ್ವಜನಿಕರಿಗೆ  ಅಭಿಷೇಕದ ಅನುಭವವಾಯಿತು. ರಸ್ತೆಯಲ್ಲಿ ಅಲ್ಲಲ್ಲಿ ಹಾಕಿದ್ದ ಪೊಲೀಸ್‌ ಬ್ಯಾರಿಕೇಡ್‌ಗಳು  ಉರುಳಿವೆ.
 
ಜಗಳೂರು
ಬಿರು ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮುಂಗಾರಿನ ಮಳೆಯ ಸಿಂಚನವಾಗಿದ್ದು, ಕಾದ ಕಾವಲಿಯಂತಾಗಿದ್ದ ಇಳೆ ತಂಪಾಯಿತು.
 
ಮಧ್ಯಾಹ್ನ ಸುಮಾರು ಒಂದು ತಾಸು ಬಿರುಸಿನ ಮಳೆ ಸುರಿಯಿತು. ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು. ರಭಸದ ಮಳೆಯಿಂದಾಗಿ ಸಣ್ಣಪುಟ್ಟ ಹಳ್ಳಗಳು ತುಂಬಿ ಹರಿಯತೊಡಗಿದ್ದು, ರೈತರಿಗೆ ಸಂತಸ ತಂದಿದೆ. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನಗಳ  ಸಂಚಾರಕ್ಕೆ ವ್ಯತ್ಯಯವಾಯಿತು. 
 
ಕಸಬಾ ಹೋಬಳಿಯಲ್ಲಿ ಇದೇ ಮೊದಲ ಬಾರಿ ಮಳೆಯಾಗಿದೆ. ಸುಡು ಬಿಸಿಲಿನಿಂದ ತತ್ತರಿಸಿದ್ದ ಇಲ್ಲಿನ ಜನರಿಗೆ ಮುಂಗಾರು ಮಳೆ ಮುದ ನೀಡಿತು. ಸಮೀಪದ ರಸ್ತೆ ಮಾಕುಂಟೆ, ಗೋಪಗೊಂಡಹನಳ್ಳಿ, ಗೊಲ್ಲರಹಟ್ಟಿ ಮುಂತಾದ ಗ್ರಾಮಗಳಲ್ಲಿ ಕೆರೆಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವ ಹಳ್ಳಗಳು 
ಎರಡು ವರ್ಷಗಳಲ್ಲಿ ಮೊದಲ ಬಾರಿ ತುಂಬಿ ಹರಿದವು. ಜನರು ಹಳ್ಳಗಳನ್ನು ನೋಡಿ ಕಣ್ತುಂಬಿಕೊಂಡರು. 
 
ಕಸಬಾ ಹೋಬಳಿಯ ಬಿದರಕೆರೆ, ತೋರಣಗಟ್ಟೆ, ನಿಬಗೂರು. ಬಿಳಿಚೋಡು ಹೋಬಳಿಯ ಪಲ್ಲಾಗಟ್ಟೆ, ಬೆಂಚಿಕಟ್ಟೆ, ಮತ್ತು ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ. ಕೆಲವು ದಿನಗಳ ಹಿಂದೆ ಸೊಕ್ಕೆ ಮತ್ತು ಬಿದರಕೆರೆ ಭಾಗದಲ್ಲಿ  ಮಳೆಯಾಗಿತ್ತು. 
 
ಮಲೇಬೆನ್ನೂರು
ಪಟ್ಟಣದ ಹಾಗೂ ಸುತ್ತಮುತ್ತ ಗುರುವಾರ ಗಾಳಿ ಗುಡುಗು ಸಿಡಿಲು ಸಹಿತ 2 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ವಾತಾವರಣ ತಂಪಾಯಿತು.
ಕಳೆದ ವಾರದಿಂದ ಸುರಿದ ಎರಡನೇ ಮಳೆ ಅಡಿಕೆ ತೆಂಗು ತೋಟದ ಬೆಳೆಗಾರರಿಗೆ ಅನುಕೂಲವಾಗಿದೆ. ಇಂದಿನ ಮಳೆ ವಾರದ ಸಂತೆಗೆ ಅಡ್ಡಿಯಾಯಿತು. 
****
ಜಗಳೂರು: ಸಿಡಿಲಿಗೆ 2 ಎತ್ತು ಬಲಿ
ಜಗಳೂರು:
ತಾಲ್ಲೂಕಿನ ಬುಳ್ಳನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿವೆ.

ಬುಳ್ಳನಹಳ್ಳಿ ಗ್ರಾಮದ ರುದ್ರಮುನಿಯಪ್ಪ ಎಂಬುವವರಿಗೆ ಸೇರಿದ ಎತ್ತುಗಳನ್ನು ಗ್ರಾಮದ ಹೊರವಲಯದಲ್ಲಿದ್ದ ಕಣದ ಚಪ್ಪರದ ಕೆಳಗೆ ಕಟ್ಟಲಾಗಿತ್ತು.
ಒಂದೂವರೆ ತಿಂಗಳಿಂದ ಜೋಡಿ ಎತ್ತುಗಳನ್ನು ₹ 1ಲಕ್ಷ ಕೊಟ್ಟು ಖರೀದಿಸಿ ತಂದಿದ್ದೆ.

ಈಗ ಹೊಲದ ಬೇಸಾಯಕ್ಕೆ ಎತ್ತುಗಳನ್ನು ಇಲ್ಲದಂತಾಗಿಯಿತು ಎಂದು ರೈತ ರುದ್ರಮುನಿ ಹೇಳಿದರು. ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ  ಸ್ಥಳಕ್ಕೆ ಭೇಟಿ ನೀಡಲಿಲ್ಲ.

****
ಮರ ಬಿದ್ದು ಕಾಂಪೌಂಡ್‌ಗೆ ಹಾನಿ
ಹರಿಹರ:
ಗುರುವಾರ ಸಂಜೆ ಬಿರು ಗಾಳಿ ಸಹಿತ ಸುರಿದ ಮಳೆಗೆ ಮರ ವೊಂದು ಮನೆಯ ಕಾಂಪೌಂಡ್‌ ಮೇಲೆ ಮುರಿದು ಬಿದ್ದಿದೆ.

ನಗರದ ಲೇಬರ್ ಕಾಲೊನಿಯ 1ನೇ ಮೇನ್, 2ನೇ ಕ್ರಾಸ್‌ನ ಪ್ರಸಾದ್‌ ಮಹೇಂದ್ರಕರ್ ಅವರ ಮನೆ ಎದುರಿನ ಮೇಫ್ಲವರ್‌ ಮರ ಉರುಳಿ ಬಿದ್ದಿದೆ. ನೀರಿನ ಟ್ಯಾಂಕ್‌ಗೂ  ಹಾನಿಯಾಗಿದೆ. ಮನೆಯ ಗೋಡೆ ಭಾಗಶಃ ಬಿರುಕು ಬಿಟ್ಟಿದೆ.

ADVERTISEMENT

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.