ADVERTISEMENT

ಚಿತ್ರದುರ್ಗ–ಹುಬ್ಬಳ್ಳಿ ಷಟ್ಪಥಕ್ಕೆ ನವೆಂಬರ್‌ನಲ್ಲಿ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 5:41 IST
Last Updated 14 ಜುಲೈ 2017, 5:41 IST

ದಾವಣಗೆರೆ: ಚಿತ್ರದುರ್ಗ–ಹುಬ್ಬಳ್ಳಿ ಚತುಷ್ಪಥ ಹೆದ್ದಾರಿ ಷಟ್ಪಥವಾಗಿ ಪರಿವರ್ತನೆಯಾಗಲಿದ್ದು, ನವೆಂಬರ್‌ ವೇಳೆಗೆ ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ –4ರ ನಿರ್ಮಾಣ ಕಾಮಗಾರಿಯನ್ನು ತಲಾ ₹ 1 ಸಾವಿರ ಕೋಟಿಯಂತೆ ಮೂರು ಪ್ಯಾಕೇಜ್‌ನಲ್ಲಿ ನಿಗದಿಪಡಿಸಲಾಗಿದೆ. ಈಗಾಗಲೇ ಮೂರು ಕಂಪೆನಿಗಳು ಪ್ರತ್ಯೇಕವಾಗಿ ಗುತ್ತಿಗೆ ಪಡೆದುಕೊಂಡಿವೆ ಎಂದು ಅವರು ಹೇಳಿದರು.

ರಸ್ತೆ ಕಾಮಗಾರಿ ಶಂಕುಸ್ಥಾಪನೆ ನರೇಂದ್ರ ಪ್ರಧಾನಿ ಮೋದಿ ಅಥವಾ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಚಿಂತನೆ ಇದೆ.  ಚಿತ್ರದುರ್ಗ, ದಾವಣಗೆರೆ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳ ಸಂಸದರ ಕ್ಷೇತ್ರ ವ್ಯಾಪ್ತಿಗೆ ಕಾಮಗಾರಿ ಒಳಪಡುವುದರಿಂದ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ADVERTISEMENT

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸೋಮಶೇಖರ್ ಮಾತನಾಡಿ, ‘ಪಿಎಂಸಿ ಕಂಪೆನಿ ಚಿತ್ರದುರ್ಗ– ದಾವಣಗೆರೆವರೆಗಿನ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದೆ. ಇರ್ಕಾನ್‌ಗೆ ದಾವಣಗೆರೆ–ಹಾವೇರಿ ಗುತ್ತಿಗೆ ಸಿಕ್ಕಿದೆ. ಹಾವೇರಿ–ಹುಬ್ಬಳ್ಳಿ ಗುತ್ತಿಗೆ ಮಾಂಟೆಕಾರ್ ಕಂಪೆನಿ ಪಡೆದುಕೊಂಡಿದೆ. ಕಾಮಗಾರಿ ಆರಂಭಿಸಿದ
30 ತಿಂಗಳ ಒಳಗೆ ಮುಕ್ತಾಯಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಲ್ಕು ವರ್ಷಗಳಲ್ಲಿ ಚತುಷ್ಪಥದಲ್ಲಿ ಕಂಡುಬಂದ ನ್ಯೂನತೆಗಳನ್ನು ಈಗ ಸರಿಪಡಿಸಲಾಗುವುದು. ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಹೆದ್ದಾರಿ ಮಾರ್ಗದಲ್ಲಿ ವಿದ್ಯುತ್‌ ಟವರ್‌, ಕುಡಿಯುವ ನೀರಿನ ಪೈಪ್‌ಲೈನ್‌ ಸ್ಥಳಾಂತರ ಕೆಲಸಗಳು ಆಗಬೇಕಾಗಿವೆ. ಈ ಬಗ್ಗೆ ಕೆಪಿಟಿಸಿಎಲ್‌, ಬೆಸ್ಕಾಂ, ನೀರಾವರಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಸಂಸದರು ಮಾಹಿತಿ ಪಡೆದುಕೊಂಡರು.

ಆನಗೋಡು, ಕೆ.ಕಲಪನಹಳ್ಳಿ, ವಿದ್ಯಾನಗರ–ಬನಶಂಕರಿ ಬಡಾವಣೆ, ಹಳೇ ಕುಂದವಾಡ, ಹಳೇಬಾತಿ, ಹನಗವಾಡಿ ಸಮೀಪ ಸೇವಾ ರಸ್ತೆ ನಿರ್ಮಿಸಬೇಕು. ಕೆ.ಕಲಪನಹಳ್ಳಿ ಬಳಿ, ಶಿರಮಗೊಂಡನಹಳ್ಳಿ, ಶಿವಮೊಗ್ಗ–ಹರಿಹರ ರಸ್ತೆಯ ಬಳಿ ಹನಗವಾಡಿ ಬಳಿ ಇರುವ ಪಾಸಿಂಗ್‌ ಅಂಡರ್‌ಬ್ರಿಜ್‌ಗಳನ್ನು ಸಂಚಾರಕ್ಕೆ ಸುಗಮವಾಗಿ ಮಾರ್ಪಡಿಸಬೇಕು ಎಂದು ಸಂಸದರು, ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲೆಲ್ಲಿ ಫ್ಲೈಓವರ್‌ ಮತ್ತು ಪಾಸಿಂಗ್‌ ಅಂಡರ್‌ಬ್ರಿಜ್‌ ಜತೆ ಸರ್ವಿಸ್‌ ರಸ್ತೆಗಳಲ್ಲಿ ಇರುವ ಸಮಸ್ಯೆಗಳನ್ನು ಗುರುತಿಸಲಾಗಿದೆ. ಕಾಮಗಾರಿ ಆರಂಭಗೊಳ್ಳುವ ಮುನ್ನವೇ ಷಟ್ಪಥದ ಪ್ರಮುಖ ಮತ್ತು ಅಪಘಾತ ವಲಯಗಳಲ್ಲಿ ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರ ಜತೆ ಸಚಿವರು, ಶಾಸಕರು ಸೇರಿದಂತೆ ಜನ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಬೇಡಿಕೆಗಳಿಗೆ ಅನುಗುಣವಾಗಿ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರು ಮಾಹಿತಿ ನೀಡಿದರು.

ಹದಡಿ ರಸ್ತೆಯ ಶಿರಮಗೊಂಡನಹಳ್ಳಿ ಪಾಸಿಂಗ್‌ ಅಂಡರ್‌ಬ್ರಿಜ್‌ ಬಳಿ ವೃತ್ತವೊಂದನ್ನು ನಿರ್ಮಿಸಲಾಗುವುದು. ಅಲ್ಲದೇ, ಅಲ್ಲಿ ಒನ್‌ ವೇ ಮಾಡಲಾಗುವುದು. ವಿದ್ಯುತ್‌ ಟವರ್‌, ಪೈಪ್‌ಲೈನ್‌ ಸ್ಥಳಾಂತರದ ಬಗ್ಗೆ ವಿವಿಧ ಇಲಾಖೆಗಳ ಜತೆ ಜಂಟಿ ಸಮೀಕ್ಷೆ ನಡೆಸಬೇಕಾಗಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.